ಆಲಮಟ್ಟಿಯಲ್ಲಿ ಪೊಲೀಸರ ಯೋಗ ದಿನಾಚರಣೆ
ಆಲಮಟ್ಟಿ: ಇಲ್ಲಿನ ಆಲಮಟ್ಟಿ ಜಲಾಶಯದ ಬಲಭಾಗದಲ್ಲಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಪೊಲೀಸರ ವಸಾಹತುವಿನಲ್ಲಿ ಶುಕ್ರವಾರ ಯೋಗ ದಿನಾಚರಣೆ ಆಚರಿಸಲಾಯಿತು.
ಯೋಗ ಗುರು ಗಂಗಾಧರ ಹಿರೇಮಠ ೭೦ ಕ್ಕೂ ಪೊಲೀಸರಿಗೆ ಯೋಗದ ವಿವಿಧ ಆಸನಗಳನ್ನು ಸಂಗೀತದ ಲಯದೊಂದಿಗೆ ಮಾಡಿಸಿದರು.
ಪ್ರತಿಯೊಂದು ಯೋಗವನ್ನು ಮಾಡಿಸಿ ಅದನ್ನು ಮಾಡುವ ಬಗೆ ಹಾಗೂ ಅದರಿಂದಾಗುವ ಆರೋಗ್ಯಕರ ಲಾಭದ ಬಗ್ಗೆ ವಿವರಿಸಿದರು. ದೈನಂದಿನ ಕಾರ್ಯದ ಒತ್ತಡವನ್ನು ತಡೆಗಟ್ಟಿ ಖುಷಿಯಿಂದ ಕಾರ್ಯನಿರ್ವಹಿಸಲು, ಒತ್ತಡ ನಿಯಂತ್ರಿಸಲು ಅಗತ್ಯ ವಿವಿಧ ಯೋಗಗಳ ಪ್ರಕಾರಗಳು ಹೇಳಿ ಪ್ರಾಣಾಯಾಮ ಮಾಡಿಸಿದರು.
ಕೆಎಸ್‌ಐಎಸ್‌ಎಪ್ ನ ಅಸಿಸ್ಟೆಂಟ್ ಕಮಾಂಡೆಂಟ್ ಅರುಣ ಡಿ.ವಿ. ಹಾಗೂ ಆಲಮಟ್ಟಿ ಜಲಾಶಯದ ಭದ್ರತೆಯ ಮುಖ್ಯಸ್ಥ ಇನ್ಸಪೆಕ್ಟರ್ ಶಿವಲಿಂಗ ಕುರೆಣ್ಣವರ ಮಾತನಾಡಿ, ಯೋಗ್ಯವಾದ್ದನ್ನು ಗಮನದಲ್ಲಿಡುವುದೇ ಯೋಗ. ಮನಸ್ಸನ್ನು ಮೌನವಾಗಿಟ್ಟುಕೊಳ್ಳುವುದೇ ಯೋಗ, ದಿನನಿತ್ಯದ ಚೈತನ್ಯದಾಯಕ ಬದುಕು ಸಾಗಿಸಲು ನಿತ್ಯ ಕೆಲ ಸಮಯವಾದರೂ ಯೋಗ ಅಗತ್ಯವಿದೆ. ಪೊಲೀಸರಿಗೆ ಏಕತಾನತೆ ಹೋಗಿ, ಚೈತನ್ಯ ಮೂಡಿಸಲು ಯೋಗ ಶಿಬಿರ ಏರ್ಪಡಿಸಲಾಗಿದ್ದು, ಇದರ ಸದುಪಯೋಗ ಪಡೆಯಬೇಕೆಂದರು.
ಪೊಲೀಸರು ತಾವಲ್ಲದೇ, ತಮ್ಮ ಇಡೀ ಕುಟುಂಬಕ್ಕೂ ಯೋಗದ ಮಹಿಮೆ ತಿಳಿಸಿ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪಿಎಸ್‌ಐಗಳಾದ ಅಹ್ಮದ್ ಸಂಗಾಪೂರ, ಪ್ರಶಾಂತ ಸಜ್ಜನ ಸೇರಿದಂತೆ ವಿವಿಧ ಪೊಲೀಸರು ಭಾಗಿಯಾಗಿದ್ದರು.
ಯೋಗ ದಿನಾಚರಣೆಯ ನಂತರ ಆರೋಗ್ಯಕರ ಪೇಯ, ಲಘು ಆಹಾರ ನೀಡಲಾಯಿತು.
ಆಲಮಟ್ಟಿ ಜಲಾಶಯದ ಬಲಭಾಗದ ಸೀತಿಮನಿ ಗುಡ್ಡದಲ್ಲಿರುವ ಕೆಎಸ್‌ಐಎಸ್‌ಎಪ್ ಪೊಲೀಸ್ ವಸಾಹತುವಿನಲ್ಲಿ ಯೋಗಗುರು ಗಂಗಾಧರ ಹಿರೇಮಠ ನೇತೃತ್ವದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು.

