ವಿಜಯಪುರದಲ್ಲಿ ರಾಷ್ಟ್ರೀಯ ಬಂಜಾರ ಪರಿಷತ್ ಅಧ್ಯಕ್ಷ ಪ್ರಕಾಶ ಬಾಳು ಚವ್ಹಾಣ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರಸಿದ್ಧ ಶ್ರೀ ಅಂಬಾ ಭವಾನಿ ವಾರ್ಷಿಕ ಜಾತ್ರಾ ಮಹೋತ್ಸವವು ಜುಲೈ 18 ಹಾಗೂ 19 ರಂದು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ನಡೆಯಲಿದ್ದು, ಜಾತ್ರೆಯ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ರಾಷ್ಟ್ರೀಯ ಬಂಜಾರ ಪರಿಷದ ಅಧ್ಯಕ್ಷ ಪ್ರಕಾಶ ಬಾಳು ಚವ್ಹಾಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅವರು ಮಾತನಾಡಿ, ಜುಲೈ 18ರಂದು ಬೆಳಿಗ್ಗೆ 9.00 ಗಂಟೆಗೆ ಸೋಲಾಪುರ ರಸ್ತೆಯಲ್ಲಿರುವ ಮರಗಟ್ಟೆ ಓಣಿಯಿಂದ ಶ್ರೀ ಅಂಬಾ ಭವಾನಿ ದೇವಿಯ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಬಂಜಾರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಡೊಳ್ಳು-ತಾಶಾ, ಸಾಂಪ್ರದಾಯಿಕ ನೃತ್ಯಗಳು, 501 ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, ಗೋಂಬೆ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.
ಜುಲೈ 19ರಂದು ಸಂಜೆ 6.00 ಗಂಟೆಗೆ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಭಕ್ತರಿಗೆ ಅಗತ್ಯ ಮೂಲಸೌಕರ್ಯ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಪ್ರಕಾಶ ಬಾಳು ಚವ್ಹಾಣ ತಿಳಿಸಿದರು.
ಶ್ರೀ ಅಂಬಾ ಭವಾನಿ ತಾಯಿಯ ಕೃಪೆಗೆ ಪಾತ್ರರಾಗಲು ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರು, ಭಕ್ತಾದಿಗಳು ಹಾಗೂ ಬಂಜಾರ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರಾಷ್ಟ್ರೀಯ ಬಂಜಾರ ಪರಿಷದ ಅಧ್ಯಕ್ಷ ಪ್ರಕಾಶ ಬಾಳು ಚವ್ಹಾಣ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ಜಾತ್ರಾ ಮಹೋತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

