ವಿಜಯಪುರ: ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಸೋಮವಾರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ, ಟರ್ಮಿನಲ್ ಕಟ್ಟಡ, ನಿಲ್ದಾಣದ ರನ್ವೇ, ಟ್ಯಾಕ್ಸಿ ವೇ, ಬ್ಯಾಗೇಜ್ ಹ್ಯಾಂಡಲಿಂಗ್ ವ್ಯವಸ್ಥೆ, ಸೆಕ್ಯುರಿಟಿ ಸ್ಕ್ಯಾನರ್ ಸೇರಿದಂತೆ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ, ಭದ್ರತಾ ಉಪಕರಣಗಳು ಸೇರಿದಂತೆ ಬಾಕಿ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪ್ರಗತಿ ಪರಿಶೀಲನೆ ನಡೆಸಿ, ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವುದನ್ನು ಒಳಗೊಂಡಂತೆ ಎಲ್ಲ ಭೌತಿಕ ಕಾಮಗಾರಿಗಳು ಶೇ.90ರಷ್ಟು ಪೂರ್ಣಗೊಂಡಿದ್ದು, ಶೀಘ್ರವೇ ಎಲ್ಲ ಕಾಮಗಾರಿಗಳು ಪೂರ್ಣಗೊಂಡು ವಿಮಾನಗಳ ಹಾರಾಟ ನಡೆಯಲಿದೆ ಎಂದರು.
ಜನವರಿಯಲ್ಲಿ ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ (ಡಿಜಿಸಿಎ) ಪರಿವೀಕ್ಷಣೆಗೆ ಆಗಮಿಸಿ ಪರಿವೀಕ್ಷಣೆ ನಡೆಸಲಿದ್ದಾರೆ.
ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಸೇರಿದಂತೆ ಬಾಕಿ ಇರುವ ಲೋಕೋಪಯೋಗಿ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಲು ಸೂಚಿಸಲಾಗಿದೆ. ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ನಂತರ ಈ ಭಾಗದ ಸರ್ವಾಂಗೀಣ ಬೆಳವಣಿಗೆಗೆ ಅನುಕೂಲವಾಗಲಿದ್ದು, ವಿಮಾನಗಳ ಹಾರಾಟದಿಂದ ಸಮಯದ ಉಳಿತಾಯದೊಂದಿಗೆ ಪ್ರಮುಖ ವಾಣಿಜ್ಯ ಬೆಳೆಯಾದ ದ್ರಾಕ್ಷಿ ಸೇರಿದಂತೆ ಇತರ ಕೃಷಿ ಉತ್ಪನ್ನಗಳ ರಫ್ತಿಗೂ ಅನುಕೂಲವಾಗಲಿದೆ. ವ್ಯಾಪಾರ ವಹಿವಾಟಕ್ಕೂ ಉತ್ತೇಜನ ದೊರೆಯಲಿದ್ದು, ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಎರಡನೇ ಹಂತದ 125 ಕೋಟಿ ರೂ.ಗಳಲ್ಲಿ ಎರಡು ಉಪ ಕಾಮಗಾರಿಗಳಾಗಿ ವಿಂಗಡಿಸಲಾಗಿದ್ದು, ಸಿವಿಲ್ ಕಾಮಗಾರಿಗಾಗಿ 105.60 ಕೋಟಿ ರೂ.ಗಳು ಹಾಗೂ ಏವಿಯೋನಿಕ್ಸ / ಸೆಕ್ಯೂರಿಟಿ ಉಪಕರಣಳ ಕಾಮಗಾರಿಗಾಗಿ 19.40 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಈ ಸಿವಿಲ್ ಕಾಮಗಾರಿಯು 105.60. ಕೋಟಿಗಳಲ್ಲಿ 86.20 ಕೋಟಿಗಳ ಮೊತ್ತದಲ್ಲಿ ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿ.ಎಪ್.ಆರ್. ಕಟ್ಟಡ, ಕಂಪೌಂಡ್ ಗೋಡೆ ಹಾಗೂ ಇತರೆ ಕಾಮಗಾರಿಗಳನ್ನು ಅಭಿವೃದ್ದಿಪಡಿಸಲಾಗುತ್ತಿದ್ದು, ಕಾಮಗಾರಿ ಮುಕ್ತಾಯ ಹಂತದಲ್ಲಿದೆ.
ಸಿವಿಲ್ ಉಪಕಾಮಗಾರಿಗಳಲ್ಲಿ ಉಳಿದ ಮೊತ್ತ 19.40 ಕೋಟಿಗಳಲ್ಲಿ ವಿವಿಧ ಉಪಕಾಮಗಾರಿಗಳಿದ್ದು, ಮೊದಲನೇಯದಾಗಿ ರೂ.1.39 ಕೋಟಿ ಮೊತ್ತದಲ್ಲಿ ವಿಮಾನ ನಿಲ್ದಾಣ ಆವರಣದಲ್ಲಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವುದನ್ನು ಪರಿಗಣಿಸಲಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ. 5.94 ಕೋಟಿ ರೂ. ಮೊತ್ತದಲ್ಲಿ ವಿಮಾನ ನಿಲ್ದಾಣಕ್ಕೆ 24/7 ನೀರು ಸರಬರಾಜು ಕಾಮಗಾರಿ ಪೂರ್ಣಗೊಂಡಿದೆ. 3.65 ಕೋಟಿ ರೂ. ಮೊತ್ತದ ವಿಮಾನ ನಿಲ್ದಾಣಕ್ಕೆ 2000 ಕಿ.ಲೋ.ವ್ಯಾಟ್ ನಿರಂತರ ವಿದ್ಯುತ್ ಸರಬರಾಜು ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದ ಮೊತ್ತದ ಕಾಮಗಾರಿಯ ಮೇಲ್ವಿಚಾರಣೆ ಮಾಡುವ ತಾಂತ್ರಿಕ ಸಂಸ್ಥೆಗೆ ಶುಲ್ಕ ಪಾವತಿ ಮಾಡುವುದು ಹಾಗೂ ಇತರೆ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಯಶವಂತರಾಯಗೌಡ ಪಾಟೀಲ, ಸಿ.ಎಸ್.ನಾಡಗೌಡ, ಅಶೋಕ ಮನಗೂಳಿ, ಮಾಜಿ ಶಾಸಕ ರಾಜು ಆಲಗೂರ, ಲೋಕೋಪಯೋಗಿ ಇಲಾಖೆಯ ಧಾರವಾಡ ಉತ್ತರ ವಲಯದ ಮುಖ್ಯ ಅಭಿಯಂತರ ಎಚ್.ಸುರೇಶ, ವಿಜಯಪುರ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಕಾರ್ಯನಿರ್ವಾಹಕ ಅಭಿಯಂತರ ರಾಜುಕೃಷ್ಣ ಮುಜುಮದಾರ, ಗುತ್ತಿಗೆದಾರ ಎಸ್.ಎಸ್.ಆಲೂರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಂ.ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

