ಬಸವನಬಾಗೇವಾಡಿ: ರಾಜ್ಯದಲ್ಲಿ ಕೋವಿಡ್ ಸೋಂಕಿನ ರೂಪಾಂತರಿಯಾದ ಜೆಎನ್ ೧ ಹರಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನರಿಗೆ ಸಾಕಷ್ಟು ಮುನ್ನಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ ನೀಡುತ್ತಿದ್ದರೂ ಬಹುತೇಕ ಜನರು ಮಾಸ್ಕ್ ಇಲ್ಲದೇ ಹೆಚ್ಚು ನಿರಾಳವಾಗಿ ಸಂಚಾರ ಮಾಡುತ್ತಿರುವುದು ನೋಡಿದರೆ ಈ ರೂಪಾಂತರಿಗೆ ಜನರು ಎದೆಗುಂದದೇ ನಿರಾಳವಾಗಿದ್ದಾರೆ. ಈ ರೂಪಾಂತರಿ ತನ್ನ ಅಟ್ಟಹಾಸ ತೋರುವ ಮುನ್ನ ಜನರು ಹೆಚ್ಚು ಮುಂಜಾಗ್ರತೆ ವಹಿಸುವದು ಮುಖ್ಯವಾಗಿದೆ.
ರಾಜ್ಯ ಸರ್ಕಾರ ೬೦ ದಾಟಿದವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿದರೂ ಬಹುತೇಕರು ಮಾಸ್ಕ್ ಇಲ್ಲದೇ ಸಂಚಾರ ಮಾಡುತ್ತಿದ್ದಾರೆ. ಬಸ್ ಪ್ರಯಾಣಿಕರು ಮುನ್ನಚ್ಚರಿಕೆ ಕ್ರಮವಾಗಿ ಬಸ್ನಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವಂತೆ ಸಾರಿಗೆ ಸಚಿವರು ಮನವಿ ಮಾಡಿಕೊಂಡಿದ್ದರೂ ಬಹುತೇಕ ಬಸ್ ಪ್ರಯಾಣಿಕರು ಮಾಸ್ಕ್ ರಹಿತರಾಗಿ ಸಂಚಾರ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಶಕ್ತಿಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದ್ದರಿಂದ ಹೆಚ್ಚು ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಬಸ್ಗಳು ತುಂಬಿ ತುಳುಕುತ್ತಿವೆ. ಜನಸಂದಣಿ ಇರುವೆಡೆ ಮಾಸ್ಕ್ ಧರಿಸುವಂತೆ ಸರ್ಕಾರ ಸೂಚನೆ ನೀಡಿದರೂ ಇದಕ್ಕೆ ಜನರು ಕ್ಯಾರೇ ಎನ್ನುತ್ತಿಲ್ಲ. ಬಸ್ ನಿಲ್ದಾಣ ಸೇರಿದಂತೆ ಎಲ್ಲೆಡೆ ಜನಸಂದಣಿ ಇರುವೆಡೆ ಬಹುತೇಕರು ಮಾಸ್ಕ್ ಧರಿಸದೇ ಸಂಚಾರ ಮಾಡುತ್ತಿದ್ದಾರೆ.
ಬಸ್ನಲ್ಲಿ ಪ್ರಯಾಣ ಮಾಡುವವರಿಗೆ ಮಾಸ್ಕ್ ಧರಿಸುವಂತೆ ಹೇಳಿ ಎಂದು ನಮ್ಮ ಸಿಬ್ಬಂದಿಗಳಿಗೆ ಹೇಳಿರುವುದಾಗಿ ಬಸ್ ಘಟಕ ವ್ಯವಸ್ಥಾಪಕ ಪಿ.ಕೆ.ಜಾಧವ ಪತ್ರಿಕೆಗೆ ಮಾಹಿತಿ ನೀಡಿದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ರೋಗಕ್ಕೆ ಬೇಕಾದ ೫೦ ಆಕ್ಸಿಜನ್ ಬೆಡ್, ವೆಟೀಲೇಂಟರ್ ಸಿದ್ದ ಇವೆ. ಪ್ರತಿ ನಿಮಿಷಕ್ಕೆ ೩೯೦ ಲೀ. ಆಕ್ಸಿಜನ್ ತಯಾರಿಸುವ ಪಿಎಸ್ಎ ಪ್ಲಾಂಟ್ ತಯಾರಿದೆ. ಅಗತ್ಯ ಔಷಧ ಸಂಗ್ರಹವಿದೆ. ಇದುವರೆಗೆ ಅಂತಹ ಪ್ರಕರಣಗಳು ಕಂಡುಬಂದಿಲ್ಲ ಎಂದು ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಾಬೀರ ಪಟೇಲ ಹೇಳಿದರು.
ರೂಪಾಂತರಿ ರೋಗ ಬಂದರೆ ರೋಗಿಗಳ ಚಿಕಿತ್ಸೆಗೆ ಅಖಂಡ ತಾಲೂಕಿನಲ್ಲಿರುವ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಮ್ಮಲ್ಲಿ ಕಿಟ್ ಬಂದ ದಿನವೇ ಕೋವಿಡ್ ಟೆಸ್ಟ್ ಆರಂಭಿಸುತ್ತೇವೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್.ಓತಗೇರಿ ಹೇಳಿದರು.
ಕೋವಿಡ್ ತಪಾಸಣೆ, ಕಿಟ್ ವಿತರಣೆ ಕುರಿತು ಹೆಚ್ಚಿನ ಮಾಹಿತಿಗೆ ಜಿಲ್ಲಾ ಆಸ್ಪತ್ರೆಯ ಡಾ.ಕವಿತಾ ಅವರಿಗೆ ಕೇಳಲು ದೂರವಾಣಿ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.
Subscribe to Updates
Get the latest creative news from FooBar about art, design and business.
Related Posts
Add A Comment

