ಪುರಾಣ ಮಂಗಲ ಹಾಗೂ ಧರ್ಮಸಭೆಯಲ್ಲಿ ಡಾ.ವಿಶ್ವಾರಾಧ್ಯ ಶ್ರೀಗಳ ಅಭಿಮತ
ಯಡ್ರಾಮಿ: ಪುರಾಣ-ಪ್ರವಚನದಂತಹ ಸತ್ಸಂಗದಲ್ಲಿ ಭಾಗಿಯಾಗುವುದೆಂದರೆ ಅಪರೂಪದ ಮಾನವ ಜೀವನವನ್ನು ಹಸನುಗೊಳಿಸಿಕೊಳ್ಳುವುದೇ ಆಗಿದೆ ಎಂದು ಮಾಗಣಗೇರಿ ಬ್ರಹನ್ಮಠದ ಡಾ| ವಿಶ್ವಾರಾಧ್ಯ ಶಿವಾಚಾರ‍್ಯ ಮಹಾಸ್ವಾಮೀಜಿ ನುಡಿದರು.
ತಾಲೂಕಿನ ಮಳ್ಳಿ ಗ್ರಾಮದ ಹಿರೇಮಠದ ಲಿಂ.ಪೂಜ್ಯ ಸಿದ್ಧಲಿಂಗ ಶಿವಾಚಾರ‍್ಯ ಮಹಾಸ್ವಾಮೀಜಿಗಳ ೨೮ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ರುದ್ರಮುನಿ ಶಿವಾಚಾರ‍್ಯ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಸಿದ್ಧಾರೂಢರ ಪುರಾಣ ಕಾರ‍್ಯಕ್ರಮದ ಮಂಗಲ ಹಾಗೂ ಶಿವಾನುಭವ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳ ಜೀವನ ಸಾಧನೆ ಭಕ್ತವೃಂದಕ್ಕೆ ಆದರ್ಶವಾಗಿದೆ. ತಮ್ಮ ಬದುಕಿನುದ್ದಕ್ಕೂ ಶಿಷ್ಯ ಬಳಗದ ಬಾಳನ್ನು ಬೆಳಗಿದವರು. ಪಂಚಭಾಷಾ ಪಂಡಿತರಾಗಿ ಜ್ಞಾನದ ಸಾಗರವೇ ಆಗಿದ್ದ ಸಿದ್ಧಲಿಂಗ ಶ್ರೀಗಳು ಕೇವಲ ಧಾರ್ಮಿಕ ಕರ‍್ಯಗಳಷ್ಟೇ ಅಲ್ಲದೇ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ ರಂಗಗಳಲ್ಲಿಯೂ ಸಾಧನೆ ಮಾಡುವ ಮೂಲಕ ಸದ್ಯದ ಮಠಾಧೀಶರಿಗೆ ಆದರ್ಶವಾಗಿದ್ದಾರೆ ಎಂದರು.
ಈ ವೇಳೆ ಇತ್ತೀಚೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಡಾ| ಸಂತೋಷ ನವಲಗುಂದ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ನಂತರ ಡಾ| ಸಂತೋಷ ನವಲಗುಂದ ಮಾತನಾಡಿ, ಲಿಂ. ಶ್ರೀಗಳು ಕಲಿಸಿದ ಸಂಸ್ಕೃತ ಪಾಠ ಮತ್ತು ಸಂಸ್ಕಾರದ ಪರಿಣಾಮವಾಗಿ ಉನ್ನತ ಪದವಿ ಪಡೆಯಲು ಸಾಧ್ಯವಾಯಿತು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ನಂತರ, ಕಲಬುರಗಿ ಜಿಲ್ಲಾ ಉದ್ಯಮಿ ಶಿವಶರಣಪ್ಪ ಸಾಹು ಸೀರಿ ಮಾತನಾಡಿದರು. ಆ ಬಳಿಕ ಶಹಾಪುರದ ಪೂಜ್ಯ ಶ್ರೀ ಸೂಗೂರೇಶ್ವರ ಶಿವಾಚರ‍್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಕರ‍್ಯಕ್ರಮದ ನೇತೃತ್ವವನ್ನು ಪೂಜ್ಯ ಶ್ರೀ ರುದ್ರಮುನಿ ಶಿವಾಚರ‍್ಯ ಸ್ವಾಮೀಜಿ ವಹಿಸಿದ್ದರು. ಅತಿಥಿಗಳಾಗಿ ಶಿವಶರಣಪ್ಪ ಸಾಹು ಸೀರಿ, ವಿಜಯಕುಮಾರ ಹಿರೇಮಠ, ಗ್ರಾಪಂ ಅಧ್ಯಕ್ಷೆ ಖಾದರಬೀ ರಾಜೇಸಾಬ ಗುಡಿಮನಿ, ಬಸವರಾಜಯ್ಯ ಶಾಸ್ತ್ರೀಜಿ ಸೊಲ್ಲಾಪೂರ, ವಿದ್ಯಾಧರ ಪಾಟೀಲ, ಬಸನಗೌಡ ಪಾಟೀಲ ಮಾಗಣಗೇರಿ, ನಿಂಗರಾಜ ಸೀರಿ, ಶ್ರೀಮಠದ ಶಿಷ್ಯ ಬಳಗ ಇದ್ದರು.
ಬುಧವಾರ ದಿನ ಬೆಳಗ್ಗೆ ಕತೃ ಗದ್ದುಗೆಗೆ ಮಹಾರುದ್ರಾಭೀಷೇಕ, ಬಿಲ್ವಾರ್ಚನೆ, ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಕರ‍್ಯಕ್ರಮ ಜರುಗಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಜಾ ಭಜಂತ್ರಿ ಕಳಸದೊಂದಿಗೆ ಲಿಂ. ಶ್ರೀಗಳ ಭಾವಚಿತ್ರದ ಪಲ್ಲಕ್ಕಿ ಮೆರವಣಿಗೆ ಸಾಗಿ ಬೆಳಗ್ಗೆ ೧೧ಗಂಟೆಗೆ ಪುನಃ ಶ್ರೀಮಠಕ್ಕೆ ಮೆರವಣಿಗೆ ತಲುಪಿ ಮಹಾಮಂಗಲದೊಂದಿಗೆ ಕರ‍್ಯಕ್ರಮ ಸಂಪನ್ನಗೊಂಡಿತು. ನಂತರ ಮಹಾಪ್ರಸಾದ ಜರುಗಿತು.

