ವಿಜಯಪುರ: ನಗರದ ಮಾರುಕಟ್ಟೆ ಪ್ರದೇಶದಲ್ಲಿ ಸುಗಮ ಸಂಚಾರ, ಸ್ವಚ್ಛತೆ, ವ್ಯಾಪಾರಸ್ಥರಿಗೆ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಕೆಲವರು ವ್ಯವಸ್ಥೆ ಕೆಡಿಸುವ ಹುನ್ನಾರ ನಡೆಸಿದ್ದು, ಯಾವುದೇ ಕಾರಣಕ್ಕೂ ಅದು ನಡೆಯದು ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸೋಮವಾರ ವ್ಯಾಪಾರಸ್ಥರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಬೀದಿ ದೀಪ ಅಳವಡಿಕೆ ಮಾಡಲಾಗಿದೆ, ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ದೇಶದಲ್ಲಿ ವಿಜಯಪುರ ಅತ್ಯುತ್ತಮ ವಾತಾರಣ ನಗರಗಳ ಪಟ್ಟಿಯಲ್ಲಿ ೬ನೇ ಸ್ಥಾನ ಪಡೆದಿರುವುದೇ ಸಾಕ್ಷಿ ಎಂದು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ, ಸೂಕ್ತವಾದ ನಿಗದಿತ ಸ್ಥಳಾವಕಾಶ ಕಲ್ಪಿಸಿ, ಅಂಗಡಿಕಾರರಿಗೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಸುಮಾರು ೩೫ ಕಡೆ ಕಾಯಿಪಲ್ಲೆ ಮಾರುಕಟ್ಟೆ ಮಾಡಿದ್ದರಿಂದ ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆ ಆಗಿದ್ದು, ಸಂಚಾರಕ್ಕೆ ಅಡೆತಡೆ ಆಗುತ್ತಿಲ್ಲ. ನಗರದ ಸುತ್ತಮುತ್ತಲಿನ ರೈತರು ಕಾಯಿಪಲ್ಲೆ ಮಾರಾಟ ಮಾಡಲು ಹಾಗೂ ಸಾರ್ವಜನಿಕರಿಗೆ ತಾಜಾ ಮತ್ತು ಸಮೀಪಲ್ಲೇ ಕಾಯಿಪಲ್ಲೆ ಸಿಗುವಂತಾಗಿದೆ ಎಂದು ಹೇಳಿದರು.
ಬಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗೋಕುಲ ಮಹಿಂದ್ರಕರ ಮಾತನಾಡಿದರು.
ಮಹಾನಗರ ಪಾಲಿಕೆ ಸದಸ್ಯರು, ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು, ವ್ಯಾಪಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

