ಮುದ್ದೇಬಿಹಾಳ: ತಮ್ಮ ಮಕ್ಕಳ ಜೀವಕ್ಕಿಂತ ನಮಗೆ ವಚನಗಳೇ ಮಿಗಿಲು. ವಚನಗಳ ಸಂರಕ್ಷಣೆಗಾಗಿ ನಮ್ಮ ಮಕ್ಕಳ ಜೊತೆ ಜೊತೆಗೆ ನಾವು ನಮ್ಮ ಪ್ರಾಣವನ್ನೂ ಪಣಕ್ಕಿಟ್ಟು ಹೋರಾಡಿ ಪ್ರಾಣ ಬಿಡುತ್ತೇವೆ ಎಂದು ೧೨ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಕ್ರಾಂತಿಯಾದಾಗ ಈ ರೀತಿ ದಿಟ್ಟ ಉತ್ತರ ನೀಡಿ ಶರಣರು ಶಪಥ ಮಾಡಿ ಹೋರಾಡಿದ್ದರು. ಶರಣರಿಗೆ ಮರಣವೇ ಮಹಾನವಮಿಯಾಗಿತ್ತೆಂದು ಉಪ್ಪಿನಬೆಟಗೇರಿಯ ಮ.ನಿ.ಪ್ರ.ಸ್ವ.ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಹುಡ್ಕೋದಲ್ಲಿರುವ ಜೆ.ಸಿ.ಶಾಲೆಯಲ್ಲಿ ಬಸವ ಬೆಳಗು ಪಥಸಂಚಲನ ಸಂಪನ್ನಗೊಂಡ ನಂತರ ಅವರು ಆಶೀರ್ವಚನ ನೀಡಿದರು.
೧೨ನೇ ಶತಮಾನದಲ್ಲಿ ಬಸವೇಶ್ವರರು ಅಂತರ್ ಜಾತೀಯ ವಿವಾಹ ಮಾಡಿಸಿದರೆಂದು ಇಲ್ಲಸಲ್ಲದ ಅಪವಾದವನ್ನು ಅವರ ಮೇಲೆ ಹೊರಿಸಿ, ಬಿಜ್ಜಳ ರಾಜನ ಕಿವಿ ಊದಿ ಕೆಲವೊಂದು ದುಷ್ಟರಕೂಟ ಕ್ರಾಂತಿಯ ಕಹಳೆ ಮೊಳಗಿಸಿತು. ಶರಣರನ್ನು ಕೊಲ್ಲುವುದರ ಜೊತೆಗೆ ಅವರು ರಚಿಸಿರುವ ವಚನಗಳನ್ನು ಸರ್ವನಾಶ ಮಾಡಬೇಕೆಂಬುದು ಬಿಜ್ಜಳನ ಸೈನ್ಯದ ಮೂಲ ಉದ್ದೇಶವಾಗಿತ್ತು. ಇದರ ಒಳಮರ್ಮ ಅರಿತ ಶರಣರು ಜೀವದ ಹಂಗುದೊರೆದು ಹೋರಾಡಿ, ಶ್ರೀಶೈಲ ಹಾಗೂ ಉಳವಿಯ ಕಡೆಗೆ ವಚನಗಳನ್ನು ಸಂರಕ್ಷಿಸುತ್ತ ಕಲ್ಯಾಣ ತೊರೆದು ಹೊರಟು ಹೋದರು. ಅಕ್ಕನಾಗಮ್ಮ, ಗಂಗಾಂಬಿಕೆ, ಅಂಬಿಗರ ಚೌಡಯ್ಯ, ಕಕ್ಕಯ್ಯ, ಚೆನ್ನಬಸವಣ್ಣ ಮೊದಲಾದ ಸಹಸ್ರಾರು ಶರಣರು ವಚನಗಳ ರಕ್ಷಣೆ ಮಾಡುತ್ತ ಹೋರಾಡಿ ವೀರಮರಣ ಹೊಂದಿರುವ ವಿಷಯ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೇ ಉಳಿದು ಗತಕಾಲದ ರಕ್ತ ಚರಿತ್ರೆಯನ್ನು ನಮ್ಮ ಮುಂದೆ ಇಂದಿಗೂ ಬಿಚ್ಚಿಡುತ್ತಿದೆ ಎಂದರು.
ಸಾಹಿತಿ, ಶಿಕ್ಷಕ ರುದ್ರೇಶ ಕಿತ್ತೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮೊದಲು ಬೆಳಿಗ್ಗೆ ೫-೩೦ ರಿಂದ ವಿದ್ಯಾನಗರದಿಂದ ಬಸವ ಬೆಳಗಿನ ಸಂಚಾರ ಆರಂಭಗೊಂಡಿತು. ದಾರಿಯುದ್ದಕ್ಕೂ ಬಸವೇಶ್ವರನ್ನು ಕುರಿತು ಮಾಡಿದ ಜಯಘೋಷ ಮುಗಿಲು ಮುಟ್ಟಿತ್ತು. ಪ್ರತಿಯೊಬ್ಬರ ಮನೆಯ ಮುಂದಿನ ರಂಗುರಂಗಿನ ಚಿತ್ತಾರದ ರಂಗೋಲಿಗಳು ಎಲ್ಲರನ್ನೂ ಕೈ ಬೀಸಿ ಕರೆದು ಮಂತ್ರಮುಗ್ಧಗೊಳಿಸುತ್ತಿದ್ದವು. ಶರಣರ ವ್ಯಕ್ತಿತ್ವ ಕುರಿತು ಗಾಯಕರಿಂದ ಹಾಡಿದ ಹಾಡುಗಳು ಧ್ವನಿವರ್ಧಕದ ಮೂಲಕ ಮಾರ್ಧನಿಸುತ್ತಿದ್ದವು. ಈ ವೇಳೆ ಸಾಹಿತಿಗಳಾದ ಅಶೋಕ ಮಣಿ, ಬಸವರಾಜ ನಾಲತವಾಡ, ಸಿ.ಜಿ.ನಾಗರಾಳ ಪ್ರಮುಖರಾದ ಸಿ.ಪಿ.ಸಜ್ಜನ, ಭರತ ಭೋಸಲೆ, ರಾಜೇಂದ್ರಗೌಡ ರಾಯಗೊಂಡ, ಭಾಜಪಾ ಜಿಲ್ಲಾ ಕಾರ್ಯದರ್ಶಿ ಕಾಶಿಬಾಯಿ ರಾಂಪೂರ, ಪುರಸಭೆ ಸದಸ್ಯೆಯರಾದ ಪ್ರೀತಿ ದೇಗಿನಾಳ, ಸಂಗಮ್ಮ ದೇವರಳ್ಳಿ, ಭಾರತಿ ಪಾಟೀಲ, ಗಾಯಕಿ ದೀಪರತ್ನಶ್ರೀ, ವಿಜಯಲಕ್ಷ್ಮಿ ಗಡೇದ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

