ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ ವಿನ್ಸೆಂಟ್ ಡಿಸೋಜಾ ಸೂಚನೆ
ವಿಜಯಪುರ: ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಕಡಿಮೆ ಫಲಿತಾಂಶ ಬಂದ ಶಾಲೆಗಳನ್ನು ಗುರುತಿಸಿ, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಸಕ್ತ ಸಾಲಿನ ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಳಕ್ಕೆ ಕ್ರಮ ವಹಿಸುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ.ರಿಚರ್ಡ ವಿನ್ಸೆಂಟ್ ಡಿಸೋಜಾ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಜಿಲ್ಲೆಯಾದ್ಯಂತ ಶೈಕ್ಷಣಿಕ ಕಾರ್ಯಾಗಾರ ಹಮ್ಮಿಕೊಂಡು ಕಡಿಮೆ ಫಲಿತಾಂಶ ಬಂದ ಶಾಲೆಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿ, ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು. ಈಗಾಗಲೇ ದತ್ತು ಪಡೆದುಕೊಂಡ ಶಾಲೆಗಳಿಗೆ ಕಡ್ಡಾಯವಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿ ಮಾಹೆ ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಆ ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಫಲಿತಾಂಶ ಉತ್ತಮಪಡಿಸಲು ಸೂಕ್ತ ಮಾರ್ಗದರ್ಶನ ಮಾಡಬೇಕು. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಭೂಮಿಯ ಖಾತಾ ಉತಾರೆ ಪಡೆದು ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಸಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಸಮರ್ಪಕವಾಗಿ ಶೈಕ್ಷಣಿಕ ಯೋಜನೆಗಳನ್ನು ಜಾರಿಗೊಳಿಸಬೇಕು. ಅಭಿಯಾನದ ರೀತಿಯಲ್ಲಿ ಕಾರ್ಯನಿರ್ವಹಿಸಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕಾಲಕಾಲಕ್ಕೆ ಶಾಲೆಗಳಿಗೆ ಭೇಟಿ ನೀಡಿ ಶೈಕ್ಷಣಿಕ ಗುಣಮಟ್ಟ, ಬೋಧನಾ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಬೇಕು. ಶಾಲೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸರಿಯಾಗಿ ಬೋಧನೆ ಮಾಡದ ಶಿಕ್ಷಕರ ಮೇಲೆ ನಿರ್ದಾಕ್ಷಿಣ್ಯವಾಗಿ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವಂತೆ ಉಪನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ವಿಶೇಷ ಗಮನ ಹರಿಸಿ ಆದ್ಯತೆ ಮೇಲೆ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕ್ರಮ ವಹಿಸಬೇಕು. ಶಿಕ್ಷಣಾಧಿಕಾರಿಗಳು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಗುರಿಯೊಂದಿಗೆ ತಾಲೂಕಿನಾದ್ಯಂತೆ ವಿಶೇಷ ಕ್ರೀಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಉತ್ತಮ ಬೋಧನಾ ವ್ಯವಸ್ಥೆ, ಗುಣಮಟ್ಟದ ಶಿಕ್ಷಣ ನೀಡಲು ಮಾರ್ಗದರ್ಶನ ನೀಡಬೇಕು. ಇದೊಂದು ಟಾಸ್ಕಾಗಿ ಪರಿಗಣಿಸಿ ವಿಶೇಷ ಆಸಕ್ತಿ ವಹಿಸಿ ಶೈಕ್ಷಣಿಕ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಾದ್ಯಂತ ಬರಗಾಲ ಘೋಷಣೆಯಾಗಿದ್ದು, ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲೆಯ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ರೇಷ್ಮೆ ಬೆಳೆಗೆ ಉತ್ತಮ ಅವಕಾಶ ಇರುವುದರಿಂದ ರೈತರಿಗೆ ರೇಷ್ಮೆ ಬೆಳೆ ಕುರಿತು ಪೊತ್ಸಾಹಿಸಬೇಕು. ಕೃಷಿ-ತೋಟಗಾರಿಕೆ ಇಲಾಖೆಗಳು ಬರ ಪರಿಸ್ಥಿತಿಯಲ್ಲಿ ಕೃಷಿ ಪೂರಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮೂಲಕ ರೈತರ ಜೀವನ ಮಟ್ಟ ಸುಧಾರಿಸಲು ಕ್ರಮ ಕೈಗೊಂಡು, ಪೈಲಟ್ ಬೇಸ್‌ನಲ್ಲಿ ಹೈನುಗಾರಿಕೆಗೆ ಒತ್ತು ನೀಡಬೇಕು. ಕೃಷಿ ಉಪ ಕಸುಬುಗಳಾದ ಸಾವಯವÀ ಗೊಬ್ಬರ ತಯಾರಿಕೆ, ಕುರಿ-ಹಸು ಸಾಕಾಣಿಕೆ, ಇಂತಹ ಕಸಬುಗಳಿಗೆ ರೈತರನ್ನು ಪ್ರೇರೆಪಿಸಿ ವಿವಿಧ ಕೃಷಿ ಪೂರಕ ಚಟುವಟಿಕೆಗಳಿಂದ ಉತ್ಪನ್ನ ದೊರಕುವಂತೆ ವಿವಿಧ ಯೋಜನೆಗಳ ಮೂಲಕ ರೈತರಿಗೆ ಸೌಲಭ್ಯ ದೊರಕಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಎಲ್ಲ ಅಂಗನವಾಡಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅಧಿಕಾರಿಗಳು ಕಾಲಕಾಲಕ್ಕೆ ಕೇಂದ್ರಗಳಿಗೆ ಭೇಟಿ ಮಾಡಿ, ಭೇಟಿ ಮಾಡಿದ ವರದಿ ದಾಖಲಿಸಬೇಕು. ಕೇಂದ್ರದಲ್ಲಿನ ಆಹಾರ ಗುಣಮಟ್ಟ, ಬೋಧನಾ ಕ್ರಮ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಬೇಕು. ಏನಾದರೂ ಕುಂದು ಕೊರತೆಗಳಿದ್ದಲ್ಲಿ ವ್ಯವಸ್ಥೆ ಸುಧಾರಣೆಗೆ ಕ್ರಮ ವಹಿಸಬೇಕು. ಎಲ್ಲ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳು ಹೊಂದಬೇಕು. ನಿವೇಶನ ಇಲ್ಲದೇ ಇರುವ ಅಂಗನವಾಡಿಗಳಿಗೆ ಸೂಕ್ತ ನಿವೇಶನ ಗುರುತಿಸಿ ಸ್ವಂತ ಕಟ್ಟಡಕ್ಕೆ ಕ್ರಮ ವಹಿಸಬೇಕು. ಈಗಾಗಲೇ ಚಾಲ್ತಿಯಲ್ಲಿರುವ ಅಂಗನವಾಡಿ ಕಟ್ಟಡ ಕಾಮಗಾರಿಗಳನ್ನು ಬೇಗ ಮುಗಿಸಿ ಸ್ವಾಧೀನಕ್ಕೆ ಪಡೆದುಕೊಳ್ಳಬೇಕು. ಇನ್ನೂ ಬಾಕಿ ಉಳಿದ ಅಂಗನವಾಡಿಗಳ ನಿವೇಶನಕ್ಕಾಗಿ ಸಂಬAಧಪಟ್ಟ ನಗರಸಭೆ, ಪುರಸಭೆ ಪಟ್ಟಣ ಪಂಚಾಯತಿ ಅಧಿಕಾರಿಗಳನ್ನು ಸಂಪರ್ಕಿಸಿ ನಗರ ಪ್ರದೇಶದಲ್ಲಿ ನಿವೇಶನ ಪಡೆಯಲು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಸಕರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಕುಡಿಯುವ ನೀರಿನ ಅವಶ್ಯಕತೆ ಇರುವ ಗ್ರಾಮಗಳಲ್ಲಿ ಟೆಂಡರ್ ಕರೆದು ಟ್ಯಾಂಕರ್ ಮೂಲಕ ನೀರು ಪೂರೈಸಲು ಆದ್ಯತೆ ನೀಡಬೇಕು. ಕಲುಷಿತ ನೀರು ಪೂರೈಕೆಯಾಗದಂತೆ ಜಾಗೃತಿ ವಹಿಸಿ, ಪರೀಕ್ಷಿಸಿದ ನಂತರ ನೀರು ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಫಲಿತಾಂಶ ಕಡಿಮೆ ಬಂದಿರುವ ಶಾಲೆಗಳನ್ನು ಗುರುತಿಸಿ, ಆ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶೈಕ್ಷಣಿಕ ಪುನಶ್ಚೇತನದಡಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಕ್ರಮ ವಹಿಸಬೇಕು. ಜಿಲ್ಲೆಯ ಇತರೆ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಶಾಲೆಗಳನ್ನು ದತ್ತು ನೀಡುವ ಮೂಲಕ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳು ಸುಸ್ಥಿತಿಯಲ್ಲಿರುವಂತೆ ಹಾಗೂ ವ್ಯವಸ್ಥಿತವಾಗಿ ಕಾರ್ಯನಿರ್ವಹಣೆ ಕುರಿತು ಕೇಂದ್ರಗಳಲ್ಲಿನ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಬೇಕು. ಅಂಗನವಾಡಿ ಕಾರ್ಯಕರ್ತೆರು ಲಭ್ಯವಿಲ್ಲದ ಅಂಗನವಾಡಿಗಳಲ್ಲಿ ಕಾರ್ಯವ್ಯವಸ್ಥೆ ಮೇಲೆ ನಿಯೋಜನೆ ಮಾಡಿಕೊಂಡು ಮಕ್ಕಳಿಗೆ ತೊಂದರೆಯಾಗದAತೆ, ಯಾವುದೇ ದೂರು ಬಾರದಂತೆ ಸಮರ್ಪಕವಾಗಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುವಂತೆ ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

