ಕೋಳಕೂರ ಶ್ರೀ ಸಿದ್ದಬಸವೇಶ್ವರರ ೫೯೬ ನೇ ಜಯಂತೋತ್ಸವದಲ್ಲಿ ಸಂಗನಬಸವ ಶ್ರೀ ಶ್ಲಾಘನೆ
ವಿಜಯಪುರ: ಸಮಾಜದಲ್ಲಿ ಅದೆಷ್ಟೇ ದೊಡ್ಡವರಿರಲಿ, ಉನ್ನತ ಅಧಿಕಾರದಲ್ಲಿರಲಿ ಸೃಷ್ಠಿಕರ್ತನ ಮುಂದೆ ಎಲ್ಲರೂ ಚಿಕ್ಕವರು. ಪ್ರಾಂಜಲ ಮನದಿಂದ ಭಗವಂತನ ಆರಾಧನೆಯನ್ನು ಮಾಡಿದರೆ ಖಂಡಿತ ಫಲ ಸಿಗುತ್ತದೆ ಎಂದು ಮನಗೂಳಿ ಶ್ರೀ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಹೇಳಿದರು.
ಶನಿವಾರ ನಗರದ ಡಾ.ರಾಜಕುಮಾರ ಬಡಾವಣೆಯಲ್ಲಿ ಉದ್ಯಮಿ ಸಿ.ಎಂ.ಮಾಲಿಪಾಟೀಲ ಅವರು ಏರ್ಪಡಿಸಿದ ಕೋಳಕೂರ ಶ್ರೀ ಸಿದ್ದಬಸವೇಶ್ವರರ ೫೯೬ ನೇ ಜಯಂತೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ದಾನಗಳಲ್ಲಿ ಅನ್ನದಾನ ಶ್ರೇಷ್ಠವಾದುದು. ಹಸಿದವರಿಗೆ ಅನ್ನ ನೀಡಿ. ಭಗವಂತ ಯಾವ ಸ್ವರೂಪದಲ್ಲಿ ಬರುವನೋ ಗೊತ್ತಿಲ್ಲ, ನಿಮ್ಮ ಆರ್ಥಿಕ ಸ್ಥಿತಿಗನುಗುಣವಾಗಿ ಆಗಾಗ ಅನ್ನದಾನ ಮಾಡುತ್ತಿರಿ ಎಂದು ಶ್ರೀಗಳು ಕರೆ ನೀಡಿದರು.
ಕಳೆದ ಹಲವಾರು ವರ್ಷಗಳಿಂದ ಉದ್ಯಮಿ ಸಿ.ಎಂ.ಮಾಲೀಪಾಟೀಲರು ಚಾಚೂತಪ್ಪದೆ ಸತ್ಸಂಗ, ಧರ್ಮಸಭೆ, ಅನ್ನದಾಸೋಹದಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕೋಳಕೂರ ಶ್ರೀ ಸಿದ್ದಬಸವೇಶ್ವರರ ಜಯಂತೋತ್ಸವವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತ ಬಂದಿದ್ದಾರೆ. ಅನ್ನದಾನದೊಂದಿಗೆ ಮರಣೋತ್ತರ ನೇತ್ರದಾನವನ್ನೂ ಮಾಡಿರುವ ಸಿ.ಎಂ.ಮಾಲಿಪಾಟೀಲರ ನಡೆ ಅನುಕರಣೀಯ ಎಂದು ಶ್ರೀಗಳು ಶ್ಲಾಘಿಸಿದರು.
ಮಾಲಿಪಾಟೀಲರ ವ್ಯಕ್ತಿತ್ವ ಕುರಿತು ನಿವೃತ್ತ ಡಿವೈಎಸ್ಪಿ ಚೌಕಿಮಠ ಮಾತನಾಡಿದರು.
ಮಹಾನಗರ ಪಾಲಿಕೆ ಸದಸ್ಯ ರಾಜು ಕುರಿ, ನಾಡಗೌಡ, ಭಾಗ್ಯಶ್ರೀ ಪಾಟೀಲ, ಕಮಲಾ ಬಿರಾದಾರ, ಈರಣ್ಣ ಪಟ್ಟಣಶೆಟ್ಟಿ ವೇದಿಕೆ ಮೇಲಿದ್ದರು.
ಇದೇ ಸಂದರ್ಭದಲ್ಲಿ ಮಾಲಿಪಾಟೀಲ ದಂಪತಿಯನ್ನು ಶ್ರೀಗಳು ಸನ್ಮಾನಿಸಿದರು.
ರಾಜಕುಮಾರ ಬಡಾವಣೆ ಸೇರಿದಂತೆ ಅಕ್ಕಪಕ್ಕದ ಬಡಾವಣೆಗಳ ನೂರಾರು ಜನ ಗಣ್ಯರು, ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


