*– ಮ.ನಾ.ಉಡುಪ, ಮಂಡ್ಯ
ಕುರಿಗಳನ್ನು ಕಾಯಲು ದೊಡ್ಡಿಯ ಬಳಿ ಮಲಗುತ್ತಿದ್ದ ನಾಯಿ ಬಲು ಚುರುಕಾಗಿತ್ತು. ಎಡೆಬಿಡದೆ ಕಾವಲು ಕಾಯುತ್ತಿತ್ತು. ಇದು ತೋಳಲ್ಲಿ ಬಹಳ ಕಷ್ಟಕ್ಕಿಟ್ಟುಕೊಂಡಿತು. ಹೇಗಾದರೂ ಮಾಡಿ ನಾಯಿಯ ಲಕ್ಷವನ್ನು ಬೇರೆಡೆ ಎಳೆದು ತಾನು ದೊಡ್ಡಿಯನ್ನು ಪ್ರವೇಶಿಸಿ ಕೆಲವಾದರೂ ಕುರಿಗಳನ್ನು ಕಬಳಿಸಬೇಕು ಎಂದದರ ಯೋಚನೆಯಾಗಿತ್ತು. ಹೀಗೆ ಯೋಚನೆ ಮಾಡುತ್ತಿದ್ದಂತೆ ತೋಳಕ್ಕೆ ಫಕ್ಕನೆ ನೆನಪಾಯಿತು..
‘ನಿಜ, ನಾಯಿಗೆ ಎಲುಬು ಚೀಪುವುದೆಂದರೆ ಬಹಳ ಆಸೆ.’ ಅಂತಲೇ ತೋಳ ಪ್ರತಿದಿನ ಎಲ್ಲಿಂದಲಾದರೂ ಒಂದು ಎಲುಬು ಸಂಪಾದಿಸಿ ತಂದು ದೊಡ್ಡಿಯ ಅಕ್ಕಪಕ್ಕದಲ್ಲೆಲ್ಲಾದರೂ ಇಡುತ್ತಿತ್ತು. ನಾಯಿಗೆ ಎಲುಬು ಸಿಕ್ಕಿದರೂ
ಅದು ಯಾರು ತಂದಿಟ್ಟಿದ್ದು ಎಂದು ಗೊತ್ತಾಗಲಿಲ್ಲ.
ಒಂದು ದಿನ ತೋಳ ಎಲುಬು ತರುವುದನ್ನೂ, ಅದನ್ನು ತನ್ನ ದೊಡ್ಡಿಯ ಸಮೀಪದಲ್ಲಿ ಇಟ್ಟು ಹೋಗುವುದನ್ನು ನಾಯಿ ನೋಡಿತು. ತೋಳನ ಮೇಲೆ ಅದಕ್ಕೆ ಇದ್ದ ವೈಮನಸ್ಯ ಅಂದಿನಿಂದ ದೂರವಾಯಿತು.
ಹೀಗೆ ತೋಳ ಮತ್ತು ನಾಯಿ ಇಬ್ಬರೂ ಸಂಜೆಯ ಹೊತ್ತಿಗೆ ಸೇರಿ ಅದೂ ಇದೂ ಮಾತನಾಡಿಕೊಳ್ಳುತ್ತಿದ್ದುವು. ಒಂದು ದಿನ ತೋಳ ನಾಯಿಗೆ ಕುರಿಯ ಎಲುಬು ತುಂಬ ರುಚಿಕಟ್ಟಾಗಿರುವುದರಿಂದ ಅದನ್ನು ದಿನವೂ ತಿಂದರೆ ತುಂಬಾ ಒಳ್ಳೆಯದು ಎಂದು ಉಪದೇಶ ಮಾಡಿತು.
“ಅದೆಲ್ಲ ಸರಿ. ಆದರೆ ನಿನಗೆ ದಿನವೂ ಎಲುಬು ಹೇಗೆ ಸಿಕ್ಕುತ್ತದೆ ?”- ಕೇಳಿತು ನಾಯಿ.
“ಅದೆಲ್ಲ ವಿಚಾರ ನನಗೆ ಬಿಡು, ನಾನು ನೋಡಿಕೊಳ್ತೇನೆ”- ಎಂದಿತು ತೋಳ.
ತದನಂತರ ಪ್ರತಿದಿನ ತೋಳ ದೊಡ್ಡಿಯಿಂದ ಕುರಿಗಳನ್ನು ಒಂದೊಂದಾಗಿ ಅಪಹರಿಸಿ ತಿನ್ನುತ್ತಿತ್ತು. ಅದರಲ್ಲಿ ಒಂದೆರಡು ಎಲುಬುಗಳನ್ನು ಚೀಪಲು ನಾಯಿಗೆ ನೀಡುತ್ತಿತ್ತು, ಹೀಗೆ ದಿನಗಳೆದಂತೆ ದೊಡ್ಡಿಯಲ್ಲಿ ಕುರಿಗಳು ಮಾಯವಾಗುತ್ತಿರುವುದನ್ನು ಗಮನಿಸಿದ ಕುರುಬ ನಾಯಿಯನ್ನು ಅದರ ವಿಶ್ವಾಸಘಾತಕತನಕ್ಕೆ ಗುಂಡಿಕ್ಕಿ ಕೊಂದನು.
ದುರ್ಜನರ ಸಂಗ ಎಂದೂ ಅಪಾಯಕಾರಿಯೆ.
*– ಮ.ನಾ.ಉಡುಪ, ಮಂಡ್ಯ