ಸೈನಿಕ ಶಾಲೆ ಬಿಜಾಪುರ ಸೈಬರ್ ವಾರ್ಫೇರ್ ಮತ್ತು ಸೈಬರ್ ಸೆಕ್ಯುರಿಟಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಂಗ್ ಕಮಾಂಡರ್ ಸುಮನ್ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸೈನಿಕ ಶಾಲೆ ಬಿಜಾಪುರದಲ್ಲಿ 22ನೇ ಡಿಸೆಂಬರ್ 2025, ಸೋಮವಾರ ರಂದು ಸೈಬರ್ ವಾರ್ಫೇರ್ ಮತ್ತು ಸೈಬರ್ ಸೆಕ್ಯುರಿಟಿ ಕುರಿತು ಉಪನ್ಯಾಸ ಕಾರ್ಯಕ್ರಮ ನೆರವೇರಿತು.
ಬಿಜಾಪುರದ ಸೈನಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಸೈಬರ್ ವಾರ್ಫೇರ್ ಮತ್ತು ಸೈಬರ್ ಸೆಕ್ಯುರಿಟಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕಮಾಂಡಿಂಗ್ ಆಫೀಸರ್, ವಿಂಗ್ ಕಮಾಂಡರ್ ಸುಮನ್ ಅಧಿಕಾರಿ ಯವರು ಉಪನ್ಯಾಸ ನೀಡಿದರು.
ಸೈಬರ್ ವಾರ್ಫೇರ್ (Cyber Warfare) ಎಂದರೆ ರಾಷ್ಟ್ರಗಳು ಅಥವಾ ಸಂಘಟನೆಗಳು ಪರಸ್ಪರರ ಕಂಪ್ಯೂಟರ್ ವ್ಯವಸ್ಥೆಗಳನ್ನು ಗುರಿಯಾಗಿಸಿ ಮಾಡುವ ದಾಳಿ (ವೈರಸ್, ಡಿನಯಲ್-ಆಫ್-ಸರ್ವಿಸ್) ಮೂಲಕ ಮೂಲಸೌಕರ್ಯಗಳಿಗೆ ಹಾನಿ ಅಥವಾ ಅಡ್ಡಿಪಡಿಸುವುದು, ಹಾಗೂ ಸೈಬರ್ ಸೆಕ್ಯುರಿಟಿ (Cybersecurity) ಎಂದರೆ ಡಿಜಿಟಲ್ ವ್ಯವಸ್ಥೆಗಳು, ನೆಟ್ವರ್ಕ್ಗಳು ಮತ್ತು ಡೇಟಾವನ್ನು ಸೈಬರ್ ದಾಳಿಗಳಿಂದ ರಕ್ಷಿಸುವ ತಂತ್ರಜ್ಞಾನ, ಪ್ರಕ್ರಿಯೆ ಮತ್ತು ನೀತಿಗಳ ಸಮೂಹವಾಗಿದ್ದು ಇಂದಿನ ದಿನಮಾನದಲ್ಲಿ ಸೈಬರ್ ಅಪರಾಧಗಳ ಹಾವಳಿ ಹೆಚ್ಚಾಗಿದ್ದು ಸರ್ವರೂ ಅಂತರ್ಜಾಲದ ಬಳಕೆಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಣೆ ಮಾಡಬೇಕು ಎಂದು ಅವರು ಹೇಳಿದರು. ಸಾಮಾಜಿಕ ಮಾಧ್ಯಮದಲ್ಲಿ ಪಿಐಒ ಅನ್ನು ಹೇಗೆ ಗುರುತಿಸಬೇಕು ಎಂಬುದರ ಕುರಿತು ಮಾಹಿತಿ ನೀಡಿದರು. ಸೈಬರ್ ವಾರ್ಫೇರ್ ಮತ್ತು ಸೈಬರ್ ಸೆಕ್ಯುರಿಟಿ ಬದಲಾಗುತ್ತಿರುವ ಸ್ವರೂಪ, ಸೈಬರ್ ಬೆದರಿಕೆಗಳು, ಡೇಟಾ ಸುರಕ್ಷತೆ, ಸಾಮಾಜಿಕ ಮಾಧ್ಯಮದ ಸುರಕ್ಷಿತ ಬಳಕೆ ಮತ್ತು ರಾಷ್ಟ್ರೀಯ ಸೈಬರ್ ಭದ್ರತೆಯಲ್ಲಿ ಯುವಕರ ಪಾತ್ರದ ಕುರಿತು ವಿವರಿಸಿದರು. ಅವರು ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಜವಾಬ್ದಾರಿಯುತವಾಗಿ ಬಳಸಲು ಮತ್ತು ಸೈಬರ್ ಅಪರಾಧಗಳ ವಿರುದ್ಧ ಜಾಗರೂಕರಾಗಿರಲು ತಿಳಿಸಿದರು.
ಸೈಬರ್ ಅಪರಾಧಗಳು ಯಾವುದೇ ಗಡಿ ಹೊಂದಿಲ್ಲ, ಹಲವಾರು ಅನಕ್ಷರಸ್ಥರು ಹಾಗೂ ಅಕ್ಷರಸ್ಥರು ಸಹ ಈ ಒಂದು ಸೈಬರ್ ಅಪರಾಧ ಹಾಗೂ ವಂಚನೆಗೆ ಬಲಿಯಾಗಿರುವ ಅನೇಕ ಪ್ರಕರಣಗಳನ್ನು ಕಾಣಬಹುದಾಗಿದೆ. ಸೈಬರ್ ಅಪರಾಧಗಳು ಸವಾಲಾಗಿ ಪರಿಣಮಿಸಿವೆ. ‘ಇಂಟರ್ನೆಟ್’ ಹೊಂದಿರುವ ಸ್ಮಾರ್ಟ್ಫೋನ್ ಬಳಕೆ ಹೆಚ್ಚಾಗಿರುವ ಪರಿಣಾಮ ಅಪರಾಧ ಹಾಗೂ ವಂಚನೆ ಎಸಗಲು ಅಪರಾಧಿಗಳಿಗೆ ಆನ್ಲೈನ್ ನಲ್ಲಿ ಅನೇಕ ಸಾಧನಗಳು ಲಭ್ಯವಿವೆ. ವಂಚಕರು ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಲ ಸೌಲಭ್ಯ ನೀಡುವ ಆಸೆ ಹುಟ್ಟಿಸಿ ವಂಚಿಸುವ ಪ್ರಕರಣಗಳು, ಹೂಡಿಕೆ ನೆಪದಲ್ಲಿ ಹಣ ಪಡೆದು ವಂಚಿಸುವ ಪ್ರಕರಣಗಳು, ಡಿಜಿಟಲ್ ಅರೆಸ್ಟ್ ಸಂಬಂಧಿತ ವಂಚನೆಗಳು, ಸಿಮ್ ಸ್ವಾಪಿಂಗ್ ಪ್ರಕರಣಗಳು, ಹ್ಯಾಕಿಂಗ್ ಪ್ರಕರಣಗಳು ಸೈಬರ್ ಅಪರಾಧಕ್ಕೆ ಉದಾಹರಣೆಯಾಗಿವೆ. ಸೈಬರ್ ಅಪರಾಧಗಳನ್ನು ಅಲ್ಲಗಳೆಯದೇ ಅವುಗಳ ಬಗ್ಗೆ ನಾವು ಸದಾ ಜಾಗೃತರಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಯಾವುದೇ ಸೈಬರ್ ಅಪರಾಧಗಳು ಜರುಗಿದಲ್ಲಿ ತ್ವರಿತವಾಗಿ ಪ್ರಕರಣವನ್ನು ದಾಖಲಿಸಬೇಕು. ಸೈಬರ್ ಅಪರಾಧ ತಡೆಗಟ್ಟುವ ತುರ್ತು ಸಂಪರ್ಕ ಸಂಖ್ಯೆಗಳ ಕುರಿತು ಮಾಹಿತಿ ನೀಡಿದರು. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ ಸಂಪರ್ಕ ಸಂಖ್ಯೆ 1930 ಉಚಿತ ಸಹಾಯವಾಣಿಗೆ ಕರೆಮಾಡಿ ಮಾಹಿತಿ ನೀಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಯಾರಾದರೂ ನಿಮ್ಮ ಬ್ಯಾಂಕ್ ಖಾತೆಯಿಂದ ಮೋಸದಿಂದ ಹಣವನ್ನು ಹಿಂಪಡೆದಿದ್ದರೆ 14440 ಗೆ ಮಾಹಿತಿ ನೀಡಬೇಕು. ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ ಕುರಿತು 0930 ಗಂಟೆಯಿಂದ 1715 ಗಂಟೆಯವರೆಗೆ ಅಥವಾ 24×7 ದೂರುಗಳು/ಕಂಪ್ಲೈಂಟ್ಗಳಿಗಾಗಿ 14448, ಇಮೇಲ್ನಲ್ಲಿCRPC@RBI.ORG.IN ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಸೈಬರ್ ವಂಚನೆ ತಡೆಗಟ್ಟುವಲ್ಲಿ ನೆರೆಹೊರೆಯವರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಜನರನ್ನು ಜಾಗೃತರಾಗಿರಲು ಸಹಕಾರಿಯಾಗಿಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರಿ ಪ್ರಾಚಾರ್ಯೆ ಕಮಾಂಡರ್ ಮೀನಾ ಕುಮಾರಿ, ಶಾಲೆಯ ಆಡಳಿತಾಧಿಕಾರಿ ಮೇಜರ್ ರಿತೇಶ್ ಕುಮಾರ, ಹಿರಿಯ ಮಾಸ್ಟರ್ ಶ್ರೀ. ರೇವಣಕುಮಾರ ದೇಸಾಯಿ, ಶಾಲೆಯ ಶೈಕ್ಷಣಿಕ ಮತ್ತುಆಡಳಿತ ಸಿಬ್ಬಂದಿವರ್ಗದವರು, ಪಿ.ಟಿ.ಐ. ಗಳು, ಎನ್.ಸಿ.ಸಿ. ಸಿಬ್ಬಂದಿವರ್ಗ ಮತ್ತು ಕೆಡೆಟ್‌ಗಳು ಉಪಸ್ಥಿತರಿದ್ದರು.

