ಬಸವನಬಾಗೇವಾಡಿಯಲ್ಲಿ ವಿವೇಕ ಬ್ರಿಗೇಡ್ ಸಂಘಟನೆಯ ಮುಖಂಡರಿಂದ ತಹಸೀಲ್ದಾರಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮತಕ್ಷೇತ್ರದ ಕೊಲ್ಹಾರ ತಾಲೂಕಿನ ಕೂಡಗಿ ಎನ್.ಟಿ.ಪಿ.ಸಿ.ಯಿಂದ ಹೊರಹೋಗುವ ಬೂದಿ ತುಂಬಿದ ವಾಹನಗಳಿಂದ ವಾಯು ಮಾಲಿನ್ಯವನ್ನು ತಡೆಗಟ್ಟುವಂತೆ ಆಗ್ರಹಿಸಿ ವಿವೇಕ ಬ್ರಿಗೇಡ್ ಸಂಘಟನೆಯ ಮುಖಂಡರು ಸೋಮವಾರ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಅವರು ಸಲ್ಲಿಸಿದ ಮನವಿಯಲ್ಲಿ ಕೂಡಗಿ ಎನ್.ಟಿ.ಪಿ.ಸಿ. ವಿದ್ಯುತ್ ಸ್ಥಾವರ ಇದೆ. ಈ ಸ್ಥಾವರದಲ್ಲಿ ಕಲ್ಲಿದ್ದಲನ್ನು ಸುಟ್ಟು ನಂತರ ಅದರಿಂದ ಬರುವ ಬೂದಿಯನ್ನು ಸ್ಥಾವರ ಟ್ಯಾಂಕರ್ ಮೂಲಕ ಬೇರೆ ಬೇರೆ ಕಡೆ ಕಾರ್ಖಾನೆಗಳಿಗೆ ಹೋಗುತ್ತಿದೆ. ಬಸವನಬಾಗೇವಾಡಿ ಪಟ್ಟಣದ ಮೂಲಕ ಹಾದು ಹೋಗುವ ಈ ವಾಹನಗಳಿಂದ ಪಟ್ಟಣದಲ್ಲಿ ತುಂಬಾ ವಾಯು ಮಾಲಿನ್ಯವಾಗುತ್ತಿದೆ. ಇದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದೀಗ ಚಳಿಗಾಲ ಮಿತಿಮೀರಿದ್ದರಿಂದಾಗಿ ಹೆಚ್ಚು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇಂತಹದರಲ್ಲಿ ಬೂದಿ ತುಂಬಿದ ಈ ಟ್ಯಾಂಕರ್ ವಾಹನಗಳು ಹಾದು ಹೋಗುವಾಗ ಹಾರುವ ಬೂದಿಯ ಮೂಲಕ ಅಸ್ತಮಾ ಮತ್ತು ಉಸಿರಾಟದ ತೊಂದರೆ ಇರುವ ಜನರಿಗೆ ಆರೋಗ್ಯ ಹಾನಿ ಉಂಟು ಮಾಡುವ ಸಾಧ್ಯತೆಯಿದೆ. ಕೆಲವೊಂದು ಟ್ಯಾಂಕರ್ ಹೊರತುಪಡಿಸಿ ತೆರೆದ ಟ್ರಕ್ ಮತ್ತು ಟಿಪ್ಪರ್ ವಾಹನಗಳಿಂದ ಈ ಕಲ್ಲಿದ್ದಲಿನ ಪುಡಿಯನ್ನು ತೆಗೆದುಕೊಂಡು ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬೂದಿ ಗಾಳಿಯಲ್ಲಿ ಹಾರಿ ಪಟ್ಟಣದಲ್ಲಿ ಸಂಚಾರ ಮಾಡುವ ಜನರಿಗೆ, ವ್ಯಾಪಾರಸ್ಥರ ಮೇಲೆ ಬರುತ್ತಿದೆ. ಕೂಡಲೇ ತಹಸೀಲ್ದಾರರು ತೆರೆದ ವಾಹನಗಳ ಮೂಲಕ ಈ ಬೂದಿ ಸಾಗಿಸುವುದನ್ನು ನಿಷೇಧಿಸಬೇಕು. ಬೂದಿ ತುಂಬಿದ ಟ್ಯಾಂಕರ ಹೊರ ಮೈ ಮೇಲೆ ಅಂಟಿರುವ ಬೂದಿಯನ್ನು ಅಲ್ಲಿಯೇ ಸ್ವಚ್ಛಗೊಳಿಸಿ ನಂತರ ವಾಹನಗಳನ್ನು ಸ್ಥಾವರದಿಂದ ಹೊರ ಬಿಡುವಂತೆ ಕ್ರಮ ತೆಗೆದುಕೊಳ್ಳಲು ಎನ್.ಟಿ.ಪಿ.ಸಿ ವಿದ್ಯುತ್ ಸ್ಥಾವರ ಅಧಿಕಾರಿಗಳಿಗೆ ತಿಳಿಸಬೇಕೆಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವಿವೇಕ ಬ್ರಿಗೇಡ್ ಮುಖ್ಯಸ್ಥ ವಿನುತ ಕಲ್ಲೂರ, ಪೃಥ್ವಿರಾಜ ನಾಯ್ಕೋಡಿ,
ರವಿಗೌಡ ಚಿಕ್ಕೊಂಡ, ಮಹಾಂತೇಶ ಚಕ್ರವರ್ತಿ, ಯಲ್ಲಪ್ಪ ನಾಟೀಕಾರ, ಸತೀಶ ಕ್ವಾಟಿ, ಮಲ್ಲು ಬನಾಸಿ, ಶಿವಾನಂದ ನಾಗರಾಳ, ರವಿ ಪತ್ತಾರ, ಬಸವರಾಜ ಚಾಂದಕೋಟೆ ಇದ್ದರು.

