“ಆರೋಗ್ಯ ಅಂಗಳ”- Dr Nandini MuchchandiAssociate Professor and Fellowship in community and mental healthDepartment of BiochemistryBLDE, Shri B M Patil medical college hospital and research centre, vijaypur
ಇತ್ತೀಜಿನ ದಿನಗಳಲ್ಲಿ ಚಿಕ್ಕವರಲ್ಲಿ ಶಾಲೆ, ಓದು, ಪರೀಕ್ಷೆ ಮತ್ತು ದೊಡ್ಡವರಲ್ಲಿ ದುಡಿಮೆ, ಆಸ್ತಿ, ಪಾರ್ಟಿ ಇಂತಹ ವಿಷಯಗಳಿಗೆ ಇರುವ ಮಹತ್ವ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಿಗೆ ಇರುವುದಿಲ್ಲ. ಆದರೆ ಮನುಷ್ಯ ಆರೋಗ್ಯದಿಂದಿರಲು ಪೌಷ್ಠಿಕ ಭರಿತ ಆಹಾರ ಮತ್ತು ನಿದ್ದೆಯೊಂದಿಗೆ ದೈಹಿಕ ಚಟುವಟಿಕೆ (ಕ್ರೀಡೆ)ಗಳು ಅಷ್ಠೇ ಮುಖ್ಯ.
ಆರೋಗ್ಯ ಎಂದರೆ, ಕೇವಲ ರೋಗಮುಕ್ತ ಅಥವಾ ಯಾವುದೇ ರೋಗದಿಂದ ಬಾಧಿತರಾಗಿರುವುದೇ ಅಷ್ಠೇ ಅಲ್ಲ. ಆರೋಗ್ಯ ಎಂದರೆ, ದೈಹಿಕ ಮಾನಸಿಕ ಮತ್ತು ಸಾಮಾಜಿಕ ಸಮತೋಲನ ಸ್ಥಿತಿಯೊಂದಿಗೆ ರೋಗದ ಅನುಪಸ್ಥಿತಿಯಲ್ಲಿರುವುದು. ಮತ್ತು ಇವುಗಳನ್ನು ಸಮತೋಲನ ಸ್ಥಿತಿಯಲ್ಲಿಡಲು ಕ್ರೀಡೆಗಳು ಅತಿ ಅವಶ್ಯಕವಾಗಿವೆ.
ಇಂದಿನ ಮೊಬೈಲ್ ಇಂಟರ‍್ನೆಟ್ ಯುಗದಲ್ಲಿ ಮಕ್ಕಳು ಮೊಬೈಲ್ (ಆನ್‌ಲೈನ್) ಆಟಗಳ ಗೀಳಿನಿಂದ ದಾಸರಾಗಿದ್ದರೆ, ದೊಡ್ಡವರು ಸೋಶಿಯಲ್ ಮೀಡಿಯಾ ಅಂತಹ ಪಿಡುಗಿಗೆ ದಾಸರಾಗಿ ಗಂಟೆಗಟ್ಟಲೆ ಕೂತಲ್ಲೇ ಕೂತು, ಬಿಸಿಲಿಗೆ ಮೈಯೊಡ್ಡದೆ, ಬೆವರು ಸುರಿಸದೆ, ಬೊಜ್ಜುತನ ಬೆಳೆಸಿಕೊಂಡು ಅದರಿಂದ ನಾನಾ ತರಹದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೇವಲ ದೈಹಿಕ ಕಾಯಿಲೆಗಳಲ್ಲದೇ ಮೊಬೈಲ್ ಗೀಳಿನಿಂದಾಗಿ ಅನೇಕ ತರಹದ ಮಾನಸಿಕ ಕಾಯಿಲೆಗಳಿಂದ ಬಳಲುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಮತ್ತು ಸಾಮಾಜಿಕ ವಿರೋಧಿ ನಡುವಳಿಕೆಯು ಕಾಣಸಿಗುತ್ತಿದೆ.
ಅಂಕಿ-ಅಂಶಗಳ ಪ್ರಕಾರ ಅಮೇರಿಕಾ ದೇಶದಲ್ಲಿ ಸಂಭವಿಸುವ ೪೦%ರಷ್ಟು ಸಾವುಗಳು, ನೇರವಾಗಿ ಅಥವಾ ಪರೋಕ್ಷವಾಗಿ ದೈಹಿಕ ನಿಷ್ಕ್ರೀಯವಾಗಿರುವ ಜೀವನಶೈಲಿಯಿಂದಾಗಿದೆ ಎಂದು ತಿಳಿದು ಬರುತ್ತದೆ.
ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಡಬ್ಲೂಎಚ್‌ಓ ಕೆಲವು ಸಲಹೆಗಳನ್ನು ಶಿಫಾರಸು ಮಾಡಿದೆ.
- ೬-೧೭ವರ್ಷ ವಯಸ್ಸಿನವರು ಪ್ರತಿನಿತ್ಯ ಕನಿಷ್ಠ ೬೦ ನಿಮಿಷ (೧ಗಂಟೆ) ಕ್ರೀಡೆ/ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಅವರ ಸ್ನಾಯು ಮೂಳೆ ನರಮಂಡಲ ಮೆದುಳಿನ ಬೆಳವಣಿಗೆಯೊಂದಿಗೆ ದೇಹದ ತೂಕವನ್ನು ಸಮತೋಲನದೊಂದಿಗೆ ಬೊಜ್ಜುತನವನ್ನು ದೂರವಿಡಿಸುತ್ತದೆ. ಇದಷ್ಟೇ ಅಲ್ಲದೆ, ಅವರ ಸಾಮಾಜಿಕ ಬೆಳವಣಿಗೆ, ಅತ್ಮಸ್ಥೈರ್ಯ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮತ್ತು ದುಶ್ಚಟಗಳಿಂದ ದೂರವಿಡಲು ಸಹಕಾರಿಯಾಗಿದೆ.
- ೧೮-೬೪ ವರ್ಷದವರು ವಾರಕ್ಕೆ ೧೫೦ ನಿಮಿಷದಷ್ಟು ಮಧ್ಯಮ ತೀವ್ರತೆಯ ಕ್ರೀಡೆ / ದೈಹಿಕ ತಾಲೀಮು ಅಥವಾ ೭೫ ನಿಮಿಷದಷ್ಟು ತೀವ್ರತೆಯ ದೈಹಿಕ ತಾಲೀಮಿನಲ್ಲಿ ತೊಡಗಬೇಕು
- ೬೪ವರ್ಷಕ್ಕಿಂತ ಮೇಲ್ಪಟ್ಟವರು ಯಾವುದೇ ರೋಗದ ಅನುಪಸ್ಥಿತಿಯಲ್ಲಿದ್ದರೆ ವಾರಕ್ಕೆ ೧೫೦ ನಿಮಿಷಗಳ ಕಾಲ ಮಧ್ಯಮ ತೀವ್ರತೆಯ ದೈಹಿಕ ತಾಲೀಮು ಮಾಡಬೇಕು. ಅಥವಾ ವೈದ್ಯರ ಸಲಹೆ ಮೇರೆಗೆ ಮಾಡಬಹುದು.
- ಸ್ನಾಯು ಗಟ್ಟಿಗೊಳಿಸುವ ದೈಹಿಕ ತಾಲಿಮುಗಳಿಂದ ಸ್ನಾಯು ಕ್ಷೀಣತೆಯನ್ನು ಕಡಿಮೆ ಮಾಡಬಹುದಲ್ಲದೇ, ಅಸ್ಥಿರಂದ್ರತೆ (osteoporosis)ಯನ್ನು ತಡೆಗಟ್ಟಬಹುದು.
- ಒಂದು ಅಧ್ಯಾಯದ ಪ್ರಕಾರ ಪ್ರತಿನಿತ್ಯ ಕನಿಷ್ಠ ೩೦ ನಿಮಿಷ ವಾಕಿಂಗ್ ಮಾಡುವುದರಿಂದ ಶೇ.೩೦ವರೆಗೆ ಮರೆಗುಳಿಕೆ (Dementia) ಕಾಯಿಲೆಯನ್ನು ತಡೆಯಬಹುದು.
ಇದಷ್ಟೇ ಅಲ್ಲದೇ, ಹೆಣ್ಣು ಮಕ್ಕಳ ಗರ್ಭಾವಸ್ಥೆಯಲ್ಲಾಗುವ ಸಕ್ಕರೆ ಕಾಯಿಲೆ, ರಕ್ತದೊತ್ತಡ ರಕ್ತಸ್ರಾವ ಅಂತಹ ತೊಡಕುಗಳನ್ನು ತಪ್ಪಿಸಬಹುದು.
ನಿಯಮಿತವಾಗಿ ಕ್ರೀಡೆ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ದೇಹದಲ್ಲಿ ಸೆರಟೊನಿನ್ ಎಂಡೋರಫಿನ್, ಡೊಪನಿನ್ ಅಂತಹ ನರರಾಸಾಯನಿಕಗಳು ಉತ್ಪತ್ತಿಯಾಗಿ, ಖಿನ್ನತೆ, ಆತಂಕ ಅಂತಹ ಅನೇಕ ಮಾನಸಿಕ ಕಾಯಿಲೆಗಳಿಂದ ದೂರವಿಟ್ಟು ಯಾವಾಗಲು ಉತ್ಸಾಹ, ಖುಷಿಯಿಂದಿರಲು ಸಹಾಯ ಮಾಡುತ್ತವೆ. ಇವಷ್ಟೇ ಅಲ್ಲದೇ GROWTH FACTORS ಎಂಬ ರಾಸಾಯನಿಕಗಳನ್ನು ಉತ್ಪಾದಿಸಿ ನಮ್ಮ ಮೆದುಳಿನ ಬೆಳವಣಿಗೆಗೆ (HIPPO CAMPUS) ನೆನಪಿನ ಶಕ್ತಿ, ಏಕಾಗ್ರತೆಯನ್ನು ಕೇವಲ ಚಿಕ್ಕ ವಯಸ್ಸಿನಷ್ಟೇ ಅಲ್ಲದೇ ಮಧ್ಯಮ ವಯಸ್ಕರಲ್ಲೂ ಸಾಧ್ಯ ಎಂಬುದು ವೈಜ್ಞಾನಿಕ ಅಧ್ಯಯನದಿಂದ ಸಾಬೀತಾಗಿದೆ
ನಮ್ಮ ದೇಹದ ಮೇಲೆ ಇಷ್ಟೆಲ್ಲಾ ಲಾಭದಾಯಕ ಅಂಶಗಳನ್ನು ಹೊಂದಿರುವ ಕ್ರೀಡೆಗಳನ್ನು ಅಥವಾ ಯಾವುದೇ ತರಹದ ದೈಹಿಕ ಚಟುವಟಿಕೆಗಳನ್ನು (ಯೋಗ, ಜಿಮ್, ವಾಕಿಂಗ್) ಅದು ನಮ್ಮ ಹೃದಯ ಬಡಿತವನ್ನು ಹೆಚ್ಚಿಸಿ, ಬೆವರು ಉತ್ಪಾದಿಸುವಂತಹದನ್ನು ನಿಯಮಿತವಾಗಿ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು.
ಹೊಂ ವರ್ಕ್ ಅಥವಾ ಪರೀಕ್ಷಾ ಮನೋಭಾವ ಹೆಚ್ಚಾಗಿರುವ ಇತ್ತೀಚಿನ ಎಲ್ಲಾ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಪ್ರತಿದಿನ ಮಕ್ಕಳಿಗೆ ೧ ಗಂಟೆಯಾದರೂ ಕಡ್ಡಾಯವಾಗಿ ಕ್ರೀಡೆ/ದೈಹಿಕ ಚಟುವಟಿಕೆಗಳಿಗೆ ಮೀಸಲಿಟ್ಟು ಅವರ ಸರ್ವತೋಮುಖ ಬೆಳವಣಿಗೆಗೆ ಪ್ರಾಮುಖ್ಯತೆ ಬೆಳೆಸಬೇಕು.
” we do not stop exercising / playing because we stop playing / exercising.”
– Dr Nandini Muchchandi
Associate Professor and Fellowship in community and mental health
Department of Biochemistry
BLDE, Shri B M Patil medical college hospital and research centre, vijaypur