ಸಹೋದರಗೆ ಸವಾಲೆಸೆದ ಶಾಂತಗೌಡ | ತೀವ್ರ ವಾಗ್ದಾಳಿ | ದಾಖಲೆ ಬಿಡುಗಡೆಯ ಎಚ್ಚರಿಕೆ
ಮುದ್ದೇಬಿಹಾಳ: ಮುಂಬರುವ ದಿನಗಳಲ್ಲಿ ನಾನು ಗೆದ್ದುಬಂದರೆ ಸುಮಾರು ೧೦ ಸಾವಿರ ಉದ್ಯೋಗ ಸೃಷ್ಠಿ ಮಾಡುತ್ತೇವೆ. ಪ್ರತಿ ಕುಟುಂಬದ ಮಹಿಳೆಗೆ ಒಂದು ಹಸು ಕೊಡುವುದರ ಮೂಲಕ ತಿಂಗಳಿಗೆ ೩೦ ಸಾವಿರ ಸಂಪಾದನೆ ಮಾಡುವಂತೆ ಮಾಡುತ್ತೇನೆ ಎಂದು ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ)ಯವರು ಹೇಳಿಕೆ ನೀಡುವ ಮೂಲಕ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ನಾವೇ ಶಾಸಕರಿಗೊಂದು ಹಸು ಕೊಡಿಸುತ್ತೇವೆ. ತಿಂಗಳಿಗೆ ೩೦ ಸಾವಿರ ದುಡಿದು ತೋರಿಸಲಿ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ಸವಾಲೆಸೆದರು.
ಗುರುವಾರ ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ)ಯವರು ಕೇವಲ ಸಿಸಿ ರಸ್ತೆಗಳನ್ನು ಮಾಡಿ ಅವುಗಳಿಗೆ ವಿದ್ಯುತ್ ದೀಪಗಳನ್ನು ಹಾಕಿದರೆ ನಿಜವಾದ ಅಭಿವೃದ್ಧಿಯಾಗುವುದಿಲ್ಲ ಎಂದು ಕುಟುಕಿದರು.
ಮುಖ್ಯಮಂತ್ರಿ ಸಿದ್ರಾಮಯ್ಯನವರ ಆಡಳಿತದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಗಳ ಅನುದಾನ ತರುವ ಮೂಲಕ ಹಿಂದುಳಿದ ಜನಾಂಗದ ಎಸ್‌ಸಿ, ಎಸ್ಟಿ ವಸತಿ ಕಾಲೇಜು, ಸರಕಾರಿ ಶಾಲೆಗಳನ್ನು, ವಿದ್ಯುತ್ ಸ್ಥಾವರಗಳು ಸೇರಿದಂತೆ ಹಲವಾರು ನೀರಾವರಿ ಯೋಜನೆಗಳು, ರಸ್ತೆ ನಿರ್ಮಾಣ ಯೋಜನೆಗಳಲ್ಲಿ ಅಭಿವೃದ್ಧಿಪಡಿಸಿದ ಕೀರ್ತಿ ಮಾಜಿ ಸಚಿವ ಸಿ.ಎಸ್.ನಾಡಗೌಡ ಅವರಿಗೆ ಸಲ್ಲುತ್ತದೆ. ಆದರೆ ಹಿಂದಿನ ಶಾಸಕರ ಸರಕಾರದ ಆಡಳಿತದಲ್ಲಿ ಆದ ಕಾಮಗಾರಿಗಳಿಗೆ ನಡಹಳ್ಳಿಯವರು ತಾವು ಮಾಡಿದೆನೆಂದು ಜನರಲ್ಲಿ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು.
ಶಾಸಕರು ಕುಟುಂಬ ರಾಜಕಾರಣ, ದುರಾಡಳಿತ, ಅನೈತಿಕ ರಾಜಕಾರಣ ಮತ್ತು ಬಿಜೆಪಿ ಮೂಲ ಕಾರ್ಯಕರ್ತರ ಹಾಗೂ ಪ್ರಮುಖ ಮುಖಂಡರ ಕಡೆಗಣೆಗೆ ಸಾಕ್ಷಿ ತಾಳಿಕೋಟೆಯಲ್ಲಿ ನಡೆದ ಬಿಜೆಪಿಯ ವಿಜಯಸಂಕಲ್ಪ ಯಾತ್ರೆ ವಿಫಲಗೊಂಡಿದ್ದು. ತಾಲೂಕಿನ ನಾಲತವಾಡದಲ್ಲಿ ಮುಖ್ಯಮಂತ್ರಿಗಳು ವಿವಿಧ ಕಾಮಗಾರಿಗಳ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿಯೂ ಸಹ ಬಿಜೆಪಿ ಮೂಲ ಕಾರ್ಯಕರ್ತರು, ಮುಖಂಡರು ಗೈರು ಉಳಿದು ವಿರೋಧದ ನಡೆ ಪ್ರದರ್ಶಿಸಿದರು. ಇಂತಹ ಸಂದರ್ಭದಲ್ಲಿ ಈ ಬಾರಿ ೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಎ.ಎಸ್.ಪಾಟೀಲ(ನಡಹಳ್ಳಿ)ರಿಗೆ ಟಿಕೆಟ್ ಕೊಟ್ಟರೆ ಖಂಡಿತ ಸೋಲು ಕಟ್ಟಿಟ್ಟಂತೆ. ಹಾಗಾಗಿ ಬಿಜೆಪಿ ವರಿಷ್ಠರು ನಡಹಳ್ಳಿಯವರಿಗೆ ಟಿಕೆಟ್ ನೀಡದೇ ಮೂಲ ಬಿಜೆಪಿ ಕಾರ್ಯಕರ್ತರಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲ ಒಗ್ಗಟ್ಟಾಗಿ ಮತ್ತೆ ಬಿಜೆಪಿ ಗೆಲ್ಲಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.
ಬಬಲೇಶ್ವರ ಶಾಸಕ ಎಂ.ಬಿ ಪಾಟೀಲರು ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭ ಸುಮಾರು ರೂ.೭೫೦ ಕೋಟಿ ಭ್ರಷ್ಟಾಚಾರವೆಸಗಿದ್ದು ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ಕೊಟ್ಟಿದ್ದರು. ಆದರೆ ಸಧ್ಯ ರಾಜ್ಯದಲ್ಲಿ ತಮ್ಮದೇ ಸರಕಾರವಿದ್ದರೂ ತಾವು
ಯಾಕೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿವೇಶನದಲ್ಲಿ ಧ್ವನಿ ಎತ್ತಲಿಲ್ಲ.? ಎಂದು ಪ್ರಶ್ನಿಸಿದರು.
ಮತಕ್ಷೇತ್ರದ ಯಾವೊಬ್ಬ ಗುತ್ತಿಗೆದಾರರಿಂದ ಒಂದು ನಯಾ ಪೈಸೆ ಹಣ ಕಮೀಷನ್ ಪಡೆದಿಲ್ಲ ; ಸುಮ್ಮನೆ ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳುವ ಶಾಸಕ ನಡಹಳ್ಳಿಯವರು ಶೇ. ೧೦ ರಿಂದ ೧೫ ರಷ್ಟು ಕಮೀಷನ್ ಪಡೆದಿರುವ ದಾಖಲೆಗಳು ಮತ್ತು ಗುತ್ತಿಗೆದಾರರ ಬಳಿ ಹಣ ಪಡೆಯುತ್ತಿರುವ ವಿಡಿಯೋಗಳು ನನ್ನ ಹಾಗೂ ಗುತ್ತಿಗೆದಾರರ ಬಳಿ ಇವೆ. ಭ್ರಷ್ಟಾಚಾರದಿಂದಲೇ ಸುಮಾರು ರೂ.೩೫೦ ಕೋಟಿ ಗಳಿಸಿದ್ದಾರೆ. ಅದರಲ್ಲಿ ನನ್ನ ನೇತೃತ್ವದಲ್ಲಿಯೇ ಬಹುತೇಕ ಗುತ್ತಿಗೆದಾರರು ರೂ.೯೫ ಕೋಟಿವರೆಗೆ ಕಮೀಷನ್ ಕೊಟ್ಟಿದ್ದಾರೆ. ನನ್ನ ಸಹೋದರರಿದ್ದೀರಿ ಎನ್ನುವ ಕಾರಣಕ್ಕೆ ನಾನು ಮೌನ ವಹಿಸಿದ್ದೇನೆ ಎಂದು ಶಾಂತಗೌಡ ಗಂಭೀರ ಆರೋಪ ಮಾಡಿದರು.