– ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ.
ಕೃಷ್ಣದೇವರಾಯನ ಆಸ್ಥಾನದಲ್ಲಿ ತೆನಾಲಿರಾಮನೆಂಬ ಆಸ್ಥಾನ ವಿದೂಷಕನಿದ್ದನು. ತೆನಾಲಿರಾಮನಿಗೆ ರಾಜನು ಅರಮನೆಯ ಸಮೀಪದಲ್ಲೇ ಮನೆಯನ್ನೂ ನಿರ್ಮಿಸಿ ಅಲ್ಲಿ ವಾಸಿಸಲು ಅನುಕೂಲ ಮಾಡಿಕೊಟ್ಟಿರುತ್ತಾನೆ. ಒಂದು ದಿನ ಕೃಷ್ಣದೇವರಾಯ ಆಸ್ಥಾನದ ಪಂಡಿತರಿಗೆ ಮತ್ತು ಸಿಬ್ಬಂದಿಗಳಿಗೆ ಭೋಜನ ಕೂಟವನ್ನು ಏರ್ಪಡಿಸುತ್ತಾನೆ. ಈ ಭೋಜನ ಕೂಟದಲ್ಲಿ ರಾಜನು ಅರಮನೆಯ ತೋಟದಲ್ಲೇ ಬೆಳೆದ ಬದನೆಕಾಯಿಯಿಂದ ಸಾಂಬಾರನ್ನು ತಯಾರಿಸಿ ಬಡಿಸುತ್ತಾನೆ. ಊಟದಲ್ಲಿ ಬದನೆಯ ಸಾಂಬಾರಿನ ರುಚಿಗೆ ಎಲ್ಲರೂ ಎರಡೆರಡು ಮೂರು ಮೂರು ಬಾರಿ ಸಾಂಬಾರು ಬಡಿಸಿಕೊಂಡು ತಿಂದು ತೇಗುತ್ತಾರೆ. ಊಟ ಮುಗಿದ ಬಳಿಕ ಎಲ್ಲರ ಬಾಯಿಯಲ್ಲೂ ರಾಜನ ತರಕಾರಿ ತೋಟದಲ್ಲಿ ಬೆಳೆದಿದ್ದ ಬದನೆಕಾಯಿಯ ರುಚಿಯದ್ದೇ ಮಾತು. ಅರಮನೆಯಲ್ಲಿ ಊಟ ಮಾಡಿ ಮನೆಗೆ ತೆರಳಿದ ತೆನಾಲಿರಾಮ ರಾಜನ ಆಸ್ಥಾನದ ತರಕಾರಿ ತೋಟದ ಬದನೆಯ ರುಚಿಯ ಕುರಿತ ಹೊಗಳಿಕೆಯಿಂದ ತೆನಾಲಿರಾಮನ ಹೆಂಡತಿಯ ಬಾಯಲ್ಲಿ ನೀರೂರಲಾರಂಭಿಸಿತು. ಹೇಗಾದರೂ ಮಾಡಿ ಕೃಷ್ಣದೇವರಾಯನ ಆಸ್ಥಾನದ ತರಕಾರಿ ತೋಟದ ಬದನೆಕಾಯಿಯನ್ನು ನಮ್ಮ ಮನೆಗೂ ತಂದು ಸಾಂಬಾರು ಮಾಡಿ ತಿನ್ನಲೇಬೇಕೆಂದು ಹೆಂಡತಿ ಪಟ್ಟು ಹಿಡಿದುಬಿಟ್ಟಳು.
ತನ್ನ ತೋಟದ ಬದನೆಕಾಯಿಯ ಕುರಿತು ವಿಪರೀತ ಕಾಳಜಿಯಿದ್ದ ಕೃಷ್ಣದೇವರಾಯ ತೋಟವನ್ನು ಕಾವಲು ಕಾಯಲು ಕಾವಲುಗಾರರನ್ನು ನೇಮಿಸಿದ್ದಲ್ಲದೆ, ಒಂದು ಬದನೆಕಾಯಿ ಕಳುವಾದರೂ ಕಳವು ಮಾಡಿದವರ ಶಿರಚ್ಛೇದನ ಮಾಡಲು ಆಜ್ಞೆ ಮಾಡಿದ್ದ. ಈ ವಿಚಾರ ತೆನಾಲಿರಾಮನ ಹೆಂಡತಿಗೆ ತಿಳಿದಿದ್ದರೂ, ತೆನಾಲಿರಾಮ ವಿವರಿಸಿ ಹೇಳಿದರೂ ಹೆಂಡತಿ ತನ್ನ ಪಟ್ಟನ್ನು ಬಿಡಲೇ ಇಲ್ಲ. ಹೆಂಡತಿಯ ಹಠಕ್ಕೆ ಸೋತ ತೆನಾಲಿರಾಮ ತನ್ನ ಚಾಣಾಕ್ಷತನದಿಂದ ತೋಟದ ಕಾವಲುಗಾರರ ಕಣ್ತಪ್ಪಿಸಿ ಎರಡು ಬದನೆಕಾಯಿ ಕದ್ದು ತಂದು ಹೆಂಡತಿಗೆ ಕೊಡುತ್ತಾನೆ. ಹೆಂಡತಿ ಬದನೆ ಸಾಂಬಾರು ಮಾಡಿ ಗಡದ್ದಾಗಿ ಊಟ ಮಾಡುತ್ತಾಳೆ.
ತೆನಾಲಿರಾಮ ದಂಪತಿಗಳಿಗಿದ್ದ ಏಕೈಕ ನಾಲ್ಕು ವರ್ಷದ ಪುತ್ರ ಮನೆಯ ಮಾಳಿಗೆಯಲ್ಲಿ ನಿದ್ರಿಸುತ್ತಿದ್ದ. ಇಷ್ಟೊಂದು ರುಚಿಯಾದ ಬದನೆ ಸಾಂಬಾರನ್ನು ಮಗನಿಗೆ ಕೊಡದಿದ್ದರೆ ತಪ್ಪಾಗುತ್ತದೆಯೆಂದು ಹೆಂಡತಿ ಬೇಸರಿಸುತ್ತಾಳೆ. ಮಗ ಎಲ್ಲಾದರೂ ಅರಮನೆಯ ಬದನೆಕಾಯಿಯ ಸಾಂಬಾರು ತಿಂದದ್ದನ್ನು ಹೊರಗಡೆ ಎಲ್ಲಾದರೂ ಹೇಳಿಬಿಟ್ಟರೆ ತಲೆ ಹೋಗುತ್ತದೆಯೆಂಬ ಭಯದಿಂದ ಮಗನಿಗೆ ಕೊಡಬೇಡ ಎಂದು ತೆನಾಲಿರಾಮ ಹೇಳುತ್ತಾನೆ. ಹೆಂಡತಿಯ ಒತ್ತಾಯಕ್ಕೆ ಮಣಿದ ತೆನಾಲಿರಾಮ ಒಂದು ಉಪಾಯ ಹೂಡುತ್ತಾನೆ. ಒಂದು ಬಕೆಟ್ ತುಂಬಾ ನೀರನ್ನು ತೆಗೆದುಕೊಂಡು ಉಪ್ಪರಿಗೆಯಲ್ಲಿ ಮಲಗಿದ್ದ ಮಗನ ಮೇಲೆ ನೀರನ್ನು ಪೂರ್ತಿ ಸುರಿದು, ‘ನೋಡು ಮಗಾ ಮಳೆ ಜೋರಾಗಿ ಬರುತ್ತಿದೆ, ಎದ್ದೇಳು ಊಟ ಮಾಡು ಬಾ’ ಎಂದು ಎಬ್ಬಿಸಿ ಕೆಳಗೆ ಕರೆದುಕೊಂಡು ಬರುತ್ತಾನೆ. ಒದ್ದೆಯಾಗಿದ್ದ ಬಟ್ಟೆಯನ್ನು ಬದಲಾಯಿಸಿ, ಬದನೆಕಾಯಿ ಸಾಂಬರನ್ನು ಬಡಿಸಿ ಊಟ ಮಾಡಿಸುತ್ತಾನೆ. ಮಗ ನಿದ್ದೆಯಲ್ಲೇ ಖುಷಿಯಿಂದ ಊಟ ಮಾಡುತ್ತಾನೆ.
ನಂತರ ಮತ್ತೆ ತೆನಾಲಿರಾಮ ಹೊರಗಡೆ ಮಳೆ ಬರುತ್ತಿದೆ ನೀನು ಒಳಗೆ ಮಲಗಿಕೋ ಎಂದು ಮತ್ತೆ ಮಗನನ್ನು ಮಲಗಿಸುತ್ತಾನೆ. ಬೆಳಗಾಗುತ್ತಿದ್ದಂತೆ ಅರಮನೆಯ ತೋಟದಿಂದ ಎರಡು ಬದನೆಕಾಯಿ ಕಳುವಾಗಿರುವ ವಿಚಾರ ಅರಮನೆಯಲ್ಲಿ ಬಹು ದೊಡ್ಡ ಸುದ್ದಿಯಾಯಿತು. ಈ ಕೆಲಸ ಬುದ್ಧಿವಂತನಾದ ತೆನಾಲಿರಾಮ ಬಿಟ್ಟರೆ ಬೇರೆ ಯಾರೂ ಮಾಡಲಸಾಧ್ಯವೆಂದು ರಾಜ ನಿರ್ಧರಿಸುತ್ತಾನೆ. ಆದರೆ ತೆನಾಲಿರಾಮ ಬುದ್ಧಿವಂತಿಕೆ ಉಪಯೋಗಿಸಿ ತಪ್ಪಿಸಿಕೊಳ್ಳುತ್ತಾನೆ ಎಂದು ಅರಿತ ರಾಜ ನೇರವಾಗಿ ಆತನ ಮಗನನ್ನು ಆಸ್ಥಾನಕ್ಕೆ ಕರೆಸಿದರೆ ಆತ ಸತ್ಯ ಹೇಳುತ್ತಾನೆಂದು ಮಗನನ್ನು ಕರೆಸುತ್ತಾನೆ. ರಾತ್ರಿ ರುಚಿಯಾದ ಬದನೆ ಸಾಂಬಾರಿನ ಊಟ ಮಾಡಿರುವುದನ್ನು ಮಗ ಒಪ್ಪಿಕೊಂಡಾಗ ರಾಜನು ತೆನಾಲಿರಾಮನ ಶಿರಚ್ಛೇದ ಮಾಡಲಷ್ಟೇ ಬಾಕಿ ಉಳಿದಿತ್ತು.
ಆಗ ತೆನಾಲಿರಾಮ ಸ್ವಾಮೀ ನನ್ನ ಮಗ ಕನಸಿನಲ್ಲಿ ಏನೇನೋ ಕನವರಿಸುತ್ತಾನೆ, ಆತನ ಮಾತನ್ನು ನಂಬಬೇಡಿ ಎನ್ನುತ್ತಾ ಬೇಕಿದ್ದರೆ ನಿನ್ನೆ ಮಳೆ ಬಂದಿತ್ತಲ್ಲವೇ ಎಂದು ನೀವೇ ಕೇಳಿ ಎಂದು ರಾಜನಿಗೆ ಹೇಳುತ್ತಾನೆ. ರಾಜನು ಇದೇ ಪ್ರಶ್ನೆಯನ್ನು ಮಗನಿಗೆ ಕೇಳುತ್ತಾನೆ.
ಅದಕ್ಕೆ ಉತ್ತರಿಸಿದ ತೆನಾಲಿರಾಮನ ಮಗ ಹೌದು ಸ್ವಾಮಿ ನಿನ್ನೆ ರಾತ್ರಿ ಜೋರಾಗಿ ಮಳೆ ಬಂದಿತ್ತು, ನಾನು ಮಳೆಗೆ ಒದ್ದೆಯಾಗಿದ್ದ ಬಟ್ಟೆ ಬದಲಿಸಿ ನಂತರ ಒಳಗಡೆ ಕೋಣೆಯಲ್ಲಿ ಮಲಗಿದೆ ಎಂದು ಹೇಳುತ್ತಾನೆ. ನಿನ್ನೆ ರಾತ್ರಿ ಮಳೆಯೇ ಬಂದಿಲ್ಲ ಇವನ ಮಗನು ಭ್ರಮೆಯಿಂದ ಏನೇನೋ ಮಾತನಾಡುತ್ತಾನೆ ಎಂದರಿತ ಕೃಷ್ಣದೇವರಾಯನು ತೆನಾಲಿರಾಮ ಕಳ್ಳನಲ್ಲ ಎಂದು ನಿರ್ಧರಿಸಿ ಆತನನ್ನು ಅಪರಾಧಿಯಲ್ಲವೆಂದು ಸಾರಿ ಎರಡು ಬದನೆಕಾಯಿಯನ್ನು ಉಡುಗೊರೆಯಾಗಿ ನೀಡಿ ಕಳುಹಿಸುತ್ತಾನೆ.
ನೀತಿ: ಉಪಾಯ ಹಾಗೂ ಬುದ್ಧಿವಂತಿಕೆಯಿದ್ದರೆ ಎಂತಹ ಗಂಡಾಂತರದಿಂದಲೂ ಪಾರಾಗಬಹುದು.
– ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ.