ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಬಹುತೇಕ ಸೋಷಿಯಲ್ ಮೀಡಿಯಾ ಗ್ರೂಪ್ ಗಳಲ್ಲಿ ಹರಿದಾಡುತ್ತಿರುವ ಕಳ್ಳರ ಹಾವಳಿಯ ಸಿಸಿಟಿವ್ಹಿ ಫೂಟೇಜ್‌ನ ವಿಡಿಯೊ ಪಟ್ಟಣದ ಜನರಲ್ಲಿ ಭಯ ಮತ್ತು ಆತಂಕ ಹುಟ್ಟಿಸಿದೆ.
ದಿ.20 ರಂದು ರಾತ್ರಿ 3.16 ಗಂಟೆಗೆ ಸಿಸಿ ಟಿವಿ ಫೂಟೇಜ್‌ನಲ್ಲಿ 6 ಕಳ್ಳರು ಪಟ್ಟಣದ ಶಿವಾಜಿ ವೃತ್ತದಲ್ಲಿ ಹತ್ತಳ್ಳಿ ಗ್ರಾಮದ ರಸ್ತೆಗೆ ಓಡಿ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಇವರೆಲ್ಲರೂ ಕಳ್ಳರಾಗಿದ್ದು, ಪೊಲೀಸ್ ವಾಹನದ ಸದ್ದು ಕೇಳಿ ಓಡಿ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಎರಡು ದಿನಗಳ ಹಿಂದೆ ಮರಡಿಯ ನೇಕಾರ ಕಾಲೊನಿಯಲ್ಲಿಯ 3 ಮನೆಗಳ ಕಳ್ಳತನ ನಡೆದಿದೆ ಮತ್ತು ಇಂದಿರಾನಗರದಲ್ಲಿ ಒಂದು ಮನೆ ಕಳ್ಳತನವಾಗಿವೆ, ಸಮೀಪದ ಶಿರಾಡೋಣ ಗ್ರಾಮದ ದೇವಸ್ಥಾನದಲ್ಲಿಯ ವಸ್ತುಗಳನ್ನು ಕಳ್ಳರು ಕದ್ದೋಯ್ದಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಈ ಮೊದಲು ಮರಡಿ ಮೇಲಿನ ಆದರ್ಶ ನಗರ ಮತ್ತು ಸಂಗಮೇಶ್ವರ ನಗರದ ಮಧ್ಯದಲ್ಲಿ ಇರುವ ಮನೆಯಲ್ಲಿ ನ.25 ರಂದು ಕಳ್ಳರು ತಮ್ಮ ಕೈಚಳಕ ತೋರಿಸಿದ್ದರು, ಆದರೆ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಪೋಲೀಸರು ಬಂದು ಕಳ್ಳನನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೋಟರ್ ಸೈಕಲ್ ಕೂಡಾ ಹಿಡಿದು ವಶಪಡಿಸಿಕೊಂಡು ಹೋಗಿದ್ದರು. ಆದರೂ ಅದರ ಬಗ್ಗೆ ಪೋಲೀಸ್ ಅಧಿಕಾರಿಗಳು ಸಾರ್ವಜನಿಕವಾಗಿ ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿವೆ ಎಂದು ಸಾರ್ವಜನಿಕರು ಆತಂಕದಲ್ಲಿ ಇದ್ದು, ಪೋಲೀಸರು ಈ ನಡೆಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಇನ್ನು ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಾಲಯದ ಹಿಂದಿನ ಮನೆ ಕಳ್ಳತನ ವಾಗಿದ್ದು ಅಲ್ಲಿಯೂ ಕೂಡ ಚೆನ್ನಾಭರಣ ಕದ್ದೊಯ್ದಿದ್ದ ಪ್ರಕರಣ ಕೂಡಾ ಪೋಲಿಸರು ಸೇರಿಸದೆ ಇರುವದು ಮತ್ತು ಶೀಘ್ರವೆ ಕಳ್ಳರ ಬಗ್ಗೆ ಇರುವ ಮಾಹಿತಿ ಮತ್ತು ಕಳ್ಳತನದ ಸಂದರ್ಭದಲ್ಲಿ ಸಾರ್ವಜನಿಕರು ಏನು ಮಾಡಬೇಕು ಎಂಬಿತ್ಯಾದಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕೆಂದು ಪೋಲೀಸ್ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಈತ್ತಿಚೆಗೆ ಎಸ್.ಬಿ.ಆಯ್.ರಾಷ್ಟ್ರೀಕೃತ ಬ್ಯಾಂಕ್ ದರೋಡೆ ನಡೆದು ಅಪಾರ ಪ್ರಮಾಣದ ಚಿನ್ನದ ಆಭರಣ ಹಾಗೂ ಹಣ ದರೋಡೆಕೋರರು ಕದ್ದೊಯ್ದ ಪ್ರಕರಣ ಜನಸಾಮಾನ್ಯರ ಮನದಲ್ಲಿ ಇರುವ ಭಯ ಮಾಸುವ ಮುನ್ನವೆ ಸುಮಾರು 6 ಜನರೊಂದಿಗೆ ಗುಂಪಾಗಿ ಕಳ್ಳತನ ಮಾಡುದನ್ನು ನೋಡಿದರೆ ಇವರ ಹತ್ತಿರ ಆಯುಧಗಳು ಇದ್ದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ಭಯದಲ್ಲಿ ಇದ್ದಾರೆ.
ಇನ್ನು ಪೋಲೀಸ್ ಠಾಣಾಧಿಕಾರಿ ಪಿಎಸ್‌ಐ ಸೋಮೇಶ ಗೆಜ್ಜಿ ಅವರನ್ನು ಸಂಪರ್ಕಿಸಲಾಗಿ ಚಡಚಣ ಪೋಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ಈಗಾಗಲೆ ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೆವೆ ಎಂದ ಅವರು, ಮೊದಲಿದ್ದ ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಇದ್ದಾರೆ. ಆದರೀಗ ಪಟ್ಟಣ ಸಾಕಷ್ಟು ಬೆಳೆದಿದೆ. ಚಡಚಣ ಠಾಣೆಗೆ ಹೆಚ್ಚಿನ ಸಿಬ್ಬಂದಿಯವರ ಅವಶ್ಯಕತೆ ಇದೆ. ಕಳ್ಳತನದ ಬಗ್ಗೆ ಸಾರ್ವಜನಿಕರು ಠಾಣೆಗೆ ಬಂದು ದೂರು ದಾಖಲಿಸುವಂತೆ ಹೇಳಿದರು.
ನ.25 ರಂದು ನಡೆದ ಕಳ್ಳತನ ಯತ್ನದಲ್ಲಿಯ ಮನೆಯ ಮಾಲಿಕರು ಇಲ್ಲಿಯವರೆಗೆ ದೂರು ದಾಖಲಿಸಿಲ್ಲ ಎಂದರು.ಡಿ.20 ರಂದು ನಡೆದ ಕಳ್ಳತನದ ವಿಷಯವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಮಾತನಾಡಿಸಿದರೆ ತನಿಖೆ ನಡೆದಿದೆ. ಸಿಸಿ ಟಿವಿಯಲ್ಲಿ ಇರುವವರು ಯಾರೆಂದು ಇನ್ನೂ ಗೊತ್ತಾಗಿಲ್ಲ ಶೀಘ್ರದಲ್ಲಿಯೆ ಬಂಧಿಸಲಾಗುವದು ಎಂದರು.
