ವಿದ್ಯಾರ್ಥಿ ವೇತನ ಕಡಿತಗೊಳಿಸಿರುವ ರಾಜ್ಯ ಸರಕಾರದ ಕ್ರಮಕ್ಕೆ ಖಂಡನೆ
ವಿಜಯಪುರ: ೨೦೨೨-೨೩ ನೇ ಸಾಲಿನ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯ ಅಡಿಯಲ್ಲಿರುವ ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ ಹಾಗೂ ವಿದ್ಯಾರ್ಥಿ ವೇತನ ಕಡಿತಗೊಳಿಸಿರುವ ರಾಜ್ಯ ಸರ್ಕಾರದ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉತ್ತರ ಪ್ರಾಂತ ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ ಮಾತನಾಡಿ, ರಾಜ್ಯದಲ್ಲಿ ಬಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅಪಾಯಕಾರಿ, ಅಸುರಕ್ಷಿತ, ಹಾಗೂ ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಮತ್ತು ಅವರ ಕುಟುಂಬದ ರಕ್ಷಣೆಗಾಗಿ ಸರಕಾರಗಳು ಬದ್ಧವಾಗಿರಬೇಕು, ಆದರೆ ರಾಜ್ಯ ಸರಕಾರ ೨೦೨೨-೨೩ ನೇ ಸಾಲಿನ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯ ಅಡಿಯಲ್ಲಿರುವ ವಿದ್ಯಾರ್ಥಿ ವೇತನ ಬಿಡುಗಡೆ ಕಾರ್ಯಕ್ರಮವನ್ನು ನವಂಬರ್ ೦೯ ರಂದು ಮಾಡಿದೆ ಆದರೆ ಇಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಜಮೆ ಆಗದೆ ಬಡ ವಿದ್ಯಾರ್ಥಿಗಳ ಜೀವನದ ಜೊತೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿರುವುದು ಖಂಡನೀಯ ಹಾಗೂ ೨೦೨೨-೨೩ ನೇ ಸಾಲಿನ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯ ಅಡಿಯಲ್ಲಿರುವ ವಿದ್ಯಾರ್ಥಿ ವೇತನ ತಕ್ಷಣ ಜಮೆ ಮಾಡಬೇಕು, ಯಾವುದೇ ರೀತಿ ಕಡಿತ ಮಾಡದೆ ಪೂರ್ಣ ವಿದ್ಯಾರ್ಥಿ ವೇತನವನ್ನು ನೀಡಬೇಕು. ವಿದ್ಯಾರ್ಥಿ ವೇತನಕ್ಕೆ ಸಲ್ಲಿಕೆ ಮಾಡಿದ್ದ ೪ ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದನ್ನು ರದ್ದುಗೊಳಿಸಿರುವ ಸರಕಾರ ಎಲ್ಲರಿಗೂ ವಿದ್ಯಾರ್ಥಿ ವೇತನ ನೀಡಬೇಕೆಂದರು.
ನಗರ ಕಾರ್ಯದರ್ಶಿ ಕು.ಕವಿತಾ ಬಿರಾದಾರ ಮಾತನಾಡಿದರು.
ಈ ಸಂದರ್ಭದಲ್ಲಿ ಎಬಿಬಿಪಿ ಮುಖಂಡರಾದ ಮಂಜುನಾಥ ಹಳ್ಳಿ, ಮಲ್ಲಿಕಾರ್ಜುನ ಮಾಳಿ, ಸಿದ್ದು ಪತ್ತಾರ, ಸಂತೋಷ ದೊಡಮನಿ, ಸಂದೀಪ ಅಳಗುಂಡಿ, ಪೂಜಾ ವೀರಶೆಟ್ಟಿ, ಪ್ರವೀಣ ಬಿರಾದಾರ, ಹರ್ಷಾ ನಾಯಕ, ಶಿವನಗೌಡ ಬಿರಾದಾರ, ಐಶ್ವರ್ಯ, ಆನಂದ ಬಿರಾದಾರ, ಮಂಜುನಾಥ ದೊಡಮನಿ, ಸತೀಷ ರಾಠೋಡ, ಮಲ್ಲು ಕೋಲ್ಹಾರ, ಸಚೀನ ಬೋನಾಳ, ಅವಿನಾಶ ಮದಭಾವಿ, ಅಮೀತ, ಶ್ರವಣಕುಮಾರ, ಇನ್ನಿತರರಿದ್ದರು.

