ನವದೆಹಲಿ: ಲೋಕಸಭೆ ಭದ್ರತಾ ಉಲ್ಲಂಘನೆ ಪ್ರಕರಣದ ಆರನೇ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಪ್ರಕರಣದ ‘ಮಾಸ್ಟರ್ ಮೈಂಡ್’ ಲಲಿತ್ ಝಾ ದೆಹಲಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಮಹೇಶ್ ಕುಮಾವತ್ ಅವರನ್ನು ಇಂದು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಘಟನೆ ನಡೆದ ಮರುದಿನ ಶರಣಾಗಲು ಗುರುವಾರ ರಾತ್ರಿ ಪೊಲೀಸ್ ಠಾಣೆಗೆ ಬಂದಿದ್ದ ಲಲಿತ್ ಝಾ ಅವರೊಂದಿಗೆ ಮಹೇಶ್ ಕುಮಾವತ್ ಕೂಡ ಆಗಮಿಸಿದ್ದರು. ಇಬ್ಬರನ್ನೂ ತನಿಖಾಧಿಕಾರಿಗಳ ವಶಕ್ಕೆ ನೀಡಲಾಗಿದ್ದು, ಅಂದಿನಿಂದಲೆ ಮಹೇಶ್ ಅವರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಪ್ರಕರಣದ ಆರೋಪಿಗಳು ಈ ಹಿಂದೆ ನಿರ್ವಹಣೆ ಮಾಡುತ್ತಿದ್ದ ಭಗತ್ ಸಿಂಗ್ ಫ್ಯಾನ್ ಕ್ಲಬ್ ಪೇಜ್ ನ ಸದಸ್ಯನಾಗಿದ್ದು, ಸಾಕ್ಷ್ಯ ನಾಶ, ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಕುಮಾವತ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಆರೋಪಿಗಳ ಮೊಬೈಲ್ ಫೋನ್ ನಲ್ಲಿದ್ದ ಸಾಕ್ಷ್ಯ ನಾಶಪಡಿಸುವ ಕೆಲಸದಲ್ಲಿ ಕುಮಾವತ್ ಭಾಗಿಯಾಗಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಆರೋಪಿಸಿದ ನಂತರ ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಆರೋಪಿಯು ದೇಶದಲ್ಲಿ ಅರಾಜಕತೆಯನ್ನು ಹರಡುವ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಪ್ರಾಸಿಕ್ಯೂಟರ್, ಪಿತೂರಿಯ ಕುರಿತು ಸಂಪೂರ್ಣ ಮಾಹಿತಿ ಬಹಿರಂಗಪಡಿಸಲು ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ವಾದ ಮಂಡಿಸಿದರು.
ಪೊಲೀಸರು ಈಗಾಗಲೇ ಪ್ರಕರಣದ ಮಾಸ್ಟರ್ ಮೈಡ್ ಲಲಿತ್ ಝಾ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈತನೆ ಭದ್ರತೆ ಉಲ್ಲಂಘನೆಯ ಕೃತ್ಯದ ಹಿಂದಿನ ‘ಮಾಸ್ಟರ್ ಮೈಂಡ್’ ಎನ್ನುವುದಕ್ಕೆ ಪೊಲೀಸರು ಸಾಕಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಗುರುವಾರ ರಾತ್ರಿಯೇ ಝಾ ಅವರನ್ನು ಬಂಧಿಸಿದ ನಂತರ ಶುಕ್ರವಾರ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸುವ ಸಂಚು ರೂಪಿಸಲು ಆರೋಪಿಗಳು ಹಲವು ಬಾರಿ ಭೇಟಿಯಾಗಿದ್ದರು ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಪಟಿಯಾಲ ಹೌಸ್ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.
ಅಲ್ಲದೆ, ಆರೋಪಿಯು ಯಾವುದೇ ಶತ್ರು ದೇಶ ಅಥವಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ಅವರನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಮನವಿ ಮಾಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

