ಉದಯರಶ್ಮಿ ದಿನಪತ್ರಿಕೆ
ಚಡಚಣ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಶಾಮನೂರ ಶಿವಶಂಕರಪ್ಪ ಮತ್ತು ವಚನ ಶಿಲಾ ಮಂಟಪದ ರೂವಾರಿಗಳು ಆದ ಇಂಗಳೇಶ್ವರ ವಿರಕ್ತಮಠದ ಶ್ರೀ ಮನಿಪ್ರ ಚೆನ್ನಬಸವ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದರ ನಿಮಿತ್ಯ ಚಡಚಣ ಪಟ್ಟಣದಲ್ಲಿ ವೀರಶೈವ ಮಹಾಸಭಾದ ವತಿಯಿಂದ ನುಡಿನಮನ ಕಾರ್ಯಕ್ರಮ ಸೋಮವಾರ ಪಟ್ಟಣದ ವೀರಕ್ತ ಮಠದಲ್ಲಿ ಜರುಗಿತು.
ವೀರಶೈವ ಲಿಂಗಾಯತ ಮಹಾಸಭಾದ ಚಡಚಣ ತಾಲೂಕ ಘಟಕದ ಗೌರವ ಅಧ್ಯಕ್ಷರು ಮನಿಪ್ರ ಷಡಕ್ಷರಿ ಮಹಾಸ್ವಾಮಿಗಳು ಮಾತನಾಡಿ ಚೆನ್ನಬಸವ ಮಹಾಸ್ವಾಮಿಗಳು ಕಾಯಕ ಮತ್ತು ದಾಸೋಹದ ಸಿದ್ಧಾಂತವನ್ನು ತಮ್ಮ ಕೊನೆ ಉಸಿರು ಇರುವವರೆಗೂ ಪಾಲಿಸಿಕೊಂಡು ಬಂದವರು ಅವರ ನೆನಪು ಸದಾ ನಮಗೆ ಶ್ರೀರಕ್ಷೆ ಎಂದರು.
ಅಧ್ಯಕ್ಷ ಸಂಗಮೇಶ ಅವಜಿ ಮಾತನಾಡಿ, ಶಾಮನೂರ ಶಿವಶಂಕರಪ್ಪ ನಮ್ಮನ್ನ ಅಗಲಿದ್ದು ನಮ್ಮ ಸಮಾಜಕ್ಕೆ ತುಂಬಲಾರದ ನಷ್ಠ ಆಗಿದೆ, ನೇರ ಮಾತುಗಳ ಮೂಲಕ ಕರ್ನಾಟಕ ರಾಜಕಾರಣದಲ್ಲಿ ಅಜಾತಶತ್ರುಗಳಾಗಿ ದಾವಣಗೆರೆ ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿ ಮಾಡುವದರ ಮೂಲಕ ಜನ ಸಾಮಾನ್ಯರ ಬೆಳಕಾಗಿದ್ದರು ಎಂದರು.
ಪ್ರೊ ರವಿ ಅರಳಿ, ವೀರಶೈವ ಲಿಂಗಾಯತ ಮಹಾಸಭಾ ಸದಸ್ಯ ಗಂಗಾಧರ ಪಾವಲೆ ಮಾತನಾಡುತ್ತ, ದಾವಣಗೆರೆಗೆ ದೊಡ್ಡ ಖ್ಯಾತಿ ತಂದ ಶಾಮನೂರ ಶಿವಶಂಕರಪ್ಪ ನವರು ಒಬ್ಬ ಕಾರ್ಮಿಕ ಮುಖಂಡರಾಗಿ ಬೆಳದು ದೀನ ದಲಿತರ, ಬಡವರ ಕಾರ್ಮಿಕರ ಆಶಾಕಿರಣವಾಗಿದ್ದರು ಇವರ ನಿಧನ ವೀರಶೈವ ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟ. ಮತ್ತು ಚೆನ್ನಬಸವ ಸ್ವಾಮೀಜಿಗಳ ಲಿಂಗೈಕ್ಯರಾದದ್ದು ಬಹಳ ದುಃಖ ತಂದಿದೆ, ವಚನಗಳನ್ನು ಅಜರಾಮರ ಮಾಡುವದರ ಮೂಲಕ ಬಸವ ಜನ್ಮಭೂಮಿಗೆ ಹೆಸರು ತಂದವರು ಎಂದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭೆ ಉಪಾಧ್ಯಕ್ಷೆ ವಿದ್ಯಾ ಕಲ್ಯಾಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ಆರ್ ಪಿ ಬಗಲಿ, ಪ್ರೊ ಮನೋಜ ಕಟಗೇರಿ ಮುಂತಾದವರು ಉಪಸ್ಥಿತರಿದ್ದರು.

