ಮುದ್ದೇಬಿಹಾಳ: ವಿಚ್ಛೇದನಕ್ಕಾಗಿ ಕೋರ್ಟ್ ನ ಮೊರೆ ಹೋದ ವ್ಯಕ್ತಿಯನ್ನ ಮುದ್ದತಿಗೆ ಬಂದಾಗ ಪತ್ನಿಯ ಮನೆಯವರು ನ್ಯಾಯಾಲಯದ ಮುಖ್ಯದ್ವಾರದ ಹತ್ತಿರವಿರುವ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ವರದಿಯಾಗಿದೆ.
ತಾಲೂಕಿನ ರೂಡಗಿ ಗ್ರಾಮದ ಮಹೇಶ ನಂದಿಹಾಳ ಹಲ್ಲೆಗೊಳಗಾದ ವ್ಯಕ್ತಿ. ಇದೇ ತಾಲೂಕಿನ ಗೋನಾಳ ಗ್ರಾಮದ ಬಸಪ್ಪ ಬಿರಾದಾರ ಇವರ ಮಗಳಾದ ಈರಮ್ಮಳ ಜೊತೆ ಕಳೆದ ಎರಡು ವರ್ಷಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿತ್ತು. ಮದುವೆಯ ನಂತರ ಗಂಡ ಹೆಂಡಿರ ಸಂಬಂಧ ಅಷ್ಟೊಂದು ಚೆನ್ನಾಗಿ ಇರಲಿಲ್ಲ. ಪತ್ನಿಯ ಬಗ್ಗೆ ಅನೈತಿಕ ಸಂಬಂಧದ ಸಂಶಯ ಹೊಂದಿದ್ದ ಪತಿಗೆ ಮದುವೆಯ ೨ ತಿಂಗಳಿಗೆ ಆಕೆ ೭ ತಿಂಗಳ ಗರ್ಭಿಣಿ ಎಂದು ತಿಳಿದಿದ್ದು ಆಸ್ಪತ್ರೆಯಲ್ಲಿ. ಬಳಿಕ ತಾನು ಮೋಸ ಹೋಗಿದ್ದ ಬಗ್ಗೆ ತಿಳಿದು ಆಕೆಯನ್ನ ತವರು ಮನೆಗೆ ಕಳುಹಿಸಿದ್ದ.
ನಂತರ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು ಆ ಮಗು ತನ್ನದಲ್ಲ ಎಂದು ಸಾಬೀತು ಮಾಡಲು ಡಿಎನ್‌ಎ ಪರೀಕ್ಷೆ ನಡೆಸುವಂತೆ ಪಟ್ಟು ಹಿಡಿದಿದ್ದ. ಮುದ್ದತಿಗೆ ಬಂದಾಗಲೊಮ್ಮೆ ಪತ್ನಿಯ ಮನೆಯವರೊಂದಿಗೆ ಮಾತಿನ ಚಕಮಕಿ ನಡೆಯುತ್ತಿದ್ದು ಈ ಬಾರಿ ವಿಕೋಪಕ್ಕೆ ತಿರುಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಹಲ್ಲೆಗೊಳಗಾದವನನ್ನು ಆಸ್ಪತ್ರೆಗೆ ಸೇರಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಬಳಿಕ ಮಹೇಶ ತನ್ನ ಪತ್ನಿಯ ಸಂಬಂಧಿಕರಾದ ಮುತ್ತಪ್ಪ ಬಸಪ್ಪ ಬಿರಾದಾರ, ಬಸಪ್ಪ ಭೀಮಪ್ಪ ಬಿರಾದಾರ, ಚನ್ನಮ್ಮ ಬಸಪ್ಪ ಬಿರಾದಾರ ಮತ್ತು ಪತ್ನಿ ಈರಮ್ಮಳ ಮೇಲೆ ದೂರು ನೀಡಿದ್ದಾನೆ. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ ೩೨೩, ೩೨೪ ,೩೨೫, ೩೪೧, ೫೦೪, ೫೦೬ ರೆ/ವು ೩೪ ಗಳ ಅಡಿ ಪ್ರಕರಣ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
