ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಟೀಕೆ | ಶಿಕ್ಷಣ ಕ್ಷೇತ್ರ ಕಲುಷಿತಗೊಳಿಸುವ ಕೆಲಸ | ಸಿಎಂ ವಿರುದ್ಧ ವಾಗ್ದಾಳಿ
ದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಹಿಜಾಬ್ ವಿಚಾರದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಮತ್ತೆ ಹಿಜಾಬ್‍ಗೆ ಅವಕಾಶ ಮಾಡಿಕೊಡುವುದಾಗಿ ಹೇಳುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಕೈಹಾಕಿರುವುದು ಈ ನಾಡಿನ ಒಂದು ದುರದೃಷ್ಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕರಾದ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದರು.
ಈ ಕುರಿತು ದೆಹಲಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಅವರಿಂದ ಇಂಥ ಹೇಳಿಕೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಕನಿಷ್ಠ ಪಕ್ಷ ಶಾಲಾ, ಕಾಲೇಜುಗಳಿಗೆ ಹೋಗುವ ಮಕ್ಕಳನ್ನಾದರೂ ರಾಜಕೀಯದಿಂದ ದೂರ ಇಡುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕಿತ್ತು ಎಂದು ಆಕ್ಷೇಪಿಸಿದರು.
ಮಾತೆತ್ತಿದರೆ ಕಾಂಗ್ರೆಸ್ಸಿಗರು ಅಲ್ಪಸಂಖ್ಯಾತರ ಕುರಿತು ಮಾತ್ರ ಮಾತನಾಡುತ್ತಾರೆ. ಕಾಂಗ್ರೆಸ್ಸಿಗರು, ತುಷ್ಟೀಕರಣ ನೀತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದ ಅವರು, ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯದ ನಂತರ 50ರಿಂದ 60 ವರ್ಷಗಳ ಕಾಲ ದೇಶ, ರಾಜ್ಯವನ್ನು ಆಳಿದೆ. ಆದರೂ, ಅಲ್ಪಸಂಖ್ಯಾತರಲ್ಲಿ ಶೇ 50ರಷ್ಟು ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದರೆ ಅದಕ್ಕೆ ಯಾರು ಹೊಣೆಗಾರರು ಎಂದು ಮುಖ್ಯಮಂತ್ರಿಗಳು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷವಲ್ಲವೇ? ಇವತ್ತಿಗೂ ಕೂಡ ಶೇ 60ಕ್ಕಿಂತ ಹೆಚ್ಚು ಅಲ್ಪಸಂಖ್ಯಾತ ಬಂಧುಗಳು ರಾಜ್ಯ, ದೇಶದಲ್ಲಿ ಕೆಲಸ ಇಲ್ಲದೆ ಬೇಜಬಾಬ್ದಾರಿಯಿಂದ ಓಡಾಡುತ್ತಿದ್ದರೆ ಅದಕ್ಕೆ ಹೊಣೆಗಾರರು ಕಾಂಗ್ರೆಸ್ ಪಕ್ಷದವರಲ್ಲವೇ ಎಂದು ಪ್ರಶ್ನಿಸಿದರು.
ಅಲ್ಪಸಂಖ್ಯಾತರನ್ನು ಮತಬ್ಯಾಂಕ್ ಆಗಿ ಕಾಂಗ್ರೆಸ್ ಪಕ್ಷ ದುರುಪಯೋಗ ಪಡಿಸಿಕೊಂಡಿದೆ. ಪ್ರಾಮಾಣಿಕವಾಗಿ ಅಲ್ಪಸಂಖ್ಯಾತರನ್ನು ಮೇಲೆತ್ತುವ ಕೆಲಸ ಮಾಡಿಲಿಲ್ಲ. ಅವರ ಶಿಕ್ಷಣಕ್ಕೆ ಒತ್ತು ಕೊಟ್ಟು ಆರ್ಥಿಕವಾಗಿ ಮೇಲೆತ್ತುವ ಕಾರ್ಯವನ್ನು ಕಾಂಗ್ರೆಸ್ ಮಾಡಲಿಲ್ಲ ಎಂದು ವಿಜಯೇಂದ್ರ ಅವರು ಟೀಕಿಸಿದರು.
ಬರಗಾಲವಿದ್ದರೂ ಸಚಿವರು ಅಧಿಕಾರಿಗಳ ಸಭೆ ನಡೆಸಿಲ್ಲ. ಈ ಬೇಬವಾಬ್ದಾರಿ ನಡೆ ಒಂದು ಕಡೆ ಇದ್ದರೆ, ಇನ್ನೊಂದೆಡೆ ಹಿಜಾಬ್ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಹಿಂದೂ ಹೆಣ್ಮಕ್ಕಳ ತಾಳಿ, ಕಾಲುಂಗುರ ತೆಗೆಸುತ್ತಾರೆ. ನಿಮ್ಮ ಉದ್ದೇಶ ಏನು? ಎಂದು ಕೇಳಿದರು. ಒಡೆದಾಳುವ ನೀತಿಯನ್ನು ಕೈಬಿಡಿ; ನೀವು ಆರೂವರೆ ಕೋಟಿ ಜನರ ಸಿಎಂ ಎಂದು ನೆನಪಿಡಿ ಎಂದು ಆಗ್ರಹಿಸಿದರು.

