ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ಕೆಲ ಗ್ರಾಮಗಳನ್ನು ಹೊರತು ಪಡಿಸಿದರೆ ಬಹುತೇಕ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಕಾರಹುಣ್ಣಿಮೆಯಂಗವಾಗಿ ಸಂಜೆ ಎತ್ತುಗಳನ್ನು ಓಡಿಸುವ ಮೂಲಕ ಕರಿ ಹರಿದು ರೈತಬಾಂಧವರು, ಜನರು ಸಂಭ್ರಮಿಸಿದರು.
ತಾಲೂಕಿನ ಕಾನ್ನಾಳ, ಸೋಲವಾಡಗಿ, ಹೂವಿನಹಿಪ್ಪರಗಿ, ನರಸಲಗಿ, ಕುದರಿಸಾಲವಾಡಗಿ, ನಾಗೋಡ,ಬೂದಿಹಾಳ, ಯರನಾಳ, ನಂದಿಹಾಳ ಪಿಯು, ಹುಣಶ್ಯಾಳ ಪಿಬಿ, ದಿಂಡವಾರ, ಇವಣಗಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಕಾರಹುಣ್ಣಿಮೆಯಂಗವಾಗಿ ಎತ್ತುಗಳನ್ನು ಓಡಿಸುವ ಮೂಲಕ ಕರಿ ಹರಿದು ಜನರು ಸಂಭ್ರಮಿಸಿದರು.
ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಕಾರಹುಣ್ಣಿಮೆಯಂಗವಾಗಿ ಕರಿ ಹರಿಯುವ ಸಂಪ್ರದಾಯವಿಲ್ಲ. ಕಾರಹುಣ್ಣಿಮೆ ದಿನದಂದು ಮಳೆ-ಬೆಳೆ ಕುರಿತು ಭವಿಷ್ಯ ಕೇಳಲು ಗುಂಡು ಎತ್ತುವ ಸಂಪ್ರದಾಯ ಮಾತ್ರವಿದೆ. ಸಂಪ್ರದಾಯದಂತೆ ಶುಕ್ರವಾರ ಸಂಜೆ ಮಳೆ-ಬೆಳೆ ಕುರಿತು ಗುಂಡು ಎತ್ತುವ ಮೂಲಕ ರೈತರು ಭವಿಷ್ಯ ತಿಳಿದುಕೊಂಡರು. ಮನಗೂಳಿ ಪಟ್ಟಣದ ಮಾಮಲ್ಲಪ್ಪ ತಪಶೆಟ್ಟಿ ಅವರು, ನಮ್ಮಲ್ಲಿ ಮೊದಲಿನಿಂದಲೂ ಕರಿ ಹರಿಯುವ ಸಂಪ್ರದಾಯವಿಲ್ಲ. ಕಾರಹುಣ್ಣಿಮೆಯ ದಿನದಂದು ಮಳೆ-ಬೆಳೆ ಹೇಗಾಗುತ್ತದೆ ಎಂದು ತಿಳಿದುಕೊಳ್ಳಲು ಏಳು ಜನರು ಸೇರಿ ಹಿರಿಯರ ಕಾಲದಿಂದಲೂ ಇರುವ ಗುಂಡನ್ನು ಎತ್ತಿ ತಿಳಿದುಕೊಳ್ಳುತ್ತಾರೆ. ಗುಂಡು ಸರಳವಾಗಿ ಎತ್ತಿದರೆ ಮಳೆ-ಬೆಳೆ ಉತ್ತಮ, ಅರ್ಧ ಮಾತ್ರ ಎತ್ತಿದರೆ ಅಲ್ಪಸ್ವಲ್ಪ, ಗುಂಡು ಉರುಳಿದರೆ ಸರಿಯಾಗಿ ಆಗುವುದಿಲ್ಲ ಎಂದು ತಿಳಿದುಕೊಳ್ಳುತ್ತೇವೆ. ಈ ಸಲ ಮೆಣಸಿನಕಾಯಿ, ತೊಗರಿ ಬೆಳೆ ಕುರಿತು ಕೇಳಿ ಗುಂಡು ಎತ್ತಿದಾಗ ಗುಂಡು ಉರುಳಿತು. ಇದು ಈ ಬೆಳೆ ಅಷ್ಟಾಗಿ ಬೆಳೆಯುವುದಿಲ್ಲ ಎಂದು ತಿಳಿದುಕೊಳ್ಳಬಹುದು. ಮಳೆಯ ಕುರಿತು ಕೇಳುವಾಗ ಉತ್ತರಿ, ಮಗಿ ಮಳೆ ಕುರಿತು ಕೇಳುವಾಗ ಸಹ ಅದೇ ರೀತಿಯಲ್ಲಿ ಆಯಿತು ಎಂದು ಹೇಳಿದರು.
ತಾಲೂಕಿನ ಹತ್ತರಕಿಹಾಳ ಗ್ರಾಮದಲ್ಲಿ ಕರಿ ಹರಿಯುವ ಸಂಪ್ರದಾಯದ ಬದಲಾಗಿ ಗ್ರಾಮದಲ್ಲಿ ಎತ್ತುಗಳನ್ನು ಮೆರವಣಿಗೆ ಮಾಡುವ ಸಂಪ್ರದಾಯವಿದೆ. ಇಂದು ಎತ್ತುಗಳ ಮೆರವಣಿಗೆ ಆಗಿದೆ ಎಂದು ಗ್ರಾಮದ ಈರಣ್ಣ ಕಲ್ಯಾಣಿ ಹೇಳಿದರು.
ಉಕ್ಕಲಿ ಗ್ರಾಮದ ರಾಹುಲ ಕಲಗೊಂಡ ಅವರು ಗ್ರಾಮದಲ್ಲಿ ಇಂದು ಕಾರಹುಣ್ಣಿಮೆಯನ್ನು ಆಚರಿಸಲಾಯಿತು. ಈಚೆಗೆ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ ಜಾನುವಾರುಗಳನ್ನು ಓಡಿಸುವ ಬದಲಾಗಿ ಅವುಗಳನ್ನು ಮೆರವಣಿಗೆ ಮಾಡುವ ಮೂಲಕ ಗ್ರಾಮದಲ್ಲಿ ಕಾರಹುಣ್ಣಿಮೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ತಾಲೂಕು ಜನಪದ ಪರಿಷತ್ತಿನ ಅಧ್ಯಕ್ಷ ದೇವೇಂದ್ರ ಗೋನಾಳ ಅವರು, ಕಾರಹುಣ್ಣಿಮೆಯನ್ನು ಜೇಷ್ಠ ನಕ್ಷತ್ರದಂದು ಮೊದಲಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಈ ನಕ್ಷತ್ರ ಇಂದು ಆರಂಭವಾಗಿ ನಾಳೆ(ಶನಿವಾರ) ಬೆಳಗ್ಗೆಯವರೆಗೆ ಮಾತ್ರ ಇರುತ್ತದೆ. ಶನಿವಾರ ಕರಿ ಹರಿಯಬಾರದು ಎಂಬುವದು ಹಿರಿಯರು ಹೇಳುತ್ತಾರೆ.ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶುಕ್ರವಾರವೇ ಕಾರಹುಣ್ಣಿಮೆಯನ್ನು ಆಚರಿಸಲಾಗಿದೆ. ನಮ್ಮ ಗ್ರಾಮ ನರಸಲಗಿಯಲ್ಲಿಯೂ ಇಂದೇ ಕರಿ ಹರಿಯುವ ಸಂಪ್ರದಾಯ ಮಾಡಲಾಗಿದೆ ಎಂದು ಹೇಳಿದರು.
ಬಸವನಬಾಗೇವಾಡಿ ಪಟ್ಟಣ, ಕಣಕಾಲ, ಟಕ್ಕಳಕಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಇಂದು ಶನಿವಾರ ಕಾರಹುಣ್ಣಿಮೆಯಂಗವಾಗಿ ಸಂಜೆ ಎತ್ತುಗಳನ್ನು ಓಡಿಸಿ ಕರಿ ಹರಿಯಲಾಗುತ್ತದೆ.
Subscribe to Updates
Get the latest creative news from FooBar about art, design and business.
Related Posts
Add A Comment

