– ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ.
ಒಂದೂರಿನಲ್ಲಿ ಒಬ್ಬಳು ಅಜ್ಜಿ ಕಾಡಿನಂಚಿನಲ್ಲಿ ವಾಸವಾಗಿದ್ದಳು. ಮನೆಯ ದಿನನಿತ್ಯದ ಬಳಕೆಗಾಗಿ ಅಗತ್ಯವಿರುವ ನೀರನ್ನು ತರಲು ಅಜ್ಜಿಯು ನಾಲ್ಕೈದು ಕಿ.ಮೀ ದೂರದಲ್ಲಿದ್ದ ನದಿಯಿಂದ ಕಾಡಿನ ಹಾದಿಯಲ್ಲಿ ಸಾಗಿ ತರಬೇಕಿತ್ತು. ನದಿಯಿಂದ ನೀರನ್ನು ತರಲು ಅಜ್ಜಿಯು ಎರಡು ತಾಮ್ರದ ಬಿಂದಿಗೆಗಳನ್ನು ಬಳಸುತ್ತಿದ್ದಳು. ಈ ಎರಡು ತಾಮ್ರದ ಬಿಂದಿಗಳು ಆತ್ಮೀಯ ಮಿತ್ರರಾಗಿದ್ದು, ನಿತ್ಯವೂ ತಮ್ಮ ಉಭಯ ಕುಶಲೋಪರಿಗಳನ್ನು ಹಂಚಿಕೊಳ್ಳುತ್ತಿದ್ದವು. ಹೀಗಿರುವಾಗ ಒಂದು ಬಾರಿ ಈ ತಾಮ್ರದ ಬಿಂದಿಗೆಗಳ ಪೈಕಿ ಒಂದು ಬಿಂದಿಗೆ ತೂತಾಗಿಬಿಡುತ್ತದೆ ಮತ್ತು ಬಿಂದಿಗೆಯು ತೂತಾಗಿರುವ ವಿಚಾರ ಅಜ್ಜಿಗೆ ತಿಳಿಯುವುದೇ ಇಲ್ಲ.
ಹೀಗೆ ದಿನನಿತ್ಯ ಅಜ್ಜಿ ಎರಡೂ ಬಿಂದಿಗೆಗಳಲ್ಲಿ ನೀರನ್ನು ತುಂಬಿಕೊಂಡು ನದಿಯಿಂದ ಕಾಡಿನ ಹಾದಿಯ ಮೂಲಕ ತನ್ನ ಮನೆಗೆ ಬರುತ್ತಿದ್ದಳು. ತೂತಾಗದೆ ಇರುವ ಬಿಂದಿಗೆಯಲ್ಲಿ ನದಿಯಿಂದ ತುಂಬಿಕೊಂಡ ನೀರು ಪೂರ್ತಿಯಾಗಿ ಮನೆಗೆ ಬಂದರೆ, ತೂತಾಗಿದ್ದ ಬಿಂದಿಗೆಯಲ್ಲಿ ತುಂಬಿಕೊಂಡು ಬಂದ ನೀರು ಅರ್ಧಕ್ಕರ್ಧ ದಾರಿಯುದ್ದಕ್ಕೂ ಚೆಲ್ಲಿ ಮನೆಗೆ ಬರುವಾಗ ಕೇವಲ ಅರ್ಧ ಬಿಂದಿಗೆಯಷ್ಟು ಮಾತ್ರ ಉಳಿಯುತ್ತಿತ್ತು. ಇದನ್ನು ದಿನನಿತ್ಯ ಗಮನಿಸುತ್ತಿದ್ದ ತೂತಾಗದೆ ಇದ್ದ ಬಿಂದಿಗೆಯು ತೂತಾಗಿರುವ ಬಿಂದಿಗೆಯನ್ನು ನೋಡಿ ನನ್ನಲ್ಲಿ ತುಂಬಿಕೊಂಡು ಬರುವ ನೀರು ಪೂರ್ತಿಯಾಗಿ ಮನೆಗೆ ಬಂದು ಅಜ್ಜಿಗೆ ಬಹಳಷ್ಟು ನನ್ನಿಂದ ಉಪಕಾರವಾಗುತ್ತಿದೆ. ಆದರೆ ನೀನಾದರೋ ನೋಡು ತೂತಾಗಿದ್ದೀಯ, ತೂತಾಗಿರುವ ನಿನ್ನಲ್ಲಿ ನೀರನ್ನು ತುಂಬಿಕೊಂಡು ಅಜ್ಜಿಯು ಮನೆಗೆ ಬಂದರೆ ಅರ್ಧಕ್ಕರ್ಧ ನೀರು ಪೋಲಾಗುತ್ತಿದೆ. ಇದರಿಂದ ನೀನು ನಿರುಪಯುಕ್ತವಾಗಿದ್ದು, ನಾನು ಅಜ್ಜಿಗೆ ಹೆಚ್ಚು ಉಪಯೋಗವಾಗುತ್ತಿದ್ದೇನೆ ಎಂದು ಪ್ರತಿ ದಿನ ಹೀಯಾಳಿಸುತ್ತಿತ್ತು.
ತೂತಾಗಿರುವ ಬಿಂದಿಗೆಯು ತನಗೆ ಒದಗಿರುವ ದುಸ್ಥಿತಿಯನ್ನು ನೆನದು ಮರುಗುತ್ತ ಕಣ್ಣೀರು ಹಾಕುತ್ತಿತ್ತು. ನೀರು ತುಂಬಿಕೊಂಡು ಕಾಡಿನ ದಾರಿಯಲ್ಲಿ ಬರುತ್ತಿದ್ದಾಗ ದಾರಿ ಮಧ್ಯೆ ಸರಿಯಿದ್ದ ಬಿಂದಿಗೆಯು ತೂತಾದ ಬಿಂದಿಗೆಯನ್ನು ಹೀಯಾಳಿಸುತ್ತಲೇ ಇತ್ತು. ತೂತಾದ ಬಿಂದಿಗೆಯ ಕಣ್ಣೀರನ್ನು ನೋಡಿ ಇನ್ನೊಂದು ಬಿಂದಿಗೆಯು ಒಳಗೊಳಗೇ ನಗುತ್ತಿತ್ತು. ಇದನ್ನು ಗಮನಿಸಿದ ಅಜ್ಜಿಯು ಎರಡೂ ಬಿಂದಿಗೆಗಳ ಬಳಿ ನಿಮ್ಮ ಸಮಸ್ಯೆ ಏನೆಂದು ಕೇಳುತ್ತಾಳೆ. ಆಗ ತೂತಾದ ಬಿಂದಿಗೆಯು ತನ್ನ ಸಮಸ್ಯೆ ಹಾಗೂ ತಾನು ಯಾವುದಕ್ಕೂ ಉಪಯೋಗವಿಲ್ಲದೇ ನಿರುಪಯುಕ್ತ ಬಿಂದಿಗೆಯಾಗಿದ್ದೇನೆ ಎಂದು ತನ್ನ ಅಳಲನ್ನು ಅಜ್ಜಿಯಲ್ಲಿ ತೋಡಿಕೊಂಡಿತು.
ಆಗ ಅಜ್ಜಿಯ ನಗುತ್ತಾ ಎರಡೂ ಮಡಿಕೆಗಳನ್ನು ಅಕ್ಕಪಕ್ಕದಲ್ಲಿ ಕುಳ್ಳಿರಿಸಿಕೊಂಡು, ನೋಡಿ ಮಡಿಕೆಗಳಾ ನಿಮ್ಮಿಬ್ಬರಲ್ಲಿ ಯಾರೂ ಇಲ್ಲಿ ಕೀಳು ಅಲ್ಲ. ಏಕೆಂದರೆ ನಾನು ಪ್ರತಿನಿತ್ಯ ತೂತಾಗದೆ ಇರುವ ಬಿಂದಿಗೆಯನ್ನು ನನ್ನ ಬಲಗೈಯಲ್ಲಿ ಹಾಗೂ ತೂತಾದ ಬಿಂದಿಗೆಯನ್ನು ಎಡಗೈಯಲ್ಲಿ ಹಿಡಿದುಕೊಂಡು ನಿತ್ಯ ನೀರನ್ನು ತುಂಬಿಕೊಂಡು ಮನೆಗೆ ಹೋಗುತ್ತೇನೆ. ತೂತಾಗದೆ ಇರುವ ಬಿಂದಿಗೆಯಲ್ಲಿ ನೀರನ್ನು ತುಂಬಿಕೊಂಡು ಕಾಡಿನ ಹಾದಿಯಲ್ಲಿ ಮನೆಯೆಡೆಗೆ ಹೋಗುವಾಗ ಒಂದು ತೊಟ್ಟು ನೀರೂ ಹೊರ ಚೆಲ್ಲದೆ ಹಾಗೆಯೇ ನನ್ನ ಮನೆಗೆ ಸೇರುತ್ತಿತ್ತು. ಆದರೆ ತೂತಾದ ಬಿಂದಿಗೆಯನ್ನು ನನ್ನ ಎಡಗೈಯಲ್ಲಿ ಹಿಡಿದುಕೊಂಡು ನೀರನ್ನು ತುಂಬಿಕೊಂಡು ಮನೆಯೆಡೆಗೆ ಸಾಗುತ್ತೇನೆ. ಆಗ ಅದರಲ್ಲಿದ್ದ ನೀರು ದಾರಿಯುದ್ದಕ್ಕೂ ಚೆಲ್ಲುತ್ತಾ ಕೇವಲ ಅರ್ಧ ಬಿಂದಿಗೆಯಷ್ಟೇ ನೀರು ನನ್ನ ಮನೆಗೆ ಸೇರುತ್ತಿತ್ತು.
ಮಡಿಕೆಗಳಾ ಈಗ ನೋಡಿ ಬಲಗೈಯಲ್ಲಿ ತುತಾಗದೇ ಇರುವ ಬಿಂದಿಗೆಯಿಂದ ಒಂದು ಹನಿಯೂ ನೀರು ಹೊರಚೆಲ್ಲದೇ ಇದ್ದ ಕಾರಣ ನಾನು ಸಾಗುತ್ತಿದ್ದ ಹಾದಿಯುದ್ದಕ್ಕೂ ಬಲಭಾಗದಲ್ಲಿ ಒಂದೇ ಒಂದು ಗಿಡಗಳು ಬೆಳೆಯದೇ ಬರೇ ಗುಡ್ಡವಾಗಿ ಉಳಿದು ಬಿಟ್ಟಿದೆ. ಆದರೆ ಎಡಗೈಯಲ್ಲಿ ತೂತಾದ ಬಿಂದಿಗೆಯಲ್ಲಿ ನೀರನ್ನು ತುಂಬಿಕೊಂಡು ಸಾಗುತ್ತಿದ್ದ ಕಾರಣದಿಂದ ಅದರ ತೂತಿನ ಮೂಲಕ ಹೊರಚೆಲ್ಲಿದ ನೀರಿನಿಂದಾಗಿ ಎಡಭಾಗದಲ್ಲಿ ದಾರಿಯುದ್ದಕ್ಕೂ ಹಸಿರು ಹಸಿರಾದ ಗಿಡ ಮರಗಳು ಹೇರಳವಾಗಿ ಬೆಳೆದಿವೆ. ನನ್ನ ಮನೆಗೆ ಮಡಿಕೆಯಲ್ಲಿ ನೀರನ್ನು ತೆಗೆದುಕೊಂಡು ಹೋಗುವಾಗ ಪೂರ್ತಿ ಬಿಂದಿಗೆ ನೀರು ದೊರೆಯದಿದ್ದರೂ ದಾರಿಯುದ್ದಕ್ಕೂ ಅದರಿಂದ ಚೆಲ್ಲಿದ ನೀರಿನ ಕಾರಣದಿಂದಾಗಿ ಗಿಡಮರಗಳು ಹಚ್ಚ ಹಸುರಾಗಿ ಮತ್ತು ಸೊಂಪಾಗಿ ಬೆಳೆದಿವೆ. ಆದ್ದರಿಂದ ಇಲ್ಲಿ ತೂತಾದ ಬಿಂದಿಗೆಯನ್ನು ಕೀಳೆಂದು ಕರೆಯಲು ಸಾಧ್ಯವಿಲ್ಲ. ಮತ್ತು ನಿಮ್ಮಿಬ್ಬರಲ್ಲಿ ಯಾರೂ ಶ್ರೇಷ್ಠರು ಅಥವಾ ಯಾರೂ ಕೀಳೆಂದು ಹೇಳಲು ಸಾಧ್ಯವಿಲ್ಲ.
ಯಾವುದಕ್ಕೂ ಉಪಯೋಗವಿಲ್ಲವೆಂದು ನಾವು ದೂರವಿಡುವ ವಸ್ತುಗಳು ಅಥವಾ ವ್ಯಕ್ತಿಗಳು ಒಂದಲ್ಲ ಒಂದು ರೀತಿಯಲ್ಲಿ ನಮಗೆ ಅಥವಾ ಸಮಾಜಕ್ಕೆ ಹಲವು ಸಂದರ್ಭಗಳಲ್ಲಿ ಉಪಕಾರಿಗಳೇ ಆಗಿರುತ್ತಾರೆ. ಆದ್ದರಿಂದ ಇಲ್ಲಿ ಮೇಲು ಕೀಳೆಂಬುದು ಖಂಡಿತ ಒಳ್ಳೆಯದಲ್ಲ ಎಂದು ಅಜ್ಜಿಯು ಎರಡೂ ಬಿಂದಿಗೆಗಳಿಗೆ ಕಿವಿಮಾತನ್ನು ಹೇಳುತ್ತಾಳೆ. ಇದರಿಂದ ಜ್ಞಾನೋದಯವಾದ ಎರಡೂ ಬಿಂದಿಗೆಗೆಳು ಹಿಂದಿನಂತೆಯೇ ಉತ್ತಮ ಗೆಳೆಯರಾಗಿ ಸಹ ಜೀವನವನ್ನು ನಡೆಸಲು ಪ್ರಾರಂಭಿಸಿದವು.
ನೀತಿ: ಸಮಾಜದಲ್ಲಿ ಯಾರೂ ಕೀಳಲ್ಲ, ಯಾರೂ ಮೇಲಲ್ಲ; ಸಮಯ ಸಂದರ್ಭದಲ್ಲಿ ನಿರುಪಯೋಗಿಗಳಾಗಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಪ್ರತಿಯೊಬ್ಬರೂ ಅತ್ಯಂತ ಅವಶ್ಯಕ.
– ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ.