ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಪ್ರಸಾದ್ ಮನವಿ
ಉದಯರಶ್ಮಿ ದಿನಪತ್ರಿಕೆ
ವರದಿ: ಶ್ರೀಕಂಠ ಈಶ್ವರ್
ಎಚ್ ಡಿ ಕೋಟೆ: ತಾಲೂಕಿನ ಹಲವು ಭಾಗಗಳಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬರಗಾಲದ ಛಾಯೆ ಆವರಿಸಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬೆಳೆಗಳು ಒಣಗುತ್ತಿದ್ದು, ಕೊಳವೆ ಬಾವಿಗಳು ಕೂಡ ಬರಿದಾಗಿವೆ. ಮುಸುಕಿನ ಜೋಳ ಒಣಗುತ್ತಿದ್ದು, ಹತ್ತಿ ಬೆಳೆ ಯಲ್ಲಿ ಯಾವುದೇ ಬೆಳವಣಿಗೆ ಕೂಡ ಕಂಡುಬರುತ್ತಿಲ್ಲ. ಇನ್ನು ಹೊಗೆಸೊಪ್ಪು ಕೂಡ ಬೆಳೆಯದೆ ಇರುವುದರಿಂದ ರೈತರು ಆತಂಕಗೊಂಡಿದ್ದಾರೆ. ಇನ್ನು ಸುರಿಯುತ್ತಿರುವ ಇಬ್ಬನಿಗೆ ಬೆಳೆಗಳು ನಾಶವಾಗುತ್ತಿದ್ದು, ಅನ್ನದಾತನಿಗೆ ದಿಕ್ಕೆತೋಚದಂತಾಗಿದೆ.
ತಾಲೂಕಿನಲ್ಲಿ ಈ ತಿಂಗಳಲ್ಲಿ ಇಲ್ಲಿಯವರಿಗೆ ಕೇವಲ ನಾಲ್ಕರಿಂದ ಐದು ದಿನಗಳು ಮಾತ್ರ ಸಾಧಾರಣ ಮಳೆಯಾಗಿದ್ದರೆ, ಬೀಚನಹಳ್ಳಿ, ಆಲನಹಳ್ಳಿಯಲ್ಲಿ ಒಂದು ಹನಿ ಕೂಡ ಮಳೆ ಧರೆಗೆ ಬಿದ್ದಿಲ್ಲ. ಹೀಗಾಗಿ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು, ಅನ್ನದಾತ ಆಕಾಶ ನೋಡುವಂತಾಗಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ. 52 ರಷ್ಟು ಕಡಿಮೆ ಮಳೆಯಾಗಿರುವುದರಿಂದ ಬಹುತೇಕ ಕಡೆ ರೈತರು ಇನ್ನು ಬಿತ್ತನೆ ಬೀಜವನ್ನೇ ಮಾಡಿಲ್ಲ. ಜಮೀನು ಹದಮಾಡಿಕೊಂಡು, ಬಿತ್ತನೆ ಬೀಜ ಮನೆಯಲ್ಲಿಟ್ಟುಕೊಂಡು ವರುಣನ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ.
ಜುಲೈ ತಿಂಗಳಿಗೆ ಅಂದಾಜು 398 ಮಿಲಿ ಮೀಟರ್ ನಷ್ಟು ವಾಡಿಕೆ ಮಳೆಯಾಗಬೇಕಾಗಿತ್ತು. ಆದರೆ ಕೇವಲ 211 ಮಿಲಿ ಮೀಟರ್ ನಷ್ಟು ಮಳೆಯಾಗಿದ್ದು, ಈ ವರ್ಷ ಶೇ.47ರಷ್ಟು ಮಳೆ ಕೊರತೆ ಉಂಟಾಗಿದೆ. ಕಳೆದ ವರ್ಷ ಇಲ್ಲಿಯವರೆಗೆ ಅಂದಾಜು 600 ಮಿಲಿ ಮೀಟರ್ ಗಿಂತ ಹೆಚ್ಚು ಮಳೆಯಾಗಿ ತಾಲೂಕಿನ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದವು, ಆದರೆ ಈ ಬಾರಿ ಮಳೆ ಕೊರತೆಯಿಂದ ತಾಲೂಕಿನ ರೈತರ ಜೀವನಾಡಿಯಾಗಿರುವ ಕಪಿಲಾ ಒಡಲು ಮತ್ತೆ ಬರಿದಾಗುವ ಸ್ಥಿತಿಗೆ ತಲುಪಿದೆ. ತಾಲೂಕಿನಲ್ಲಿ ಪೂರ್ವ ಮುಂಗಾರು ಮಳೆಗೆ 60,927 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿತ್ತು. ಆದರೆ ಈ ಸಲ 34,434 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆಗಳನ್ನು ಬೆಳೆಯಲಾಗಿದೆ.
ರೈತರು ಬೆಳೆವಿಮೆ ಮಾಡಿಸಿಕೊಳ್ಳಲು ಸಲಹೆ
ಕೃಷಿ ಇಲಾಖೆಯ ಮಾಹಿತಿ ಪ್ರಕಾರ ತಾಲೂಕಿನಲ್ಲಿ 25000 ಹೆಕ್ಟೆರ್ ಪ್ರದೇಶದಲ್ಲಿ ಮುಸುಕಿನ ಜೋಳ, 5150 ಹೆಕ್ಟೆರ್ ಪ್ರದೇಶದಲ್ಲಿ ಹೊಗೆ ಸೊಪ್ಪು, 3070 ಹೆಕ್ಟೆರ್ ಪ್ರದೇಶದಲ್ಲಿ ಹತ್ತಿ,1350 ಹೆಕ್ಟೆರ್ ಪ್ರದೇಶದಲ್ಲಿ ಅಲಸಂದೆ,150 ಹೆಕ್ಟೆರ್ ಪ್ರದೇಶದಲ್ಲಿ ಉದ್ದು, 200 ಹೆಕ್ಟೆರ್ ಪ್ರದೇಶದಲ್ಲಿ ರಾಗಿ, 100 ಹೆಕ್ಟೆರ್ ಪ್ರದೇಶದಲ್ಲಿ ತೊಗರಿ,150 ಹೆಕ್ಟೆರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ ಅಷ್ಟೇ. ವಾರದ ಹಿಂದೆ ಸುರಿಯುತ್ತಿದ್ದ ಮಳೆ ಇದೀಗ ಕಡಿಮೆಯಾಗಿತ್ತಾ ಬಂದಿದ್ದು, ಬಿಸಿಲಿನ ಝಳ ಹೆಚ್ಚಾಗಿದೆ. ಹೀಗಾಗಿ ರೈತರು ಎಚ್ಚರಿಕೆಯಿಂದ ವ್ಯವಸಾಯ ಮಾಡಬೇಕಾಗಿದೆ. ಹವಾಮಾನ ಶಾಸ್ತ್ರಜ್ಞರ ಪ್ರಕಾರ ಭಾರತದ ಹವಾಮಾನ ಮೇಲೆ ಎಲ್ ನಿನೋ ಪ್ರಭಾವ ಬೀರಿದ್ದು, ಶುಷ್ಕ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿರುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಮಿಶ್ರ ಬೇಸಾಯದ ಜೊತೆಗೆ ವೈಜ್ಞಾನಿಕ ರೀತಿಯಲ್ಲಿ ಬೇಸಾಯ ಪದ್ಧತಿ ಅಳವಡಿಸಿಕೊಂಡು, ಬೆಳೆ ವಿಮೆ ಮಾಡಿಸಿಕೊಳ್ಳುವುದರ ಮೂಲಕ ಬೆಳೆಹಾನಿಯಿಂದ ಕೊಂಚ ಮಟ್ಟಿಗೆ ಪಾರಾಗಬೇಕಾಗಿದೆ.
“ಮುಸುಕಿನ ಜೋಳ ಬೆಳೆಯುವ ರೈತರು ಬೆಳೆಗೆ ವಿಮೆ ಮಾಡಿಸಲು ಈ ತಿಂಗಳ 31ನೇ ತಾರೀಕು ಕೊನೆಯ ದಿನಾಂಕವಾಗಿದ್ದು ರೈತರು ತಾವುಗಳು ಫಸಲು ವಿಮಾ ಯೋಜನೆಯನ್ನು ಗ್ರಾಮ ಒನ್ ಸೆಂಟರ್, ಸಾಮಾನ್ಯ ನಾಗರಿಕ ಸೇವಾ ಕೇಂದ್ರ, ಅಥವಾ ತಾವು ಖಾತೆದಾರರಾಗಿರುವ ಬ್ಯಾಂಕ್ ಶಾಖೆಗಳ ಮೂಲಕ ವಿಮೆ ಯೋಜನೆಯನ್ನು ಮಾಡಿಸಿ ಬೆಳೆ ನಷ್ಟದಿಂದ ಪಾರಾಗಬಹುದಾಗಿದೆ.”
– ಪ್ರಸಾದ್
ಕೃಷಿ ಇಲಾಖೆ ಸಹಾಯಕ ನಿರ್ದೇಶಕರು

