ನಮ್ಮ ಸುತ್ತ ಮುತ್ತಲೂ ಅನೇಕ ರೀತಿಯ ವ್ಯಕ್ತಿತ್ವದವರನ್ನು ಕಾಣುತ್ತೇವೆ.ತನ್ನ ಮೂಗಿನ ನೇರಕ್ಕೆ ಮಾತನಾಡುವವರು ಕೆಲವರಾದರೆ,ಯಾವಾಗಲೂ ತನ್ನ ಬಗ್ಗೆಯೇ ಕೊಚ್ಚಿಕೊಳ್ಳುವವರು ಹಲವರು.ಇತರರ ತಪ್ಪುಗಳನ್ನು ಹುಡುಕಿ ಗೇಲಿ ಮಾಡುವವರು ಒಂದೆಡೆಯಾದರೆ,ಮಾತಿನಲ್ಲಿ ವ್ಯಂಗ್ಯವನ್ನು ಹಾಲು ಜೇನಿನಂತೆ ಬೆರೆಸಿ ಮಾತನಾಡುವವರು ಮತ್ತೊಂದೆಡೆ ಆಡಿದ ಮಾತಿಗೆ ಸಿಡಿಲಿನಂತೆ ಬಡಿವವರು,ಮಾತಿಗೆ ಪ್ರತಿ ಮಾತನ್ನೆ ಆಡದವರು,ಸದಾ ತನ್ನ ನೋವನ್ನೆ ತೋಡಿಕೊಳ್ಳುವವರು,ಒಂದೇ ಒಂದು ಮಾತಿಗೆ ಜೀವನ ಪರ್ಯಂತ ನಿಷ್ಠುರ ತನ ತೋರುವವರು,ಕಾರಣವಿಲ್ಲದೆ ಮಾತು ಬಿಡುವವರು,
ಬೆಣ್ಣೆಯಿಂದ ಕೂದಲು ತೆಗೆದಂತೆ ನಯವಾಗಿ ಮಾತನಾಡುವವರು,ತನ್ನ ಎದುರು ಬಣ್ಣ ಬಣ್ಣವಾಗಿ ಮಾತನಾಡಿ ಹಿಂಬದಿಯಿಂದ ಚೂರಿ ಹಾಕುವವರು,ಎಂದಿಗೂ ಯಾರ ಮುಂದೆಯೂ ತಲೆ ಬಾಗದವರು,ಎಲ್ಲವನ್ನು ಸಹಿಸಿಕೊಂಡು ಮೌನವಾಗಿ ದುಃಖಿಸುವವರು, ತನ್ನದೇ ಸರಿ ಎನ್ನುವ ಮೊಂಡು ಸ್ವಭಾವದವರು, ತಾನು ಹೇಳಿದ್ದೇ ನಡೆಯಬೇಕೆಂಬ ಒರಟು ನಡೆಯವರು,ಯಶಸ್ಸಿನ ಎಲ್ಲಾ ಮೆಟ್ಟಿಲನ್ನು ಏರಿ ಮೊದಲ ಮೆಟ್ಟಿಲನ್ನು ಮರೆವವರು,ಯಾವಾಗಲೂ ತನ್ನವರ ಒಳಿತಿಗಾಗಿಯೆ ಚಿಂತಿಸುವವರು,ತನ್ನ ಗುಟ್ಟನ್ನು ಎಂದಿಗೂ ಬಿಟ್ಟು ಕೊಡದವರು,ಯಾವಾಗಲೂ ತನ್ನ ಸಂಗಾತಿಯನ್ನು ದೂರುವವರು,ಎಂದಿಗೂ ತನ್ನ ಸಂಗಾತಿಯನ್ನು ಇತರರ ಎದುರಿಗೆ ಕುಗ್ಗಿಸದವರು,ಸದಾ ಕೋಪಿಷ್ಟರು,ಯಾವಾಗಲೂ ನಗುಮೊಗದಿಂದ ಇರುವವರು,ಯಾರಿಗೂ ಗೌರವ ಕೊಡದವರು,ಅಧಿಕಾರ,ಹಣದ ಮದದಿಂದ ಮಾತಾಡುವವರು,ಆಗಾಗ ಮಾತು ಬಿಡುವವರು, ಯಾವಾಗಲೂ ತಾನೇ ಎತ್ತರದಲ್ಲಿರಬೇಕೆಂದು ಬಯಸುವವರು, ಹೀಗೆ ಪಟ್ಟಿ ಮಾಡುತ್ತ ಹೊರಟರೆ ಹನುಮಂತನ ಬಾಲದಂತೆ ವಿಭಿನ್ನ ವ್ಯಕ್ತಿತ್ವ ನಮ್ಮ ಸುತ್ತಮುತ್ತಲೂ ಸುಳಿದಾಡುತ್ತಿರುತ್ತವೆ.
ಎಷ್ಟೇ ಅಂಜನ ಹಾಕಿ ಹುಡುಕಿದರೂ ಒಂದಲ್ಲ ಒಂದು ದೋಷಗಳು ಸಿಕ್ಕೇ ಸಿಗುತ್ತವೆ.ಪರಿಪೂರ್ಣ ವ್ಯಕ್ತಿತ್ವ ಎನ್ನುವುದು ಕೇವಲ ಒಂದು ಪದವಷ್ಟೆ ಹೊರತು ಅದು ಜೀವನದ ಭಾಗವಲ್ಲ. ಈ ಮೇಲಿನ ವ್ಯಕ್ತಿತ್ವದಲ್ಲಿ ಎಷ್ಟು ಮುಖಗಳು ನಿಮ್ಮದೆಂದು ಪ್ರಾಮಾಣಿಕವಾಗಿ ಲೆಕ್ಕಹಾಕಿ..ಹೊರಗಿನ ಪ್ರಪಂಚಕ್ಕೆ ನಾವು ಏನೇ ಹೇಳಿದರೂ ನಮ್ಮ ಒಳಮನಸ್ಸು ಮಾತ್ರ ಸತ್ಯವನ್ನೇ ಹೇಳುತ್ತದೆ.
ನಮ್ಮ ವ್ಯಕ್ತಿತ್ವ ಹೇಗಿರಬೇಕು ಎನ್ನುವುದೇ ನಮಗೆ ಅರಿವಿಲ್ಲ ಆದರೆ ಬೇರೆಯವರು ಹೇಗಿರಬೇಕೆಂದು ನಾವು ಥಟ್ಟನೆ ಹೇಳುತ್ತೇವೆ.ನಮ್ಮೊಳಗೆ ನೂರು ರಂದ್ರಗಳಿದ್ದು ,ಇತರರ ಚಿಕ್ಕ ಚಿಕ್ಕ ತಪ್ಪುಗಳನ್ನೇ ದೊಡ್ಡದಾಗಿ ಬಿಂಬಿಸುತ್ತೇವೆ .
ನೀತಿ: ಸದಾ ಬೇರೆಯವರಿಂದ ತನಗಾದ ನೋವನ್ನು ತೋರ್ಪಡಿಸುವವರು ಬೇರೆಯವರ ದೋಷಗಳನ್ನು ಎತ್ತಿಹಿಡಿವವರು, ಒಮ್ಮೆಯಾದರೂ ಯೋಚಿಸಿದ್ದೀರಾ?ನಿಮ್ಮಿಂದಲೂ ಇತರರಿಗೆ ನೋವಾಗಿರಬಹುದು,ನಿಮ್ಮಿಂದಲು ನಿಮಗರಿವಿಲ್ಲದೆ ಅನೇಕ ತಪ್ಪುಗಳಾಗಿರಬಹುದು. ಇಲ್ಲಿ ಯಾರೂ ಪರಿಪೂರ್ಣರೂ ಇಲ್ಲ,ಸರ್ವಜ್ಞರೂ ಇಲ್ಲ. ಸರಿತಪ್ಪುಗಳ ತಕ್ಕಡಿ ಸಮದೂಗುವುದೇ ಇಲ್ಲ ಇನ್ನು ಏತಕ್ಕಾಗಿ ಈ ಹೋರಾಟ? ಏಕಾಗಿ ಈ ಬಡಿದಾಟ? ಮಾಡದ ತಪ್ಪಿಗಾಗಿ ಕೊರಗದಿರಿ. ನಮ್ಮ ತಪ್ಪುಗಳನ್ನು ಅರಿತು ಸರಿಪಡಿಸಿ ಸುಂದರ ವ್ಯಕ್ತಿತ್ವ ನಮ್ಮದಾಗಿಸಿಕೊಳ್ಳೋಣ.ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ತಲೆ ಬಾಗೋಣ. ನೀವೇನಂತೀರಿ?…..