ಸತತ 11 ವರ್ಷ ಪಾದಯಾತ್ರಿಗಳೊಂದಿಗೆ ಶ್ರೀಶೈಲಕ್ಕೆ ಪಯಣ | ಭವ್ಯ ಮೆರವಣಿಗೆಯೊಂದಿಗೆ ಅಂತ್ಯಸಂಸ್ಕಾರ | ಭಕ್ತರ ಅಶ್ರುತರ್ಪಣ
ಕೊಲ್ಹಾರ: ಹೋಳಿ ಹುಣ್ಣಿಮೆಯ ಮರುದಿನ ಬೂದಿಚೆಲ್ಲುವ (ದೂಳವಾಡ) ದಿನದಂದು ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳ, ಪಟ್ಟಣಗಳ ಜನರು ಕಂಬಿ ದೇವರನ್ನು ಹೊತ್ತುಕೊಂಡು ಪ್ರತಿ ವರ್ಷ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಜ್ಯೋತಿರ್ಲಿಂಗದ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕ ಹೊರಡುವದು ವಾಡಿಕೆಯಾಗಿದೆ.
ಇಲ್ಲೊಂದು ಸೋಜಿಗದ ವಿಷಯವೆಂದರೆ ಕೊಲ್ಹಾರ ಪಟ್ಟಣದಿಂದ ಪಾದಯಾತ್ರೆಯ ಕೈಗೊಳ್ಳುವ ಭಕ್ತರ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದೆ.
ಪಾದಯಾತ್ರೆ ಮಾಡುವ ಭಕ್ತರ ಜೊತೆಯಲ್ಲಿ ನಿರಂತರವಾಗಿ ೧೫ ದಿನಗಳ ಕಾಲ ಕಂಟ್ಲಿ ಎತ್ತು ಎನ್ನುವ ಎತ್ತೊಂದು ಬಸವ ಭಕ್ತರ ಜೊತೆಜೊತೆಯಲ್ಲಿ ಹೆಜ್ಜೆ ಹಾಕುತ್ತಾ, ಭಕ್ತರಿಗೆ ದಾರಿಯನ್ನು ದೇವನ ಸ್ವರೂಪದಂತೆ ತೋರಿಸುವ ಶಿವನ ನಂದಿ ಅವತಾರದಂತಿತ್ತು ಈ ಕಂಟ್ಲಿ ಎತ್ತು.
ಕಾಕತಾಳೀಯ ಎಂಬAತೆ ಈ ವರ್ಷ ಶ್ರೀಶೈಲಕ್ಕೆ ತೆರಳಿದ್ದ ಕಂಟ್ಲಿ ಎತ್ತು ಮರಳಿ ಕೊಲ್ಹಾರ ಪಟ್ಟಣಕ್ಕೆ ಆಗಮಿಸಿದ ಬುಧವಾರ ದಿನದಂದೆ ತನ್ನ ದೇಹ ತ್ಯಾಗವನ್ನು ಮಲ್ಲಯ್ಯನ ಸನ್ನಿಧಿಗೆ ಸಮರ್ಪಿಸಿದೆ. ಪುಣ್ಯದ ಬಸವ ತನ್ನ ನಡಿಗೆಯನ್ನು ನಿಲ್ಲಿಸಿದ್ದು ಸಾವಿರಾರು ಭಕ್ತರನ್ನು ದುಃಖಸಾಗರದಲ್ಲಿ ತೇಲುವಂತೆ ಮಾಡಿದೆ.
೧೮ ವರ್ಷ ವಯಸ್ಸಿನ ಹೆಮ್ಮೆಯ ಬಸವ ಸತತವಾಗಿ ೧೧ ವರ್ಷಗಳ ಕಾಲ ಶ್ರೀಶೈಲಕ್ಕೆ ಭಕ್ತರ ಜೊತೆ ಮಲ್ಲಯ್ಯನ ಕಂಬಿ ಹೊತ್ತು ಪಾದಯಾತ್ರೆ ಮಾಡಿ ಇತಿಹಾಸವನ್ನು ಸೃಷ್ಟಿಸಿದೆ. ಅಲ್ಲದೆ ಕಡೆಬಾಗಿಲಿನಿಂದ ಕೈಲಾಸಬಾಗಿಲ ತಲುಪುವ ರಸ್ತೆ ಮಧ್ಯದಲ್ಲಿ ಬರುವ ಸಾವಿರಾರು ಮೀಟರ್ ತಗ್ಗು ಪ್ರದೇಶ ಅಷ್ಟೇ ಅಲ್ಲ, ಇಳಿಯಲು ಏರಲು ಮನುಷ್ಯರಿಗೆ ಸವಾಲೆಸೆಯುವ ಆಳವಾಗಿರುವ ಭೀಮನಕೊಳ್ಳವನ್ನು ತನ್ನ ಮೈಭಾರವನ್ನು ಹೊತ್ತುಕೊಂಡು ಇಳಿದು, ಏರುವ ಕಂಟ್ಲಿ ಎತ್ತಿನ ಸಾಹಸವನ್ನು ಬಸವನ ಜೊತೆ ಹೆಜ್ಜೆ ಹಾಕುತ್ತಿದ್ದ ಪಾದಯಾತ್ರಿಕರಿಗೆ ಅಘಾದವೆನಿಸುತ್ತಿತ್ತು. ಕಾರಣ ದೇವನ ನಾಮಸ್ಮರಣೆ ಮಾಡುತ್ತಾ ಸಾಗಿದರೆ ಕಠಿಣವಾಗುವದೆಲ್ಲ ಸಲೀಸಾಗುವದು ಎನ್ನುವದಕ್ಕೆ ಈ ಬಸವನೇ ಸಾಕ್ಷಿಯಾಗಿದ್ದಾನೆ.

ಕೊಲ್ಹಾರ ಪಟ್ಟಣದ ಬಸವರಾಜ ಹುಲ್ಯಾಳ ಅವರು ಕಂಟ್ಲಿ ಎತ್ತನ್ನು ಸಂರಕ್ಷಣೆ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿರುವಾಗ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗಲಿಲ್ಲ. ಈ ಭಾಗದಲ್ಲಿ ಸಾಕ್ಷಾತ ದೇವರ ಸ್ವರೂಪದಂತಿದ್ದ ಕಂಟ್ಲಿ ಎತ್ತಿನ ಅಂತ್ಯಸಂಸ್ಕಾರದ ಮೆರವಣಿಗೆ ಹುಲ್ಯಾಳ ಅವರ ಮನೆಯಿಂದ ಪ್ರಾರಂಭವಾಗಿ ಸುತ್ತಮುತ್ತಲಿನ ಹಾಗೂ ಪಟ್ಟಣದ ಸಾವಿರಾರು ಮಹಿಳೆಯರು, ಪುರುಷರು, ಯುವಕರು ಪಾಲ್ಗೊಂಡು. ಸಕಲ ವಾದ್ಯ ವೈಭವಗಳೊಂದಿಗೆ ಎತ್ತಿನ ಬಂಡಿಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆಯನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಪಟ್ಟಣದ ಕಿರಾಣಿ ವ್ಯಾಪಾರಸ್ತರಾದ ಬಸವರಾಜ ಹುಲ್ಯಾಳ ಅವರು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯಲ್ಲಿ ಹರಕೆ ಹೊತ್ತ ಪ್ರಕಾರ ತಮ್ಮ ಸ್ವಂತ ೫ ವರ್ಷದ ಕರುವನ್ನು ದಾನವಾಗಿ ಶ್ರೀಶೈಲ ಪುಣ್ಯಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ತೆರಳಲು ಬಿಡುತ್ತಿದ್ದರು. ಅದರ ಸಂರಕ್ಷಣೆ ಜವಾಬ್ದಾರಿಯನ್ನು ಅವರ ಕುಟುಂಬದವರು ನಿರ್ವಹಿಸುತ್ತಿದ್ದರು. ಪ್ರತಿವರ್ಷ ಹೋಗುವದು ಬರುವದು ಸೇರಿ ೧೧೦೦ ಕಿ.ಮೀ ನಡೆದುಕೊಂಡೇ ಸಾಗುತ್ತಿದ್ದ ಈ ಕಂಟ್ಲಿ ಎತ್ತು ಕರ್ನಾಟಕ ಮತ್ತು ಆಂದ್ರ ಪ್ರದೇಶದ ಊರುಗಳ ಭಕ್ತರಿಗೆ ಸಾಕ್ಷಾತ ನಂದಿ ಸ್ವರೂಪವಾಗಿತ್ತು. ಅಲ್ಲದೇ ಈ ಬಸವನಿಗೆ ಪೂಜೆ ಸಲ್ಲಿಸಿ ಭಕ್ತರು ಮನದಲ್ಲಿ ಬೇಡಿದ್ದ ಇಷ್ಟಾರ್ಥಗಳು ಈಡೇರಿವೆ ಎಂಬುದು ನಂಬಿಕೊAಡು ನಡೆದ ಭಕ್ತರ ಅಭಿಪ್ರಾಯವಾಗಿದೆ.
ಈ ಸಂದರ್ಭದಲ್ಲಿ ಮಸೂತಿ ಗ್ರಾಮದ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು, ಸ್ಥಳೀಯ ಹಿರೇಮಠದ ಮುರುಘೇಂದ್ರ ಮಹಾಸ್ವಾಮಿಗಳು, ಊರಿನ ಗಣ್ಯರಾದ ಕಲ್ಲು ದೇಸಾಯಿ, ಚಂದ್ರಶೇಖರ ಬೆಳ್ಳುಬ್ಬಿ, ಶ್ರೀಮಂತ ಬಸಪ್ಪ ಹಂಗರಗಿ, ರಾಚಯ್ಯ ಗಣಕುಮಾರ, ರಾಯಪ್ಪಗೌಡ ಕೋಮಾರ, ವಿನೀತ ದೇಸಾಯಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಚನಮಲ್ಲಪ್ಪ ಗಿಡ್ಡಪ್ಪಗೋಳ, ಯಮನೂರಿ ಮಾಕಾಳಿ ಅನೇಕ ಪ್ರಮುಖರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಮುತೈದೆಯರು ಆರತಿಯ ಸಮೇತ ಪಾಲ್ಗೊಂಡಿದ್ದರು.