ವಿಜಯಪುರದಲ್ಲಿ ರೂ.1,36,98,523/- ಮೌಲ್ಯದ “ಲೈಪ್ ಅಗ್ರೋ ಕೆಮಿಕಲ್” ಹೆಸರಿನಲ್ಲಿರುವ ನಕಲಿ ಕ್ರಿಮಿನಾಶಕ ಔಷಧಗಳು ಜಪ್ತಿ!
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕೆಐಎಡಿಬಿ ಸರ್ವೆ ನಂ: 1051/ಎ1/ಎ, ಪ್ಲಾಟ್ ನಂ: 279 ರಲ್ಲಿನ ಗೊಡಾವನದಲ್ಲಿ ಅನಧಿಕೃತವಾಗಿ ನಕಲಿ ಕ್ರಿಮಿನಾಶಕ ಔಷಧಿಗಳು ತಯಾರಿಸುತ್ತಿದ್ದ ಘಟಕದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಈರ್ವರು ಆರೋಪಿಗಳನ್ನು ಬಂಧಿಸಿದ್ದಾರೆ.


ಸೆ11 ರಂದು ಸಂಜೆ 4.30 ಗಂಟೆಯ ಸುಮಾರಿಗೆ ಆರೋಪಿತರಾದ ವಿದ್ಯಾಸಾಗರ ತಂದೆ ಚಿನ್ನಾರೆಡ್ಡಿ ಮಲ್ಲಾಬಾದಿ, 42 ವರ್ಷ, ಸಾ|| ಕೊಂಡಗೂಳಿ ಹಾಗೂ ಅಮರ ತಂದೆ ಗುರುನಾಥ ರೆಡ್ಡಿ, 19 ವರ್ಷ, ಸಾ|| ಬೊಳನಿ ತಾ|| ಆಳಂದ ಜಿ|| ಕಲಬುರ್ಗಿ ಇವರು “ಗೋಲ್ಡನ್ ಡ್ರಾಪ್ ಕ್ರಾಪ್ ಪ್ರೋಟೆಕ್ಷನ್” ಎನ್ನುವ ಕಂಪನಿಯ ಬೋರ್ಡ್ ಹಾಕಿಕೊಂಡು ಸದರಿ ಗೋಡಾವನಲ್ಲಿ “ಲೈಪ್ ಅಗ್ರೋ ಕೆಮಿಕಲ್” ಕಂಪನಿಯ ಹೆಸರಿನಲ್ಲಿ ತಾವೇ ತಯಾರಿಸಿದ ನಕಲಿ ಕ್ರಿಮಿನಾಶಕ ಔಷಧಗಳಿಗೆ “ಲೈಪ್ ಅಗ್ರೋ ಕೆಮಿಕಲ್”* ಕಂಪನಿಯ ಲೇಬಲ್‌ಗಳನ್ನು ಅಂಟಿಸಿ, ಅನಧೀಕೃತವಾಗಿ ನಕಲಿ ಕ್ರಿಮಿನಾಶಕ ಔಷಧಗಳನ್ನು ತಯಾರಿಸಿ, ಗೋಡಾವನದಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿ ಆರೋಪಿತರಿಂದ ಸುಮಾರು 1,36,98,523/- ಮೌಲ್ಯದ “ಲೈಪ್ ಅಗ್ರೋ ಕೆಮಿಕಲ್”* ಹೆಸರಿನಲ್ಲಿರುವ ನಕಲಿ ಕ್ರಿಮಿನಾಶಕ ಔಷಧಗಳನ್ನು ಜಪ್ತ ಮಾಡಿಕೊಳ್ಳಲಾಗಿದೆ.
ಈ ಕುರಿತು ಎಪಿಎಮ್‌ಸಿ ಪೊಲೀಸ್ ಠಾಣೆ ಗುನ್ನೆ ನಂ: 114/2025 ಕಲಂ: 318(4), 336(3) ಬಿಎನ್‌ಎಸ್-2023 ಮತ್ತು 51(ಬಿ), 63 ಕಾಪಿರೈಟ್ ಆ್ಯಕ್ಟ್ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಂಟಿ ಕಾರ್ಯಾಚರಣೆಗೆ ಶ್ಲಾಘನೆ
ಲಕ್ಷ್ಮಣ ನಿಂಬರಗಿ, ಐಪಿಎಸ್ ಪೊಲೀಸ್ ಅಧೀಕ್ಷಕರು, ವಿಜಯಪುರ ಜಿಲ್ಲೆ, ರಾಮನಗೌಡ ಹಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ವಿಜಯಪೂರ, ಬಸವರಾಜ ಯಲಿಗಾರ, ಉಪಾಧೀಕ್ಷಕರು ವಿಜಯಪುರ ನಗರ ಹಾಗೂ ಮಲ್ಲಯ್ಯ ಮಠಪತಿ, ಸಿಪಿಐ ಗೋಲಗುಂಬಜ್ ವೃತ್ತ ರವರ ಮಾರ್ಗದರ್ಶನದಲ್ಲಿ ನಕಲಿ ಕ್ರಿಮಿನಾಶಕ ಜೌಷಧ ತಯಾರಿಕೆ ಮಾಡುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಬಸವರಾಜ.ಎ.ತಿಪರಡ್ಡಿ, ಪಿಎಸ್‌ಐ(ಕಾ&ಸು) ಎಪಿಎಮ್‌ಸಿ ಠಾಣೆ ಹಾಗೂ ಎಪಿಎಮ್‌ಸಿ ಠಾಣಾ ಸಿಬ್ಬಂದಿಗಳು ಮತ್ತು ಅಮಗೊಂಡ ಪರಪ್ಪ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕರು (ಜಾರಿ ದಳ-01) ಜಂಟಿ ಕೃಷಿ ನಿರ್ದೇಶಕರ ಕಛೇರಿ, ವಿಜಯಪುರ ಮತ್ತು ಶ್ರೀಮತಿ ರೇಷ್ಮಾ ಸುತಾರ, ಸಹಾಯಕ ಕೃಷಿ ನಿರ್ದೇಶಕರು (ಜಾರಿ ದಳ-02) ಜಂಟಿ ಕೃಷಿ ನಿರ್ದೇಶಕರ ಕಛೇರಿ, ವಿಜಯಪುರ ರವರ ಜಂಟಿ ಕಾರ್ಯಾಚರಣೆಯಲ್ಲಿ ಈ ದಾಳಿ ನಡೆದಿದೆ.
ಸದರಿ ಜಂಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಕಲಿ ಕ್ರಿಮಿನಾಶಕ ಔಷಧಿಯನ್ನು ಜಪ್ತಿಪಡಿಸಿಕೊಳ್ಳುವಲ್ಲಿ, ಉತ್ತಮ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಲಾಗಿದೆ.