ಶ್ರೀ ಗುರು ವೀರಘಂಟೈ ಮಡಿವಾಳೇಶ್ವರ ದೇವರ ಜೋಡು ತೇರಿನ ರಥೋತ್ಸವ
*ಶಿವಾನಂದ ಎಮ್.ಸಜ್ಜನ*
ಕಲಕೇರಿ: ಉತ್ತರ ಕರ್ನಾಟಕ ಧಾರ್ಮಿಕ ಪರಂಪರೆಯ ಇತಹಾಸದಲ್ಲಿ ಕಲಕೇರಿಯ ಆರಾಧ್ಯ ದೈವ ಶ್ರೀಗುರು ವೀರಘಂಟೈ ಮಡಿವಾಳೇಶ್ವರರು ಅಗ್ರಣೀಯರು. ೧೨ನೇ ಶತಮಾನದ ಬಸವ ಚಳುವಳಿಯ ಪ್ರಮುಖ ನೇತಾರರಾದ ಮಡಿವಾಳೇಶ್ವರರು ಕಲ್ಯಾಣ ಕ್ರಾಂತಿಯ ನಂತರ ಇಲ್ಲಿಯೇ ಬಂದು ತನ್ನ ಗುರುವಾದ ವೀರಘಂಟಿಯೊಂದಿಗೆ ಲಿಂಗೈಕ್ಯವಾಗಿದ್ದು, ಅದರ ಕುರುಹಾಗಿ ಶ್ರೀಗುರು ವೀರಘಂಟಿ ಮಡಿವಾಳೇಶ್ವರ ದೇವಸ್ಥಾನವು ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ತಮಿಳುನಾಡಿನಾದ್ಯಂತ ಭಕ್ತ ಸಮೂಹವನ್ನು ಹೊಂದಿ, ಗದ್ದುಗೆಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ. ಈ ದೇವಸ್ಥಾನವು ಹಿಂದು-ಮುಸ್ಲಿಂ ಭಾವಕೈತೆಯ ಸಂಕೇತವಾಗಿರುವುದಲ್ಲದೇ ಸರ್ವ ಜನಾಂಗದ ಬಹುದೊಡ್ಡ ಭಕ್ತ ಪರಂಪರೆಯನ್ನು ಹೊಂದಿದೆ.
ಇಲ್ಲಿ ಪ್ರತಿವರ್ಷ ಹೊಸ್ತಿಲ ಹುಣ್ಣಿಮೆಯಂದು ನಡೆಯುವ ಜಾತ್ರೆಯು ಕರ್ನಾಟಕದಲ್ಲಿ ನಡೆಯುವ ಜಾತ್ರೆಗಳಲ್ಲಿಯೇ ವಿಶೇಷವಾಗಿದೆ. ಇಲ್ಲಿ ಗುರು ಶಿಷ್ಯರ ಪರಂಪರೆಯ ಸಂಕೇತವಾಗಿ ಜಾತ್ರೆಯಲ್ಲಿ ಇಂದಿಗೂ ಜೋಡು ಉಚ್ಚಾಯಿ ಉತ್ಸವ, ಜೋಡು ತೇರು ಎಳೆಯುವ, ಜೋಡು ಕೊಡೆ, ಜೋಡು ತೆಂಗಿನಕಾಯಿ ಒಡೆಯುವ, ಜೋಡು ಪಾದುಗಟ್ಟೆಯನ್ನು ಹೊಂದಿದ ವಿಶೇಷವಾದ ಜಾತ್ರೆಯಾಗಿದ್ದು, ಪ್ರತಿ ವರ್ಷವೂ ಇಲ್ಲಿ ಲಕ್ಷಗಟ್ಟಲೆ ಜನರು ದೇವರ ದರುಶನ ಭಾಗ್ಯ ಪಡೆದುಕೊಂಡು ಪುನೀತರಾಗುತ್ತಾರೆ.
ಜಾತ್ರೆಯ ಪ್ರಯುಕ್ತ ಸರ್ವಧರ್ಮದ ಭಕ್ತ ಸಮೂಹ ೧೧ ದಿನ, ೫ ದಿನ, ೨ ದಿನ, ಒಂದು ದಿನ ಹೀಗೆ ದೇವರ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ರಥೋತ್ಸವದಿಂದ ೫ ದಿನಗಳ ಕಾಲ ಗ್ರಾಮದ ಭಕ್ತರು ಮನೆಯಲ್ಲಿ ರೊಟ್ಟಿಯನ್ನು ತಟ್ಟುವುದಿಲ್ಲ, ಕಳಸ ಇಳಿಸುವ ಕಾರ್ಯಕ್ರಮ ಮುಗಿದ ಮೇಲೆಯೇ ಮತ್ತೆ ರೊಟ್ಟಿಯನ್ನು ತಟ್ಟುತ್ತಾರೆ. ಹೀಗಾಗಿಯೇ ಪ್ರತಿ ಮನೆಯಲ್ಲಿಯೂ ಜಾತ್ರಿಯ ರೊಟ್ಟಿ ಎಂದು ಜಾತ್ರೆಯ ಮುಂಚಿತವಾಗಿಯೇ ಎಲ್ಲ ಮನೆಗಳಲ್ಲಿಯೂ ೧೦೦ ರಿಂದ ೫೦೦ ರ ವರೆಗೆ ರೊಟ್ಟಿಗಳನ್ನು ಮಾಡಿಟ್ಟುಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.


