ವಿಜಯಪುರ: ಯುವಕನೊಬ್ಬ ತನ್ನ ಜೊತೆಗಾರನನ್ನು ಚಾಕುವಿಂದ ಹತ್ಯೆ ಮಾಡಿ, ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದ ಲಕ್ಷ್ಮಿ ಚಿತ್ರಮಂದಿರ ಎದುರಿನ ರಾಜಧಾನಿ ಲಾಡ್ಜ್ ನಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷ್ಣಪುರ ತಾಂಡಾ ನಿವಾಸಿ ಸಿ.ಇಂದ್ರಕುಮಾರ ಕೊಲೆಯಾದ ವ್ಯಕ್ತಿ.
ಈತನನ್ನು ಕೊಲೆ ಮಾಡಿದ ಇನ್ನೊಬ್ಬ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ. ಆತನೂ ಸಹ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಜಧಾನಿ ಲಾಡ್ಜ್ ರೂಮ್ ನಂಬರ್ 114 ನಲ್ಲಿ ಎರಡೂ ಶವಗಳು ಹತ್ತಿರ ಹತ್ತಿರವಾಗಿ ಬಿದ್ದಿರುವುದು ಪತ್ತೆಯಾಗಿದೆ.
ಇಂದ್ರಕುಮಾರ ಎಂಬವನು ಇದೇ ಮಾರ್ಚ್ 22ರಂದು ಲಾಡ್ಜ್ ಗೆ ಆಗಮಿಸಿ ತನ್ನ ಆಧಾರ ಕಾರ್ಡ್ ತೋರಿಸಿ ರೂಮ್ ನಂ 114 ಪಡೆದು ಕೊಂಡಿದ್ದನು. ನಂತರ ಇತನ ರೂಮ್ ಗೆ ಇನ್ನೊಬ್ಬ ವ್ಯಕ್ತಿ ಯಾವಾಗ ಬಂದಿದ್ದಾನೆ ಎನ್ನುವುದು ಸ್ವತಃ ಲಾಡ್ಜ್ ಸಿಬ್ಬಂದಿ ಹಾಗೂ ಮಾಲೀಕರಿಗೂ ಗೊತ್ತಾಗಿಲ್ಲ. ಎರಡು ದಿನ ರೂಮ್ ಬಾಗಿಲೂ ಸಹ ತೆರೆದಿರಲಿಲ್ಲ. ಶುಕ್ರವಾರ ಬೆಳಗ್ಗೆ 10ಗಂಟೆ ಸುಮಾರಿಗೆ ರೂಮ್ ನಿಂದ ಕೆಟ್ಟ ವಾಸನೆ ಬರಲು ಆರಂಭಿಸಿದಾಗ ಲಾಡ್ಜ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ರೂಮ್ ಬಾಗಿಲು ತೆಗೆದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.
ಇಂದ್ರಕುಮಾರ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಆತನ ಮೇಲೆ ಕೊಲೆ ಮಾಡಿದ ಇನ್ನೊಬ್ಬ ವ್ಯಕ್ತಿಯ ಶವ ಬಿದ್ದಿರುವುದು ಪತ್ತೆಯಾಗಿದೆ.
ಇದರ ಜತೆ ರೂಮ್ ನಲ್ಲಿ ಒಂದು ಬೈಕ್ ಕೀ ಪತ್ತೆಯಾಗಿದೆ. ಆ ಬೈಕ್ ವಿಜಯಪುರ ತಾಲೂಕಿನ ಅರಕೇರಿ ನಿವಾಸಿಯೊಬ್ಬರ ಹೆಸರಿನಲ್ಲಿ ರಜಿಸ್ಟರ್ ಹೊಂದಿದೆ. ಆ ವ್ಯಕ್ತಿ ಈ ಇಬ್ಬರ ಸಾವಿಗೆ ಸಂಬಂಧ ಇರಬಹುದಾ? ಅಥವಾ ಆ ಬೈಕ್ ಕಳ್ಳತನ ಮಾಡಿಕೊಂಡು ತರಲಾಗಿದೆಯಾ? ಎನ್ನುವುದು ತನಿಖೆಯಿಂದ ಪತ್ತೆಯಾಗಬೇಕಾಗಿದೆ.
ಇದು ಜೋಡಿ ಕೊಲೆಯೋ ಅಥವಾ ಜೋಡಿ ಆತ್ಮಹತ್ಯೆಯೋ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸ್ಯಳಕ್ಕೆ ಶ್ವಾನಗಳು, ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಸಂಗ್ರಹಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಆನಂದಕುಮಾರ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.
ಮೃತ ಇಂದ್ರಕುಮಾರ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.
ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.