ಉದಯರಶ್ಮಿ ದಿನಪತ್ರಿಕೆ
ಕೊಲ್ದಾರ: ಉಡಿತುಂಬಿಸಿಕೊಳ್ಳುವ ಕಾರ್ಯಕ್ರಮವೆಂದರೆ ಹೆಣ್ಣುಮಕ್ಕಳಿಗೆ ಹಬ್ಬವಿದ್ದಂತೆ. ಇಂಥಹ ಕಾರ್ಯಕ್ರಮಗಳು ಜರುಗುತ್ತಿರುವದರಿಂದ ನಮ್ಮ ಭಾರತೀಯ ಪರಂಪರೆ ವಿಶ್ವದಲ್ಲಿಯೇ ಮಾದರಿಯಾಗಿದ್ದು, ಮಹಿಳೆಯರು ಸಮಾಜದಲ್ಲಿ ಜಾಗೃತಿಯಿಂದ ನಡೆದುಕೊಂಡು ಕುಟುಂಬ ವ್ಯವಸ್ಥೆಯು ಅಲುಗಾಡದಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿ ನಿಭಾಯಿಸಬೇಕು ಎಂದು ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಪಟ್ಟಣದಲ್ಲಿ ಜರುಗುತ್ತಿರುವ ತೆರಪಿ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು ಹಾಕಿಕೊಟ್ಟ ಸನಾತನ ಧರ್ಮ ಪರಂಪರೆಯನ್ನು ಸಂಸ್ಕೃತಿಯನ್ನು ಸಂಸ್ಕಾರವನ್ನು ನಿತ್ಯ ಪಾಲಿಸುವ ಪರಿಪಾಠವನ್ನು ಮಹಿಳೆಯರು ಹಿಂದಿನಿಂದಲೂ ಆಚರಿಸುತ್ತಾ ಬಂದಿದ್ದು ಮುಂದೆಯೂ ಕೂಡಾ ನಮ್ಮ ಮಕ್ಕಳಿಗೆ ಧರ್ಮ ಭೋಧನೆಯ ತತ್ವವನ್ನು ಉಳಿಸಲು ಸದಾವಕಾಲ ಆಚರಣೆಯಲ್ಲಿ ಉಳಿಯಬೇಕಾದರೆ ಜಾತ್ರೆ ಉತ್ಸವ ಪುರಾಣ ಪ್ರವಚನ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಸಾಗಬೇಕು ಎಂದರು.
ಪ್ರತಿಯೊಬ್ಬ ಮಹಿಳೆಯೂ ತನ್ನ ಜೀವಿತಾ ಅವಧಿಯು ಮುತ್ತೈದೆಯಾಗಿರಬೇಕು ಎಂದು ಬಯಸುತ್ತಾಳೆ. ಅದರ ಸಂಕೇತವಾಗಿಯೇ ಮಹಿಳೆಯರು ಕುಂಕುಮ, ಬಳೆ, ಕಾಲುಂಗುರ, ತಾಳಿ, ಮೂಗುತಿ ಎಂಬ ಐದು ಮುತ್ತುಗಳನ್ನು ಧರಿಸಿಕೊಂಡು ಸಂಸಾರದ ನೊಗವನ್ನು ಸದಾವಕಾಲ ಹೊತ್ತುಕೊಂಡು ನಡೆಯುತ್ತಿರುತ್ತಾಳೆ ಇಂಥಹ ಸಂದರ್ಬದಲ್ಲಿ ಏನಾದರೂ ತೊಂದರೆ ಬಂದರೆ ಸಹಿಸಿಕೊಂಡು ಬಾಳಿನ ಬಂಡಿಯನ್ನು ಜೀವನದುದ್ದಕ್ಕೂ ಎಳೆಯಬೇಕೆಂಬ ಕಟ್ಟಪ್ಪಣೆಯನ್ನು ಚಾಚು ತಪ್ಪದೇ ಬದಲಾದ ಜಗತ್ತಿನಲ್ಲಿಯೂ ಹೆಣ್ಣುಮಕ್ಕಳು ಪಾಲಿಸಲು ಮುಂದಾಗಬೇಕೆಂದು ಕರೆಕೊಟ್ಟರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬರುವ ಮುಂದಿನ ದಿನಮಾನಗಳಲ್ಲಿ ಪಕ್ಷದ ಹೈಕಮಾಂಡ ಮುಖ್ಯಮಂತ್ರಿ ಸ್ಥಾನವನ್ನು ಮಹಿಳೆಯರಿಗೆ ಪ್ರಾಶಸ್ತ್ರ ಕೊಟ್ಟರೆ ಅಂಥಹ ಸದಾವಕಾಶ ಸಹೋದರಿ ಶಶಿಕಲಾ ಜೊಲ್ಲೆಯವರಿಗೆ ದೊರಕುವಂತಾಗಲಿ ಎಂದು ಆ ಜಗನ್ಮಾತೆ ರೇಣುಕಾದೇವಿಯಲ್ಲಿ ನಾನು ಪ್ರಾರ್ಥಿಸುತ್ತೇನೆ. ಜೊಲ್ಲೆಯವರು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವಂತಾಗಲಿ ಎಂದು ಹಾರೈಸುತ್ತೇನೆ ಎಂದರು.
ದೇವಸ್ಥಾನದ ಅರ್ಚಕ ಪೂಜ್ಯ ಸಂಗಪ್ಪ ಬಾಟಿ ಸಾನಿಧ್ಯವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರು, ಮಾಜಿ ಸಂಸದ ಅಣ್ಣಾಸಾಹೇಬ ಶಂಕರ ಜೊಲ್ಲೆ, ಅತಿಥಿಗಳಾಗಿ ಚಂದ್ರಶೇಖರಯ್ಯ ಗಣಕುಮಾರ, ಕಸ್ತೂರಿ ಬೆಳ್ಳುಬ್ಬಿ, ದೇವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

