ಡಿಎಸ್ಸೆಸ್ ಮುಖಂಡರಿಂದ ಸುದ್ದಿಗೋಷ್ಠಿ: ಆಲಗೂರ ಗೆ ಕಾಂಗ್ರೆಸ್ ಟಿಕೆಟ್ ನೀಡಲು ಆಗ್ರಹ
ವಿಜಯಪುರ: ಬರಲಿರುವ ವಿದಾನಸಭೆ ಚುನಾವಣೆಯಲ್ಲಿ ನಾಗಠಾಣ ಮೀಸಲು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಶಾಸಕ ರಾಜು ಆಲಗೂರ ಅವರನ್ನು ಆಯ್ಕೆ ಮಾಡಬೇಕು. ಒಂದು ವೇಳೆ ಅವರಿಗೆ ಟಕೆಟ್ ಕೈ ತಪ್ಪಿದರೆ ಜಿಲ್ಲೆಯಾದ್ಯಂತ ಎಸ್ ಸಿ ಬಲಗೈ ಸಮುದಾಯವು ಮತದಾನವನ್ನು ಬಹಿಷ್ಕರಿಸುವುದಾಗಿ ಜಿಲ್ಲೆಯ ಡಿಎಸ್ಸೆಸ್ ಮುಖಂಡರು ಒಕ್ಕೊರಲಿನಿಂದ ಎಚ್ಚರಿಕೆ ನೀಡಿದರು.
ಶನಿವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಎಸ್ಸೆಸ್ ಮುಖಂಡರಾದ ರಮೇಶ ಆಸಂಗಿ, ವಿನಾಯಕ ಗುಣಸಾಗರ, ಸಿದ್ದು ರಾಯಣ್ಣ, ಅಶೋಕ ಚಲವಾದಿ, ಅಡಿವೆಪ್ಪ ಸಾಲಗಲ್ ಮೊದಲಾದವರು ರಾಜು ಆಲಗೂರ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಲೇಬೇಕೆಂದು ಆಗ್ರಹಿಸಿದರು.
ರಾಜು ಆಲಗೂರ ಅವರು ೧೯೯೦ ರಿಂದಲೂ ಅವಳಿ ಜಿಲ್ಲೆಯಲ್ಲಿ ಡಿಎಸ್ಸೆಸ್ ಸಂಘಟನೆ ಮೂಲಕ ಹತ್ತು ಹಲವು ಹೋರಾಟಗಳಿಂದ ಜನನಾಯಕರಾಗಿ ಬೆಳೆದವರು. ಮಾಜಿ ಸಚಿವ ದಿ. ಬಿ.ಎಂ. ಪಾಟೀಲರು ಇವರಿಗೆ ರಾಜಕೀಯಕ್ಕೆ ಕರೆ ತಂದು ಅವಕಾಶ ಒದಗಿಸಿದರು. ಈಗ ಶಾಸಕ ಎಂ.ಬಿ. ಪಾಟೀಲ ಅವರು ಸಹ ಆಲಗೂರ ಅವರಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಕಳೆದ ವಿದಾನಸಭೆ ಚುನಾವಣೆಯಲ್ಲಿ ಎಂ.ಬಿ.ಪಾಟೀಲರು ಇವರನ್ನು ಲೋಕಸಭೆಗೆ ಸ್ಪರ್ಧಿಸಲು ತಿಳಿಸಿದ್ದರಿಂದ ವಿದಾನಸಭೆಗೆ ಅವಕಾಶ ಸಿಗಲಿಲ್ಲ. ಆದರೆ ಬಳಿಕ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರದ ಒಪ್ಪಂದದಿಂದ ಆ ಅವಕಾಶವೂ ಕೈ ತಪ್ಪಿತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರ ಸ್ವಾಮಿಯವರು ಜೆಡಿಎಸ್ ಟಿಕೆಟ್ ಕೊಡಲು ಮುಂದೆ ಬಂದರೂ ಆಲಗೂರ ಅವರು ಪಕ್ಷ ನಿಷ್ಠೆಯಿಂದ ಹಾಗೂ ಎಂ.ಬಿ.ಪಾಟೀಲರ ಮೇಲಿನ ಅಭಿಮಾನದಿಂದ ಒಪ್ಪಿಕೊಳ್ಳಲಿಲ್ಲ.
ಹೀಗಿರುವಾಗ ಈ ಸಲವೂ ರಾಜು ಆಲಗೂರ ಅವರಿಗೆ ಟಿಕೆಟ್ ಕೈ ತಪ್ಪುವ ಮಾತುಗಳು ಕೇಳಿಬರುತ್ತಿದ್ದು, ಅದೇನಾದರೂ ನಿಜವಾದರೆ ತಾವೆಲ್ಲ ಆಲಗೂರ ಅವರ ಪರವಾಗಿ ಹೋರಾಟಕ್ಕಿಳಿಯುವುದಾಗಿ ಘೋಷಿಸಿದರು.
ಜಿಲ್ಲೆಯಲ್ಲಿ 3.20 ಲಕ್ಷಕ್ಕೂ ಅಧಿಕ ಚಲವಾದಿ (ಬಲಗೈ) ಸಮುದಾಯವಿದೆ. ನಾಗಠಾಣ ಮತಕ್ಷೇತ್ರದಲ್ಲಿ ೩೫ಸಾವಿರಕ್ಕೂ ಅಧಿಕ ಸಮಾಜ ಬಾಂಧವರಿದ್ದಾರೆ. ಸಮಾಜದ ಬೆಂಬಲವುಳ್ಳ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಿರಿಯ ನಾಯಕರೂ, ಮಾಜಿ ಶಾಸಕರೂ ಆದ ರಾಜು ಆಲಗೂರ ಅವರಿಗೆ ನಾಗಠಾಣ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಬೇಕೆಂದು ತಾವು ಶಾಸಕ ಎಂ.ಬಿ.ಪಾಟೀಲ ಅವರಿಗೆ ಮತ್ತು ರಾಜ್ಯ ನಾಯಕರಿಗೆ ಆಗ್ರಹಿಸುವುದಾಗಿ ಮುಖಂಡರು ತಿಳಿಸಿದರು.