ಮಾಜಿ ಶಾಸಕ ಭೂಸನೂರ ತಮ್ಮ ತಪ್ಪು ಮುಚ್ಚಿಕೊಳ್ಳಲು ನಮ್ಮ ಕುಟುಂಬದ ಬಗ್ಗೆ ಆಪಾದನೆ | ಶಾಸಕ ಅಶೋಕ ಮನಗೂಳಿ ವಾಗ್ದಾಳಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತೆರವುಗೊಳಿಸಲಾದ ಸರ್ವೇ ನಂ.೮೪೨ರ ಜಾಗೆಯ ಬಗ್ಗೆ ನನಗೇನೂ ಗೊತ್ತೇ ಇಲ್ಲ ಎಂದು ಹೇಳುವ ಮಾಜಿ ಶಾಸಕರು ಉಪ-ಚುನಾವಣೆಯ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಇದೇ ವಿಷಯ ಕುರಿತು ಸಲ್ಲಿಸಿದ ಮನವಿ ಪತ್ರ ನಮ್ಮ ಬಳಿ ಇದೆ. ತಮ್ಮ ಅವಧಿಯಲ್ಲಿ ಮಾಜಿ ಶಾಸಕ ಭೂಸನೂರ ಇದರ ಕುರಿತು ಪರಿಹಾರ ಕಂಡುಕೊಳ್ಳಬಹುದಿತ್ತು. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ವೈಯಕ್ತಿಕವಾಗಿ ನಮ್ಮ ಕುಟುಂಬದ ಬಗ್ಗೆ ಆಪಾದನೆ ಮಾಡುವ ಮುಖಾಂತರ ಕೀಳು ಮಟ್ಟದ ರಾಜಕೀಯಕ್ಕೆ ನಾಂದಿ ಹಾಡಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹರಿಹಾಯ್ದರು.
ಸಿಂದಗಿ ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಕುರಿತು ಮಾಡಿದ ೧೬ ಆಪಾದನೆಗಳಲ್ಲಿ ಎಪಿಎಂಸಿಯಲ್ಲಿನ ಕಟ್ಟಡದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಮಾಡಿದ್ದು ನನ್ನ ತಪ್ಪು, ಅದನ್ನು ನಾನು ಒಪ್ಪಿಕೊಂಡು ಕಾರ್ಯಾಲಯವನ್ನು ತೆರವುಗೊಳಿಸುವ ಕಾರ್ಯ ಮಾಡುತ್ತೇನೆ. ಭೂಸನೂರ ಅವರ ಅವಧಿಯಲ್ಲಿಯೇ ಎಪಿಎಂಸಿಯಲ್ಲಿ ೧೬ ವ್ಯಾಪಾರಸ್ಥರು ಎಂಪಿಎಂಸಿಯ ನಿಯಮ ಮೀರಿ ಬೇರೆ ಬೇರೆ ರೀತಿಯ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದಕ್ಕೆಲ್ಲ ಆಸ್ಪದ ನೀಡಿದವರು ಭೂಸನೂರ. ಕಾಂಗ್ರೆಸ್ ಕಾರ್ಯಾಲಯ ತೆರವುಗೊಳಿಸಿದ ನಂತರ ಉಳಿದ ವ್ಯಾಪಾರಸ್ಥರ ಮಳಿಗೆಗಳನ್ನು ತೆರವುಗೊಳಿಸಲು ಮಾಜಿ ಶಾಸಕರೇ ನೇರ ಹೊಣೆಗಾರರಾಗುತ್ತಾರೆ. ನನ್ನ ವಿರುದ್ಧ ಮಾಡಿದ ಇನ್ನುಳಿದ ೧೫ ಆಪಾದನೆಗಳಲ್ಲಿ ಒಂದನ್ನಾದರೂ ಸಾಬೀತು ಪಡಿಸಲು ತಿಂಗಳ ಕಾಲಾವಕಾಶ ಕೊಡುತ್ತೇನೆ. ಅಷ್ಟರೊಳಗಾಗಿ ಸಾಬೀತು ಪಡಿಸಿದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಸಾಬೀತು ಪಡಿಸದಿದ್ದರೆ ನೀವು ರಾಜಕೀಯ ನಿವೃತ್ತಿ ಹೊಂದಬೇಕು ಎಂದು ಸವಾಲು ಹಾಕಿದರು.
ಆಪಾದನೆ ಮಾಡುವುದು ದೊಡ್ಡದಲ್ಲ, ಅದನ್ನು ಸಾಬೀತು ಪಡಿಸುವುದು ಬದ್ಧತೆ. ೨೦೨೦ರಲ್ಲಿ ದಿ.ಎಂ.ಸಿ.ಮನಗೂಳಿ ಅವರ ಅಧಿಕಾರ ಅವಧಿಯಲ್ಲಿ ೨೫೦ಹುಡ್ಕೋ ಮನೆಗಳು ಮಂಜೂರಾಗಿದ್ದು, ಅದನ್ನು ನಾನೇ ಮಾಡಿಸಿದ್ದು ಎಂದು ಭೂಸನೂರ ಬಿಗುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರಾಜಕೀಯ ಪ್ರವೀಣರು ಮತ್ತು ಹಿರಿಯರಾದ ನೀವು ಇದೇ ವಿಷಯದಲ್ಲಿ ನನಗೆ ಸಲಹೆ, ಸೂಚನೆ ಕೊಟ್ಟಿದ್ದರೆ ಅದನ್ನು ನಾನು ಸ್ವಾಗತಿಸುತಿದ್ದೆ. ಆದರೆ ಅಲ್ಲಿಯ ನಿವಾಸಿಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ತೆರವುಗೊಳಿಸಿದ ನಂತರ, ಪಾಳು ಬಿದ್ದ ಸ್ಥಳದಲ್ಲಿ ತಿರುಗಾಡಿ ಬಂದ ಉದ್ದೇಶ ಪ್ರಚಾರ ಗಿಟ್ಟಿಸಿಕೊಳ್ಳುವುದೇ? ರೋಗಿಯು ಆಸ್ಪತ್ರೆಯಲ್ಲಿದ್ದಾಗ ಭೇಟಿ ಕೊಟ್ಟು ಸಮಾಧಾನ ಹೇಳದೆ, ಸತ್ತ ನಂತರ ಬಂದು ಅತ್ತಂತೆ ಇವರ ನಡೆ ಇದೆ ಎಂದು ಕುಟುಕಿದರು.
ನಗರಸಭೆ ಘೋಷಣೆ ಇದೊಂದು ಸಾಮಾನ್ಯ ಪ್ರಕ್ರಿಯೆ, ಇದಕ್ಕೆ ಯಾಕೆ ಅಷ್ಟೊಂದು ಮೆರವಣಿಗೆ ಮಾಡಿಕೊಳ್ಳಬೇಕು ಎಂದ ಅವರಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ೨೦೨೧ರಲ್ಲಿಯೇ ಸಿಂದಗಿಯ ಜನಸಂಖ್ಯೆ ೫೦ಸಾವಿರದಷ್ಟಿತ್ತು. ಆ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಸಿಂದಗಿಯನ್ನು ನಗರಸಭೆ ಮಾಡುವಂತೆ ಸರಕಾರಕ್ಕೆ ಮನವಿ ಪತ್ರ ನೀಡಿದ ಒಂದಾದರೂ ಉದಾಹರಣೆ ತೋರಿಸಲಿ. ಈಗ ನಗರಸಭೆಯಾದ ನಂತರ ಮಾಜಿ ಶಾಸಕರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಹರ್ಷ ವ್ಯಕ್ತಪಡಿಸಿ, ನಂತರ ಬೇಕಾದರೆ ನನ್ನನ್ನು ಟೀಕಿಸಬಹುದಿತ್ತು. ಆದರೆ ಭೂಸನೂರ ಅವರಿಗೆ ನಗರಸಭೆಯಾದದ್ದು ಖುಷಿ ಇದ್ದಂತಿಲ್ಲ. ಇದರಲ್ಲಿಯೂ ರಾಜಕೀಯ ಮಾಡುವ ದುರುದ್ದೇಶ ಅವರದು. ಮೆರವಣಿಗೆ ಮಾಡಿಕೊಂಡದ್ದು ನಾನಲ್ಲ. ಸಿಂದಗಿಯ ಜನತೆ ನಗರಸಭೆಯಾದ ಖುಷಿಯಲ್ಲಿ ತಮ್ಮ ಅಭಿಮಾನದಿಂದ ವಿಜಯೋತ್ಸವ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರಷ್ಟೆ. ಆಲಮೇಲ ತೋಟಗಾರಿಕಾ ಕಾಲೇಜನ್ನು ಮಂಜೂರು ಮಾಡಿಸಿದ್ದು ದಿ.ಎಂ.ಸಿ.ಮನಗೂಳಿ ಅವರು. ಆದರೆ ಇದನ್ನು ಸಹಿಸದ ಭೂಸನೂರ ತಮ್ಮ ಅವಧಿಯಲ್ಲಿ ಸಂಸದ ಜಿಗಜಿಣಗಿ ಅವರ ಮೂಲಕ ಆಲಮೇಲ ಭಾಗದಲ್ಲಿ ತೋಟಗಾರಿಕಾ ಬೆಳೆಗಳಿಲ್ಲ. ಮಹಾವಿದ್ಯಾಲಯ ಸ್ಥಾಪಿಸಲು ಸೂಕ್ತ ವಾತಾವರಣವಿಲ್ಲವೆಂಬ ಕಾರಣ ನೀಡಿ ತಿಡಗುಂದಿಗೆ ವರ್ಗಾವಣೆ ಮಾಡುವಂತೆ ಪತ್ರ ಕೊಡಸಿದ್ದು ಇದೇ ಭೂಸನೂರ ಎಂದು ಕೀಡಿಕಾರಿದರು.
ಒಟ್ಟಾರೆಯಾಗಿ ನೊಂದ ೮೪ ಬಡ ಕುಟುಂಬಗಳಿಗೆ ಸ್ಥಳಾವಕಾಶ ಮಾಡಿಕೊಟ್ಟು ಸರಕಾರ, ತಾಲೂಕಾಡಳಿತ, ಜಿಲ್ಲಾಡಳಿತದಿಂದ ಸಿಗುವ ಎಲ್ಲ ಅನುದಾನ ಬಳಸಿಕೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸುಸಜ್ಜಿತವಾದ ಕಾಲೋನಿ ಮಾಡಿಕೊಡುವಲ್ಲಿ ಕಾರ್ಯಪ್ರವೃತ್ತನಾಗಿ ಅವರ ನೋವನ್ನು ನಿವಾರಿಸುವ ಎಲ್ಲ ಪ್ರಯತ್ನವನ್ನು ಪುರಸಭೆ ಹಾಗೂ ಸರಕಾರಿ ಅಧಿಕಾರಿಗಳ ಸಹಯೋಗದೊಂದಿಗೆ ಮಾಡುತ್ತೇನೆ. ಈ ಕಾರ್ಯಕ್ಕೆ ವಿರೋಧ ಪಕ್ಷದವರು ರಾಜಕೀಯ ಮಾಡದೇ ಬೆಂಬಲ, ಸಹಕಾರ ನೀಡಲೆಂದು ಆಶಿಸುತ್ತೇನೆ ಎಂದರು.
ಈ ವೇಳೆ ಇಂಡಿ ಎಸಿ ಅನುರಾಧ ವಸ್ತ್ರದ ಸರ್ವೇ ನಂ.೮೪೨ರ ಜಾಗೆಯ ಸಂಪೂರ್ಣ ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಉಪಾಧ್ಯಕ್ಷ ಸಂದೀಪ ಚೌರ, ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಮುಖ್ಯಾಧಿಕಾರಿ ಎಸ್.ರಾಜಶೇಖರ, ಭಾಷಾಸಾಬ ತಾಂಬೊಳಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಕಾಂಬಳೆ, ಸುರೇಶ ಪೂಜಾರಿ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಇದ್ದರು.