ವ್ಯಂಗೋತ್ಸವ
– ಶ್ರೀನಿವಾಸ ಜಾಲವಾದಿ, ಸುರಪುರ
‘ಬಾರಯ್ಯ ಗುಂಡಯ್ಯ, ಈಗಿನ ಬಾತ್ಮಿ ಬೋಲ’ ಅಂತ ಬಾಶಾ ಕರೆದ
‘ಏನು ಬಾತ್ಮಿನೋ ಏನೊ, ಎಲ್ಲಾ ಬರೇ ನೋಟಿಂದೇ ಸುದ್ದಿ ಆಗೇತಿ’ ಅಂದ ಗುಂಡ್ಯಾ
‘ಏನಲೇ ತಮ್ಮಾ ಅದು? ನೋಟು ಪ್ರಿಂಟ ಮಾಡೂ ಮಶೀನ ಕೊಟ್ಟಾರೆನು ಎಲ್ಲಾರಿಗೆ?’ ಅಂದ ಕಾಕಾ
‘ಏ ಇಲ್ಲೋ ಯಪ್ಪಾ ತಂದೆ, ಒಬ್ಬಂವಾ ಸಾಹು ಅಂತ ಎಂಪಿ ಮನ್ಯಾಗ 300 ಕೋಟಿಕ್ಕಿಂತ ಹೆಚ್ಚಿಗಿ ಸಿಕ್ಕಾವಂತ ರೊಕ್ಕಾ’ ಅಂದಳು ರಾಣಿ
‘ಯಾರಿಗಿ?’ ಅಂದ ಶೌರಿ
‘ಅದೇ, ಮತ್ಯಾರಿಗಿ ಇಡಿ ಅವರಿಗಿ’ ಅಂದ ಗುಡುಮ್ಯಾ
‘ಹಂಗಾರ ನಾವು ಅಲ್ಲಿಗೆ ಹೋಗಿ ಒಂದೀಟು ಬಳಕೊಂಡ ಬರಾಮೇನು?’ ಕೇಳಿದ ಆಸೆಯಿಂದ ರಬಡ್ಯಾ
‘ಅಲ್ಲಿ ಹ್ವಾದೆಂದ್ರs, ನಿನ್ನೂ ಒಳಗ ಹಾಕ್ಕಾರು’ ಅಂತ ಬೆದರಿಕೆ ಹಾಕಿದ ಗುಂಡ್ಯಾ
‘ಏ, ನಾವೇನ ತಪ್ಪ ಮಾಡೇವಿ ಅಂತ ಒಳಗ ಹಾಕ್ತಾರ?’ ಅಂತಂದ ರಬಡ್ಯಾ
‘ಏನಪಾ ತಿಳ್ಕ ನೀ, ಏನರೇ ತಪ್ಪ ಮಾಡಿದ್ರs ಅಷ್ಟ ಒಳಗ ಹಾಕಬೇಕಂತ ಏನಿಲ್ಲಾ’ ಅಂತ ನಕ್ಕ ಗುಂಡ್ಯಾ
‘ಹಂಗಾರ ಈಗ ಒಳಗ ಇದ್ದವ್ರು ತಪ್ಪ ಮಾಡೇ ಇಲ್ಲೇನ?’ ಅಂದಳು ರಾಶಿ
‘ಅವರು ಸ್ವಲ್ಪ ಮಾಡಿರ್ತಾರು, ಅವ್ರಿಕ್ಕಿಂತ ಹೆಚ್ಚ ಹೊರಗಿದ್ದವರು ಮಾಡಿರ್ತಾರು, ಮತ್ತ ಹಂಗೇ ಅವರು ರಾಜಾರೋಷವಾಗಿ ಅಡ್ಡಾಡ್ತಾರು’ ಅಂತ ವ್ಯಂಗ ನಗೆ ನಕ್ಕ ಗುಡುಮ್ಯಾ
‘ಇದರಾಗೂ ಪಾಯಿಂಟ ಐತಿ ಬಿಡು’ ಅಂದ ಕಾಕಾ
‘ ಮತ್ತೇನಪಾ ವಿಜಾಪುರದ ಹಿಂಹುಲಿ ಭಾರಿ ಗುಡಗೇತಿ ಅಪ್ಪ ಮಗನ ಮ್ಯಾಲ?’ ಅಂತ ಕೇಳಿದ ಶೌರಿ
‘ಓ ಸಾಮ್ರಾಟ ಕೋ ಬಿಟೈತಿ, ಬಾಪ್ ಬೇಟಾ ಕೋ ಗಾಲೇ ದೇತೇ ಹೀ ರಹೆ ಹೈ’ ಅಂತಂದ ಬಾಶಾ
‘ಅದೇ ಸಾಮ್ರಾಟಗ ಸಹಕಾರ ನೀಡತಿನಿ, ಆದ್ರs ಈ ಅಪ್ಪ ಮಗಂದು ಎಲ್ಲಾ ಬಟಾ ಬಯಲ ಮಾಡತಿನಿ ಅಂದೈತಿ’ ಅಂದಳು ರಾಣಿ
‘ ಸೋಮಣ್ಣಾ ಭೀ ನೊಂದ ಜೀವಿ ಹೈ ನನ್ನ ಗತ್ಲೆ ಅಂತ ಹೇಳೇತಿ ಹಿಂಹುಲಿ’ ಅಂದ ಬಾಶಾ
‘ಅಲ್ಲಪಾ ಆ ಜಮೀರದೇನ ಸುದ್ದಿ? ಏನೋ ಗದ್ಲಾ ಎಬ್ಬಸ್ಯಾನಲಾ?’ ಅಂದ ಕಾಕಾ
‘ಸ್ಪೀಕರ ಖಾದರ ಅವರಿಗಿ ಡೊಗ್ಗಿ ಸಲಾಂ ಹೊಡ್ಯಾಕಬೇಕು ಈ ಕಮಲದವರು’ಅಂತ ಡೈಲಾಗ್ ಹೊಡದೇತಿ’ ಅಂತ ಅಂದಳು ರಾಶಿ
‘ಈಗ ಸದನದ ಬಾವಿಗಿಳದಾರ ಕಮಲ ಕಲಿಗಳು ಈಗೇನಂತಾನು’? ಅಂತ ಕೇಳಿದ ಗುಡುಮ್ಯಾ
‘ನಾ ಹಂಗ ಅಂದಿಲ್ಲಾ,ನಾ ಏನೂ ಕ್ಷಮಾ ಕೇಳಂಗಿಲ್ಲ ರಾಜಿನಾಮೆನೂ ಕೊಡಂಗಿಲ್ಲ, ನಾ ಭಾಳ ಮುಗ್ದ ಅದೀನಿ, ನನ್ನ ನಂಬ್ರಿ ಅಂತ ಅಂದಾನು’ ಅಂತ ಅಂದಳು ರಾಣಿ
‘ಇದಕ್ಕ ಟಗರ ಏನಂತತಿ?’ ಕೇಳಿದ ಕಾಕಾ
‘ಏ ಅಂವಾ ದೇವ್ರಂಥಾ ಮನಶ್ಯಾ ಅದಾನ, ಅವಗ ತ್ರಾಸು ಕೊಡಬ್ಯಾಡ್ರಿ, ಅಂವಗ ತ್ರಾಸ ಕೊಟ್ಟರ ನೀವು ತೆಲಂಗಾಣದಾಗ ತರಗಲೆ ಆದಂಗ ಆಕ್ಕಿರಿ ನೋಡ್ರಿ ಅಂತ ತನ್ನದೇ ಸ್ಟೈಲ್ದಾಗ ಠೇಂಕಾರ ಮಾಡೇತಿ ಟಗರು’ ಅಂತ ನಕ್ಕಳು ರಾಶಿ
‘ಇಲ್ಲಿ ಯಾರು ಯಾರ ಪಾಲಿಗೆ ಯಾವಾಗ ದೇವ್ರ ಆಕ್ಕಾರೋ ದೆವ್ವ ಆಕ್ಕಾರೋ ಒಂದು ಗೊತ್ತಾಗಂಗಿಲ್ಲ ನೋಡಪಾ’ ಅಂತಂದ ಕಾಕಾ
‘ಅದ್ಕs, ಇದನ್ನು ರಾಜಕೀಯ ಅರ್ಥಾತ್ ಪಾಲಿಟಿಕ್ಸ್ ಅಂತ ಕರಿತಾರ ಕಾಕಾ’ ಅಂತ ನಕ್ಕ ಶೌರಿ
‘ಇಂಡಿಯಾ’ದ್ದು ಏನು ಕಥಿ?’ ಕೇಳಿದ ಗುಂಡ್ಯಾ
‘ಮಮತಾ ದೀದಿ ಒಂದ ಕಡೆ, ಅಖಿಲೇಶ ಒಂದು ಕಡೆ, ನಿತೀಶ ಒಂದು ಕಡೆ ಮುಖ ತಿರಕೊಂಡ ಅಡ್ಡಾಡಕತ್ತಾರು’ ಅಂದ ರಬಡ್ಯಾ
‘ಮತ್ತs ನಮೋ ಆ್ಯಂಡ್ ಶಾಣ್ಯಾ?’ ಕೇಳಿದಳು ರಾಶಿ
‘ಈಗ ಜನೇವರಿ 22ಕ್ಕ ರಾಮಲಲ್ಲಾನ್ನ ಜಾಗಾದ ಮ್ಯಾಗ ಕೂಡಿಸಿ, ಛಬ್ಬೀಸ್ ಜನೇವರಿಗಿ ಕೆಂಪುಕೋಟೆ ಮ್ಯಾಗ ನಿಂತು, ಅದನ್ನ ಸಾರಿ ಸಾರಿ ಹೇಳಿ, ಮಾರ್ಚದಾಗ ಎಂಪಿ ಎಲೆಕ್ಷನ್ ಡಿಕ್ಲೇರ್ ಮಾಡಿ, ಬೌನ್ಸರ್ ಎಸ್ದ ಕುಂತ ಬಿಡ್ತಾರ ನೋಡು, ಇದs ಅವರ್ದು ಪ್ಲಾನ್ ಐತಿ’ ಅಂತ ಜೋರದಾರ ನಕ್ಕ ಶೌರಿ
‘ಅಲ್ಲಲೇ ನಿನ್ನ ಜೋಡಿ ಫೋನ್ದಾಗ ಮಾತಾಡಿ ಇದೆಲ್ಲಾ ಡಿಟೇಲ್ಸ್ ಹೇಳ್ಯಾರೇನು?’ ಅಂತ ಆಶ್ಚರ್ಯದಿಂದ ಕೇಳಿದ ಗುಡುಮ್ಯಾ
‘ಏನ ಮಳ್ಳ ಅದಿಯಲೇ ನೀ, ಇದು ಛಂದಂಗೆ ಕನ್ನಡಿ ಮ್ಯಾಲ ಬರದಂಗೆ ಐತಿ, ಇಷ್ಟೂ ತಿಳೆಂಗಿಲ್ಲೇನ ನಿನ್ಗ ?’ ಅಂದ ಶೌರಿ
‘ಅಷ್ಟ ತಿಳಿದವರು ಇಲ್ಲಿ ಅಸೆಂಬ್ಲೆಗ ಯಾಕ ಬಕ್ಕ ಬಾರಲೇ ಬಿದ್ರು?’ ವ್ಯಂಗವಾಗಿ ನಕ್ಕು ಕೇಳಿದ ರಬಡ್ಯಾ
‘ಅಲ್ಲಿ ಜೋಲಿ ಹೋಗಿತ್ತs ಹೀಂಗ, ಈ ‘ಅಸಂತೋಸ’ದಂತಾವ್ರ ಮಾತ ಕೇಳಿ, ಆದ್ರs ಈಗ ಅವರಿಗೂ ಗೊತ್ತಾಗೇತಿ, ಎಲ್ಲಿ ಗುರಿ ಇಟ್ಟು ಹೊಡಿಬೇಕಂತ ಹೇಳಿ’ ಅಂದ ಕಾಕಾ
‘ಆದ್ರs ಈ ಎಂಪಿ ತಯಾರಿಗಿ ಸಿಟ್ಟೂರಿ ‘ಯುವರಾಜ’ಗ ಪಟ್ಟಗಟ್ಟಿದ್ರ, ಇಲ್ಲೂ ರಗಡ ಮಗ್ಗಲ ಮುಳ್ಳ ಅದಾವಲಾ ಇಲ್ಲಿ ಕರುನಾಡಿನಾಗ?’ ಅಂದಳು ರಾಶಿ
‘ಅವು ಇರುವೇಯೆಳು, ಯಾರ್ನ ಮಾಡಿದ್ರೂನು ಇನ್ನೊಂದ ವಿರುದ್ಧ ಟೀಂ ಕತ್ತಿ ಮಸದೇ ಮಸಿತೈತಿ’ ಅಂದ ಶೌರಿ
‘ನಮೋ ಶಾಣ್ಯಾ’ರ ಲಕ್ಷ್ಯ ಈಗ ಹಿಂದಿ ರಾಜ್ಯದ ಕಡೆ ಐತಿ, ಅಲ್ಲಿ ಸೀಟು ಜಾಸ್ತಿ ಅದಾವು’ ಅಂದ ಗುಡುಮ್ಯಾ
‘ಈ ಕಡಿ ದಕ್ಷಿಣದ್ದು ಸುಮ್ಕ ಲಕ್ಕಿ ಡ್ರಾ ಅಂತ ತಿಳಿದಾರೇನು?’ ಕೇಳಿದಳು ರಾಶಿ
‘ಹಂಗೇ ಅನ್ಕೋ, ಆ ಕಡೆವು ಬಾಚಗೊಂಡ್ರ ಆತು ಮತ್ತ ಶುರು ಭಾಯಿಯೋ ಬೆಹನೋ ಅಂತ’ ಅಂದು ನಕ್ಕಳು ರಾಣಿ
‘ಎಲ್ಲಾ ಹದಗೆಟ್ಟ ಹೈದ್ರಾಬಾದ್ ಆಗೇತವಾ’ ಅಂತಂದ ಕಾಕಾ
‘ಇಲ್ಲಾ ಸೈಕೋನ್ ಸುರ್ದು ಎಕ್ಕುಟ್ಟಿ ಹೋತಲಾ ಚೆನ್ನೈ ಹಂಗಾಗೇತಿ’ ಅಂದ ಶೌರಿ
‘ಇರಲಿ, ನಮ್ಮ ಪ್ರೀತಿಯ ಕಲಾವಿದೆ ಲೀಲಾವತಿ ಅವರು ಮರಣಿಸಿದರು, ಅವರಿಗೆ ನಮ್ಮ ಭಕ್ತಿ ಪೂರ್ವಕ ಶ್ರದ್ಧಾಂಜಲಿ ಸಲ್ಲಬೇಕು’ ಅಂದಳು ರಾಣಿ
‘ಹೌದು, ಚಿತ್ರರಂಗದ ತಾಯಿ ಅಮ್ಮಾ ಆಕೆ’ ಅಂದ ಶೌರಿ
‘ 600 ಸಿನೇಮಾದಾಗ ನಟಿಸ್ಯಾಳ ಲೀಲಾವತಿ, ಅದು ಸಣ್ಣ ಮಾತಲ್ಲ’ ಅಂದ ಗುಂಡ್ಯಾ
‘ಅಷ್ಟ ಅಲ್ಲ, ಲೀಲಾವತಿ ಅಮ್ಮ ಮತ್ತ ಅವರ ಮಗ ಕೂಡಿ ನೆಲಮಂಗಲ ಹತ್ರ ಕೃಷಿ ಮಾಡ್ಕೊಂಡ ಇದ್ರು, ತೋಟ ಮಾಡ್ಯಾರ, ಅಲ್ಲಿ ಹಳ್ಳಿ ಜನರಿಗೆ ಅನುಕೂಲ ಆಗ್ಲಿ ಅಂತ ದವಾಖಾನಿ ಕಟ್ಟಿಸ್ಯಾರು, ದನ ಕರ ಕುರಿಗೋಳ ಸಲಾಗಿನೂ ಪಶು ಆಸ್ಪತ್ರೆ ಕಟ್ಟಿಸಿ ಕೊಟ್ಟಾರ ಸ್ವಂತ ಖರ್ಚಿನ್ಯಾಗ’ ಅಂದಳು ರಾಶಿ
‘ಎಂಥಾ ಮಾತೃಹೃದಯ ನೋಡು ಈ ಭಕ್ತ ಕುಂಬಾರನ ಸತಿದು’ ಅಂತ ಕಣ್ಣಿರು ಮಿಡಿದಳು ರಾಣಿ
‘ಇಂಥವ್ರು ಇನಾ ಅದಾರಂತನ ಮಳಿ ಬೆಳಿ ಅಕ್ಕಾವು ನೋಡು’ ಅಂದ ಕಾಕಾ
‘ಇಷ್ಟೆಲ್ಲಾ ಸಾಧನೆ ಮಾಡಿದ ಲೀಲಮ್ಮಗ ಪದ್ಮಶ್ರೀ ಅವಾರ್ಡ ಸಿಗಬೇಕಾಗಿತ್ತು ನೋಡು’ ಅಂತಂದಳು ರಾಶಿ
‘ಎಲ್ಲಿ ಸಿಗ್ತಾವ ಸಾಧಕರಿಗೆ? ಎಲ್ಲಾ ಕಡೆ ಈಗ ನಕಲಿ ಗ್ಯಾಂಗೇ ತುಂಬೈತಿ’ ಅಂತ ಬೇಸರಿಸಿದ ಕಾಕಾ
‘ಈಗ ಈ ನಾಯಿಕೊಡೆ ಗತ್ಲೆ ಸಂಘಗಳು ಹುಟಕೊಂಡಾವು, ಬರ್ರಿ ಬರ್ರಿ ತಗಿರಿ ತಗಿರಿ ನೋಟು, ತಗೋರಿ ತಗೋರಿ ಪ್ರಶಸ್ತಿ ಗಿಶಸ್ತಿ ಅಂತ ಕೂಗಿ ಕೂಗಿ ಕರೆಕತ್ಯಾವು’ ಎಂದು ನಕ್ಕ ರಬಡ್ಯಾ
‘ಏ ಈಗ ಸ್ವಂತ ಶಾಲು ಹಾರಾ ಕೊಟ್ಟು ಸ್ವಯಂ ಸನ್ಮಾನ ಮಾಡಿಸ್ಗೊಂಡು ಆ ಫೋಟೋ ಫೇಸ್ಬುಕ್ನ್ಯಾಗ, ವ್ಯಾಟ್ಸಾಪಿನಾಗ ಹಾಕ್ಕೊಂಡು ಖುಷಿ ಪಡ್ತಾರ, ಮತ್ತ ಪೇಪರನಾಗ, ಟಿವ್ಯಾಗ ಬರೂ ಹಂಗ ನೋಡ್ಕೊಂತಾರ ಮಹಾನ್ ಸುಳ್ಳು ಸಾಧಕರು’ ಅಂತ ರಾಣಿ ಬೈದಳು
‘ಲೀಲಮ್ಮಗ ಕೆಲವು ಮಂದಿಯಿಂದ ಅನ್ಯಾಯ ಆತು, ಕೊನೆಗೂ ಅದ್ನ ಸರಿಪಡಿಸಲಿಕ್ಕಿ ಆಗಲೇ ಇಲ್ಲ, ಆ ಹಿರಿಯ ಜೀವ ಹಂಗೇ ಮರುಗಿ ಹೋಯ್ತು’ ಅಂದಳು ರಾಶಿ
‘ಹೌದು ಲೀಲಾವತಿ ಅವರ ಬಾಳಿನಲ್ಲಿ ಅದೊಂದು ಹಾಂಗೇ ಉಳಿತು ನೋಡು’ ಎಂದ ಗುಡುಮ್ಯಾ
‘ಸರಿ ಎಲ್ಲಾರೂ ಸೇರಿ ಇಂಥಾ ಮಹಾನ್ ತಾಯಿಗಿ ನಮಸ್ಕಾರ ಮಾಡುಣ ಬರ್ರಿ ‘ಅಂತ ಎಲ್ಲಾರನ್ನು ಕರಕೊಂಡ ಹೊಂಟಳು ರಾಣಿ ತಾಯಿ ಸಮಾಧಿ ಕಡೆಗೆ

*– ಶ್ರೀನಿವಾಸ ಜಾಲವಾದಿ,* ಸುರಪುರ

