ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ‘ಮಕ್ಕಳು ತಮಗೆ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ತಂದೆ-ತಾಯಿಯರ ಗುರು-ಹಿರಿಯರ ಪಾತ್ರ ಅತ್ಯಂತ ಮುಖ್ಯವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಹೇಳಿದರು.
ಸಮೀಪದ ಯರಗಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ದೀಪದಾನ, ಪ್ರತಿಭಾ ಪುರಸ್ಕಾರ ಹಾಗೂ ಮಾತೃ-ಪಿತೃ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾರ್ಥಿಗಳು ಒಳ್ಳೆಯ ಮೌಲ್ಯ ಹಾಗೂ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಗುಣಾತ್ಮಕ ಹಾಗೂ ಪರಿಣಾಮಕಾರಿ ಫಲಿತಾಂಶವನ್ನು ನೀಡುವುದರ ಮೂಲಕ ಶಾಲೆ ಹಾಗೂ ಗ್ರಾಮಕ್ಕೆ ಹೆಸರು ತರಬೇಕು’ ಎಂದರು.
ವೈ.ವೈ.ಕೊಕ್ಕನವರ, ಉತ್ತಮಕುಮಾರ ಮಗದುಮ್ ಮಾತನಾಡಿದರು. ಶ್ರೀಶೈಲ ಮಠಪತಿ ಸಾನಿಧ್ಯ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷೆ ಶಾಂತವ್ವ ಕಂಕಣವಾಡಿ, ಪ್ರಭಾರಿ ಮುಖ್ಯಶಿಕ್ಷಕ ಐ.ಡಿ.ನದಾಫ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಬೆಳ್ಳನ್ನವರ ಇತರರು ಇದ್ದರು.

