ಬಸವನಬಾಗೇವಾಡಿ: ನಮ್ಮ ಅನ್ನದಾತರಿಗೆ ನೋವಾಗುವಂತಹ ಅಥವಾ ಅವರನ್ನು ಅಪಮಾನಿಸುವಂತಹ ಮಾತುಗಳನ್ನು ಜವಳಿ, ಕಬ್ಬು ಅಭಿವೃದ್ದಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಬಾಯಿತಪ್ಪಿಯೂ ಆಡುವುದಿಲ್ಲ. ಅವರು ರೈತರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಅವರು ಸೋಮವಾರ ದೂರವಾಣಿಯ ಮೂಲಕ ಸುದ್ದಿಗಾರರರೊಂದಿಗೆ ಮಾತನಾಡಿ, ಸಚಿವರು ಮಾತಾಡಿದ ಒಟ್ಟು ಭಾಷಣವನ್ನು ಒಮ್ಮೆ ಸರಿಯಾಗಿ ಕೇಳಿಸಿಕೊಂಡರೆ ಎಂಥವರಿಗೂ ಅದು ಅರ್ಥವಾಗುತ್ತದೆ. ಆದರೆ ವಿರೋಧ ಪಕ್ಷ ಬಿಜೆಪಿ ವಿರೋಧಿಸಲೇಬೇಕೆಂದು ಕೆಲವು ಮಾತುಗಳನ್ನಷ್ಟೇ ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಹಿಡಿದ ಕನ್ನಡಿ ಅಷ್ಟೇ. ಇವತ್ತು ರಾಜ್ಯದ ಬಹುತೇಕ ವಾಣಿಜ್ಯ ಬೆಳೆಗಳ ಬೆಲೆಗಳನ್ನು ಕಡಿತ ಗೊಳಿಸಲಾಗಿದೆ. ರೈತರಿಗೆ ನ್ಯಾಯವಾಗಿ ಸಿಗಬೇಕಾದ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಎಷ್ಟೇ ಮನವರಿಕೆ ಮಾಡಿಕೊಟ್ಟರೂ ತಮ್ಮಮೊಂಡಾಟ ಬಿಡುತ್ತಿಲ್ಲ. ಇದು ಲೋಕಸಭಾ ಚುನಾವಣೆಗಾಗಿ ಗ್ರಾಹಕರ ಕಣ್ಣೊರಿಸಿ ಅನ್ನದಾತರ ಹೊಟ್ಟೆ ಮೇಲೆ ಕಾಲಿಡುವ ತಂತ್ರ ಅಷ್ಟೇ ಅಲ್ಲ ರೈತರ ಮೇಲೆ ಕೇಂದ್ರ ಸರ್ಕಾರ ಮಾಡುತ್ತಿರುವ ಶೋಷಣೆ ಕೂಡ. “ರೈತರ ಬೆಳೆಗಳಿಗೆ ಸಿಗಬೇಕಾದ ನೈಜ ಬೆಲೆಗಳು ಸಿಕ್ಕರೆ ರೈತರೇ ಸಾಲಕೊಡುವಷ್ಟು ಸಬಲರಾಗುತ್ತಾರೆ. ಆಗ ಯಾರೂ ಸಾಲಮನ್ನಾ ಮಾಡಿ ಅನ್ನುವುದಿಲ್ಲ, ಬರಗಾಲದ ಪರಿಹಾರಕ್ಕೆ ಕಾಯುವಂತಹ ಪರಿಸ್ಥಿತಿ ನಮ್ಮ ರೈತರಿಗೆ ಬರುವುದಿಲ್ಲ” ಎಂಬರ್ಥದ ಮಾತುಗಳನ್ನಾಡಿದ್ದರೆ ವಿನಃ ಅನ್ನದಾತರನ್ನು ನೋಯಿಸುವಷ್ಟು ಕ್ರೂರ ಮನಸು ನಮ್ಮ ಸಚಿವರಿಗಿಲ್ಲ ಎಂದು ಹೇಳಿದರು.
ರಾಜ್ಯದ ರೈತರು ವಿರೋಧ ಪಕ್ಷದವರು ಮಾಡುವ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಸಚಿವ ಶಿವಾನಂದ ಪಾಟೀಲರು ಯಾವಾಗಲೂ ನಮ್ಮ ರೈತರ ಬೆಳವಣಿಗೆ ಬಗ್ಗೆ ಚಿಂತಿಸುವ ವ್ಯಕ್ತಿ .ಸಚಿವರು ಮಾಡಿದ ನೀರಾವರಿ ಯೋಜನೆಗಳಿಂದ ನಮ್ಮ ಬಸವನಬಾಗೇವಾಡಿ ಜನತೆ ಎಂದಿಗೂ ಮರೆಯುವುದಿಲ್ಲ. ಈ ವರ್ಷ ಮಳೆ ಬಾರದೆ ತೀವ್ರ ಬರಗಾಲ ಬಿದ್ದಾಗ ರೈತರ ಬೆಳೆಗಳಿಗೆ, ಜಾನುವಾರುಗಳಿಗೆ ಹಾನಿಯಾಗಬಾರದು ಎಂದು ಮನಗಂಡು ಕಾಲುವೆಗಳಿಗೆ ನೀರು ಹರಿಸಿ ಅನ್ನದಾತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ಬಗ್ಗೆ ಅಪಪ್ರಚಾರ ಮಾಡುವವರಿಗೆ ನಾಡಿನ ಜನತೆಯೇ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

