ಯಾವುದೇ ಕಾರಣಕ್ಕೂ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಮನವಿ ಮಾಡಿಕೊಂಡ ಮಾಜಿ ಡಿಸಿಎಂ ಈಶ್ವರಪ್ಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದ್ವೇಷ ಭಾಷಣ ವಿರೋಧಿ ವಿಧೇಯಕ ಮಂಡಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಪುನ: ಅಘೋಷಿತ ತುರ್ತು ಪರಿಸ್ಥಿತಿ ಹೇರಲು ಹವಣಿಸುತ್ತಿದೆ, ಹೀಗಾಗಿ ಈ ವಿಧೇಯಕವನ್ನು ರಾಜ್ಯಪಾಲರು ಒಪ್ಪಬಾರದು, ಈ ವಿಧೇಯಕಕ್ಕೆ ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸರ್ವಾಧಿಕಾರ ವರ್ತನೆ ತೋರಿದ ದಿ.ಇಂದಿರಾ ಗಾಂಧೀ ತುರ್ತು ಪರಿಸ್ಥಿತಿ ಹೇರಿದ ಪರಿಣಾಮ ನಂತರ ಕಾಂಗ್ರೆಸ್ ಪಕ್ಷ ನೆಲಕಚ್ಚಿತು. ಈಗ ದ್ವೇಷ ಭಾಷಣ ವಿರೋಧಿ ಮಸೂದೆ ಹಿಂದೂ ನಾಯಕರನ್ನು ಹತ್ತಿಕ್ಕಲು ತಂದಿರುವ ಕರಾಳ ಶಾಸನ, ಪಾಕಿಸ್ತಾನ್ ಜಿಂದಾಬಾದ್ ಎನ್ನುವ ದುಷ್ಟರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅರೆಸ್ಟ್ ಮಾಡಿಲ್ಲ, ತಮಗೆ ಸರಿ ಕಾಣದವರನ್ನು ಅರೆಸ್ಟ್ ಮಾಡುವ ವ್ಯವಸ್ಥಿತ ಷಡ್ಯಂತ್ರಕ್ಕಾಗಿ ಕಾಂಗ್ರೆಸ್ ಈ ಕಾಯ್ದೆ ಜಾರಿಗೆ ತಂದಿದೆ ಎಂದು ದೂರಿದರು.
ಹಿಂದೂ ನಾಯಕರನ್ನು, ಹಿಂದೂ ಸಂಘಟನೆಗಳನ್ನು ಜೈಲಿಗೆ ಕಳಿಸುವ ವ್ಯವಸ್ಥಿತ ಕಾರಣಕ್ಕಾಗಿ ಈ ಮಸೂದೆ ರೂಪಿಸಿದೆ, ಹಿಂದೂತ್ವದ ಪರವಾಗಿರುವ ಸರ್ಕಾರ ಖಂಡಿತವಾಗಿಯೂ ಮುಂದೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದರು.
ಶಿವಸೇನೆ, ಬಿಜೆಪಿ ಎಂದು ನಾನು ಹೇಳುವುದಿಲ್ಲ, ಹಿಂದೂತ್ವವವನ್ನು ಒಪ್ಪುವ ನೈಜತೆಯ ಆಧಾರದ ಮೇಲೆ ಒಪ್ಪುವ ಸರ್ಕಾರ ಬಂದೇ ಬರುತ್ತದೆ, ಹಿಂದೂ ವಿರೋಧಿ ಸ್ವಭಾವ ನೆಲಕಚ್ಚುತ್ತದೆ, ಹಿಂದೂತ್ವವನ್ನು ದಮನ ಮಾಡುವ ಪ್ರಯತ್ನ ಮಾಡುವ ಕಾಂಗ್ರೆಸ್ ನಿರ್ನಾಮವಾಗುತ್ತದೆ, ಆದರೆ ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಹಿಂದೂತ್ವದ ಆಧಾರದ ಸರ್ಕಾರ ಬಂದೇ ಬರುತ್ತದೆ ಎಂದು ಭವಿಷ್ಯ ನುಡಿದರು.
ಒಕ್ಕಲಿಗ ಸಮಾಜದ ಶ್ರೀಗಳು ಡಿ.ಕೆ. ಶಿವಕುಮಾರ ಪರವಾಗಿ, ಹಾಲುಮತ ಸ್ವಾಮೀಜಿಗಳು ಸಿ.ಎಂ. ಸಿದ್ಧರಾಮಯ್ಯ ಅವರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ, ಅತ್ತ ಶಾಸಕರ ಗುಂಪುಗಾರಿಕೆ ಸಹ ವ್ಯಾಪಕವಾಗಿದೆ, ಇದರಿಂದ ಕಾರ್ಯಕರ್ತರಿಗೆ ಅನುಮಾನ ಇದ್ದರೆ, ಅಧಿಕಾರಿಗಳು ಮಾತ್ರ ಆರಾಮಾಗಿದ್ದಾರೆ ಎಂದರು.
ಸಿ.ಎಂ. ಸ್ಥಾನ ಬದಲಾವಣೆ ವಿಷಯವಾಗಿ ಹೈಕಮಾಂಡ್ ತೀರ್ಮಾನ ಅಂತಿಮ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ, ಹಾಗಾದರೆ ಎಐಸಿಸಿ ಅಧ್ಯಕ್ಷರು ಹೈಕಮಾಂಡ್ ಅಲ್ಲವೇ? ಕೇವಲ ಗಾಂಧೀ ಕುಟುಂಬಕ್ಕೆ ಇಡೀ ಕಾಂಗ್ರೆಸ್ ಪಕ್ಷವನ್ನು ಒತ್ತೆಯಾಗಿರಿಸಿದ್ದೀರಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕತ್ವ ದುರ್ಬಲಗೊಂಡು ದುಸ್ಥಿತಿಗೆ ತಲುಪಿದೆ, ಬಿಹಾರ ಮೊದಲಾದ ಚುನಾವಣೆಗಳಲ್ಲಿ ಕಾಂಗ್ರೆಸ್ ಧೂಳಿಪಟ ಮಾಡಿದಂತೆ ಕರ್ನಾಟಕದಲ್ಲಿಯೂ ಜನತೆ ಯಾವ ಸಂದರ್ಭದಲ್ಲೂ ಚುನಾವಣೆ ನಡೆದರೂ ಕಾಂಗ್ರೆಸ್ ಪುನ: ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದರು.

