ವಿಜಯಪುರ: ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ಸದಾ ನಮ್ಮ ಮನಸ್ಸಿನಲ್ಲಿ ಅಮರವಾಗಿದ್ದಾರೆ. ಅವರ ಚಿಂತನೆಗಳು, ಅವರ ಮಾತುಗಳೊಂದಿಗೆ ಇಂದಿಗೂ ಅವರು ನಮ್ಮ ಜೊತೆಯಲ್ಲಿಯೇ ಇದ್ದಾರೆ ಎಂದು ಭಾಸವಾಗುತ್ತದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಗೋಷ್ಠಿ -೧ ರಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಅವರ ಮಾತುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕ. ಅವರು ಅತ್ಯಂತ ಸರಳವಾಗಿ ಬದುಕುವ ಮೂಲಕ ಬದುಕು ಎಂದರೆ ಹೇಗಿರಬೇಕು ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟಂತವರು. ಅವರು ಎಂದಿಗೂ ಏನನ್ನು ಬಯಸದಂತವರು ಆದರೆ ಅವರ ಭಕ್ತರಾಗಿ ನಮ್ಮ ಕರ್ತವ್ಯವನ್ನು ನಾವು ಅವರಿಗೆ ನಮನ ಸಲ್ಲಿಸುವ ಮೂಲಕ ನಿಭಾಯಿಸಬೇಕಿದೆ ಮತ್ತು ಅವರು ಹಾಕಿ ಕೊಟ್ಟ ಹಾದಿಯಲ್ಲಿ ಸಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಅನುಭಾವವನ್ನು ಹಂಚಿಕೊಂಡ ರಾಜಶೇಖರ ಮಠಪತಿ ರಾಗಂ ಮಾತನಾಡಿ, ಇಂದಿನ ಯುವಕರು ಮೊಬೈಲ್ ಗೀಳಿಗೆ ಬಲಿಯಾಗಿದ್ದಾರೆ. ಅದರ ಬದಲಿಗೆ ಜಾನಪದ ಕಲೆಯಲ್ಲಿ ಬೆರೆತು ಅದನ್ನು ಬೆಳೆಸಿ ಉಳಿಸುವಂತಹ ಕೆಲಸವನ್ನು ಮಾಡಬೇಕಿದೆ. ನಮ್ಮ ಸಂಸ್ಕೃತಿ, ನಮ್ಮ ಕಲೆ ಅತ್ಯಮೂಲ್ಯವಾದದ್ದು ಅದನ್ನು ಮುಂದೆ ತೆಗೆದುಕೊಂಡು ಹೋಗಬೇಕಾದ ಮುಂದಿನ ಪೀಳಿಗೆಗಳಿಗೆ ನೀಡಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಂಭು ಬಳಿಗಾರ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಜೊತೆ ಬದುಕಿದ ನಾವೇ ಧನ್ಯರು ಅವರ ಗುಣಗಳನ್ನು ನಾವು ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಧನ್ಯವಾದ ತಿಳಿಸಬೇಕಿದೆ ಎಂದರು.
ಇಂದಿನ ಯುವಕರು ಹೆಣ್ಣು ಮಕ್ಕಳನ್ನು ಗೌರವಿಸುತ್ತಿಲ್ಲ ಎಂದಿಗೂ ನಮ್ಮ ಮನೆಯ ಹೆಣ್ಣು ಮಕ್ಕಳ ಕಣ್ಣಲ್ಲಿ ನೀರು ಬರದಂತೆ ನೋಡಿಕೊಳ್ಳಬೇಕು ಎಂದರು.
ಇನ್ನೋರ್ವ ಅತಿಥಿ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ್ ವಾಲಿಕಾರ ಮಾತನಾಡಿ, ಶ್ರೀ ಸಿದ್ದೇಶ್ವರ ಅಪ್ಪನವರನ್ನು ನಾವು ನಮ್ಮ ಜೀವನದುದ್ದಕ್ಕೂ ನೆನೆಸಿಕೊಂಡು ನಾವೆಲ್ಲರು ಬದುಕಬೇಕು. ಇನ್ನು ಜಾನಪದದ ಬಗ್ಗೆ ನಾವು ಮಾತನಾಡಬೇಕೆಂದರೆ ಜನಪದ ಸಾಹಿತ್ಯ ನಮ್ಮ ಉಸಿರು. ಜನಪದ ಅರಿವು ಇರದವ ಅಪೂರ್ಣನಾಗುತ್ತಾನೆ. ಜಾನಪದ ಕಲೆ ಆಯಾ ಭಾಗಕ್ಕೆ ವಿಭಿನ್ನವಾಗಿರುತ್ತದೆ. ಎಲ್ಲದಕ್ಕಿಂತ ಅಪರೂಪದ ಜಾನಪದ ಕಲೆಯನ್ನು ನಾವು ಬೀದರ ಜಿಲ್ಲೆಯಲ್ಲಿ ಕಾಣುತ್ತೇವೆ ಎಂದರು.
ಅತಿಥಿಯಾಗಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಶ್ರೀ ಸಿದ್ದೇಶ್ವರ ಅಪ್ಪಾಜಿಯವರಿಗೆ ಜಾನಪದ ಕಲೆ ಮೇಲೆ ಅಪಾರವಾದ ಗೌರವವಿತ್ತು ಮತ್ತು ಅಪಾರವಾದ ಆಸಕ್ತಿ ಇತ್ತು ಅಂತಹ ಅವರಿಗೆ ಇಷ್ಟವಾದ ವಿಷಯಗಳ ಮೇಲೆ ಗೋಷ್ಠಿಗಳನ್ನು ಹಮ್ಮಿಕೊಂಡಿದ್ದು ಅತ್ಯಂತ ಖುಷಿಯ ವಿಚಾರ ಎಂದರು.
ಅವರನ್ನು ನೋಡಿ ಬೆಳೆದಂತವರು ನಾವೆಲ್ಲರೂ ಹೀಗಾಗಿ ಅವರು ಹಾಕಿ ಕೊಟ್ಟ ಹಾದಿಯಲ್ಲಿ ಸಾಗಿ ಅವರಿಗೆ ನಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ, ಅನವಾಲದ ಪೂರ್ಣಾನಂದ ಆಶ್ರಮದ ಕೈಲಾಸಪತಿ ಮಹಾಸ್ವಾಮಿಗಳು ಮಾತನಾಡಿದರು.
ಇನ್ನೋರ್ವ ನಿಡಸೋಸಿಯ ಜಗದ್ಗುರು ಶ್ರೀ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಶಿವಲಿಂಗೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ಎಂದು ಮರೆಯದ ಮಾಣಿಕ್ಯ. ನಮ್ಮೆಲ್ಲರಿಗೂ ಜ್ಞಾನ ದಾಸೋಹ ಮಾಡಿದಂತವರು ಈ ಜಾನಪದ ಕಲೆ ಕೂಡ ಅವರಿಗೆ ಪ್ರಿಯವಾದ ವಿಷಯವಾಗಿತ್ತು ಎಂದರು.
ಪ್ರಸ್ತುತ ದಿನಗಳಲ್ಲಿ ಗಂಡ ಹೆಂಡಿರ ನಡುವೆ ಕಲಹಗಳು ಹೆಚ್ಚಾಗುತ್ತಿವೆ. ಕೌಟುಂಬಿಕ ಜಗಳಗಳು ಹೆಚ್ಚಾಗುತ್ತಿವೆ ಇದಕ್ಕೆ ಕಾರಣ ನಮ್ಮ ಜಾನಪದ ಕಲೆ, ಸಂಸ್ಕೃತಿ ನಮ್ಮಿಂದ ದೂರವಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಮೃತಾನಂದ ಮಹಾಸ್ವಾಮಿಗಳು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಹರ್ಷಾನಂದ ಮಹಾಸ್ವಾಮಿಗಳು ನಿರೂಪಿಸಿದರು.

