ವಿಜಯಪುರ ಸಹಕಾರಿ ಸಂಘಗಳ ಉಪನಿಬಂಧಕರ ಲಿಖಿತ ಭರವಸೆ
ಮುದ್ದೇಬಿಹಾಳ: ಇಲ್ಲಿನ ಪಿಎಲ್‌ಡಿ ಬ್ಯಾಂಕ್ ನಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಬ್ಯಾಂಕಿನ ಅಧ್ಯಕ್ಷ ಮತ್ತು ಹಿರಿಯ ಅಧಿಕಾರಿಗಳ ದುರ್ನಡತೆ ಎಂದು ಆರೋಪಿಸಿ ಮತ್ತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ದಲಿತಪರ ಸಂಘಟನೆಗಳ ವತಿಯಿಂದ ಬ್ಯಾಂಕ್ ಎದುರು ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಧರಣಿ ವಿಜಯಪುರದ ಸಹಕಾರಿ ಸಂಘಗಳ ಉಪನಿಬಂಧಕರ ಲಿಖಿತ ಭರವಸೆಯ ಮೇರೆಗೆ ಗುರುವಾರ ತಾತ್ಕಾಲಿಕ ಅಂತ್ಯ ಕಂಡಿದೆ.
ಸೋಮುವಾರದಿಂದ ಶುರುವಾದ ಧರಣಿ ಸ್ಥಳಕ್ಕೆ ಬ್ಯಾಂಕ್ ನ ಅಧ್ಯಕ್ಷ, ಸ್ಥಳೀಯ ಅಧಿಕಾರಿಗಳು ಧರಣಿ ನಿರತರ ಮನವೊಲಿಸಲು ಸಕಷ್ಟು ಪ್ರಯತ್ನಿಸಿದರೂ ಧರಣಿ ನಿರತರು ತಮ್ಮ ಪಟ್ಟು ಬಿಡದೇ ಹೋರಾಟವನ್ನು ಹಂತ ಹಂತವಾಗಿ ಉಗ್ರವಾಗಿಸಿದ್ದರು. ಗುರುವಾರ ಬೆಳಿಗ್ಗೆ ಬ್ಯಾಂಕ್ ಎದುರಿನ ರಸ್ತೆಯಿಂದ ಆವರಣದಲ್ಲೆಲ್ಲ ಉರುಳುವ ಮೂಲಕ ಪ್ರತಿಭಟಿಸಿ ನಂತರ ತಲೆಯ ಮೇಲೆ ಕಲ್ಲು ಹೊತ್ತು ಧರಣಿ ಮುಂದುವರೆಸಿದ್ದರು. ಧರಣಿ ಸ್ಥಳಕ್ಕೆ ಸಂಜೆ ಆಗಮಿಸಿದ ಅಧಿಕಾರಿ ಭಾಗ್ಯಶ್ರೀ ಎಸ್.ಕೆ ಮತ್ತು ಸಹಾಯಕ ನಿಬಂಧಕ ಚೇತನ ಭಾವಿಕಟ್ಟಿ ಧರಣಿ ನಿರತರ ಬಳಿ ಆರೋಪಿತ ಅವ್ಯವಹಾರಗಳ ಪಟ್ಟಿ ಮಾಡಿಕೊಂಡು ಜನೆವರಿ ೨೦ ರ ಒಳಗಾಗಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಲಿಖಿತವಾಗಿ ನೀಡಿದರು. ಈ ವೇಳೆ ಧರಣಿ ನಿರತರು ಉಳಿದಿರುವ ಎಲ್ಲ ಅಕ್ರಮಗಳನ್ನು ತಮ್ಮ ಅವಧಿಯಂತೇ ಕ್ರಮವಹಿಸಿ ಆದರೆ ಇಲ್ಲಿನ ವಾಣಿಜ್ಯ ಮಳಿಗೆಗಳನ್ನು ಕೂಡಲೇ ಬಂದ್ ಮಾಡಿ ಮತ್ತೊಮ್ಮೆ ಟೆಂಡರ್ ಮಾಡುವಂತೆ ಪಟ್ಟು ಹಿಡಿದರು. ಇದಕ್ಕೊಪ್ಪದ ಅಧಿಕಾರಿಗಳು ತನಿಖೆಗೆ ಅವಶ್ಯಕವಾಗಿ ನಮಗೆ ಕಾಲಾವಕಾಶ ಬೇಕು. ಜ.೧೫ ರ ಒಳಗಾಗಿಯೇ ವಾಣಿಜ್ಯ ಮಳಿಗೆಯ ಸಂಪೂರ್ಣ ಮಾಹಿತಿ ಕಲೆ ಹಾಕಿ ಕ್ರಮ ವಹಿಸುವದಾಗಿ ಮತ್ತೊಮ್ಮೆ ಲಿಖಿತವಾಗಿ ಭರವಸೆ ನೀಡಿದ ನಂತರ ಧರಣಿ ನಿರತರು ತಾತ್ಕಾಲಿಕವಾಗಿ ಹಿಂಪಡೆದರು.
ಈ ವೇಳೆ ಪ್ರಮುಖರಾದ ಹರೀಶ ನಾಟೇಕಾರ ಮತ್ತು ಬಸವರಾಜ ಸಿದ್ದಾಪೂರ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ವೇಳೆ ಮುಖಂಡರಾದ ಪರಶುರಾಮ ನಾಲತವಾಡ, ಶರಣು ಸರೂರ, ಗೋಪಾಲ ದಾಸರ, ಸಂಗು ಚಲವಾದಿ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು. ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಕ್ರೈಂ ಪಿಎಸ್‌ಐ ಮನ್ನಾಬಾಯಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.

