ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪ್ಲೀಸ್ ನಮ್ಮನ್ನು ಬಿಟ್ಟು ಹೋಗ್ಬೇಡಿ, ನಿಮ್ಮನ್ನ ನಾವು ಬಿಟ್ಟಿರಲ್ಲ, ಅಪ್ಪಿಕೊಂಡು ಕಂಬನಿಯಿಟ್ಟು ನಮ್ಮನ್ನು ಬಿಟ್ಟು ಹೋಗ್ಬೇಡಿ, ಕಾಲು ಹಿಡಿದು ಹೀಗೆ ಮಕ್ಕಳು ಕಣ್ಣೀರಿಡುತ್ತಿದ್ದರೆ, ನೆರೆದವರ ಕಣ್ಣಾಲೆಗಳು ಒದ್ದೆಯಾಗುತ್ತಿತ್ತು. ಇಷ್ಟಕ್ಕೂ ಮಕ್ಕಳ ಈ ರೋಧನೆಗೆ ಕಾರಣ ಶಿಕ್ಷಕಿಯ ವರ್ಗಾವಣೆ.
ತಾಲೂಕಿನ ಕೂಡಗಿ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಬಹುಮುಖ ಪ್ರತಿಭೆಯ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿ ಪ್ರತಿಭಾ ತೊರವಿ ಹಠಾತ್ ಬೇರೆ ಶಾಲೆಗೆ ವರ್ಗಾವಣೆ ಸುದ್ದಿ ತಿಳಿದು, ಬೆಳಗಿನ ಪ್ರಾರ್ಥನೆ ಸಮಯ ವರ್ಗಾವಣೆ ವಿಷಯ ಮಕ್ಕಳು ಕಣ್ಣೀರಿಡಲು ಶುರುಮಾಡಿದರು. ತಮ್ಮ ಪಾಠ ಹೇಳಿಕೊಡುವದಷ್ಟೇ ಅಲ್ಲದೆ ಬದುಕು ಹೇಗೆ ಸಾಗಿಸಬೇಕು ಎಂದು ಹೃದಯಸ್ಪರ್ಶಿ ಪಾಠಗಳನ್ನು ಕಲಿಸಿದ್ದ ಶಿಕ್ಷಕಿ ನಮ್ಮನ್ನು ಬಿಟ್ಟು ಬೇರೆ ಶಾಲೆಗೆ ಹೋಗುತ್ತಿದ್ದಾರೆಂಬ ಕಲ್ಪನೆಯೇ ಮಕ್ಕಳಿಗೆ ಸಹಿಸಲಾಗಲಿಲ್ಲ. ಸಣ್ಣಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ತರಗತಿಯ ವಿದ್ಯಾರ್ಥಿಗಳವರೆಗೂ ಕಣ್ಣೀರಿನಲ್ಲಿ ತೇಲಿದರು. ತರಗತಿಗೆ ಬಂದು ತಾಯಿ ತರಹ ಮುದ್ದಾಡುತ್ತಿದ್ದ, ತಪ್ಪು ಮಾಡಿದಾಗ ಅಳುವ ಬದಲು ತಿದ್ದಿ ಪಾಠ ಕಲಿಸುತ್ತಿದ್ದ ಅಕ್ಕನಂತೆ ಕಾಣುತ್ತಿದ್ದ ಶಿಕ್ಷಕಿಯನ್ನು ವರ್ಗಾವಣೆ ವಿಷಯ ತಿಳಿದು ಮಕ್ಕಳು ನಾವು ನಾಳೆಯಿಂದ ಶಾಲೆಗೆ ಬರುವುದಿಲ್ಲವೆಂದು ಬ್ಯಾಗ್ ತರದೇ ಹಠ ಹಿಡಿದು ಕುಳಿತರು.
ವರ್ಗಾವಣೆ ವಿಚಾರ ತಿಳಿದ ಪೋಷಕರೂ ಶಾಲೆಗೆ ಆಗಮಿಸಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಮಕ್ಕಳು ಪಾಲಕರು, ಗ್ರಾಮಸ್ಥರು ಎಲ್ಲರೂ ಸೇರಿ ಶಾಲೆಯ ಆವರಣದಲ್ಲಿ ಪ್ರತಿಭಟಿಸಿ ಬೇರೆ ಶಾಲೆಗೆ ವರ್ಗಾವಣೆ ಮಾಡಲು ಬಿಡುವುದಿಲ್ಲಾ, ನಾಳೆಯಿಂದ ಶಾಲೆಗೆ ಬರುವುದಿಲ್ಲ, ನಾವು ಸಾಮೂಹಿಕವಾಗಿ ಬೇರೆ ಶಾಲೆಗೆ ಹೋಗುತ್ತೇವೆ ಎಂದು ಮಕ್ಕಳು ಹಠ ಹಿಡಿದರು.
ಪಾಲಕರು ಶಾಲೆಯ ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಸೇರಿ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ನೀವು ಶಾಲೆಗೆ ತಕ್ಷಣ ಬರಬೇಕು ಅಲ್ಲಿಯವರೆಗೆ ಮಕ್ಕಳು ಪಾಲಕರು ಶಾಲಾ ಆವರಣದಲ್ಲಿ ಖಂಡಿಸಿ ಕುಳಿತರು.
ಮಧ್ಯಾಹ್ನದ ವೇಳೆಗೆ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಪುರೋಹಿತ ಆಗಮಿಸಿ ವರ್ಗಾವಣೆ ಆನಲೈನ್ ಪ್ರಕ್ರಿಯೆಯಾಗಿದ್ದು ವರ್ಗಾವಣೆ ಕಡ್ಡಾಯವಾಗಿದ್ದು ವಿಷಯ ತಿಳಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಪ್ರಯತ್ನಿಸಲಾಗುವುದು ಎಂದು ಹೇಳಿ ಮಕ್ಕಳು ಹಾಗೂ ಪಾಲಕರಿಗೆ ಮನವರಿಕೆ ಮಾಡಿದರು.