ವಿಜಯಪುರ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಆನಂದ ಕೆ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮನೆ ಮನೆ ಗಣತಿ ಹಾಗೂ ಡಿಜಿಟಲೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಪ್ರಸ್ತುತ ಜಿಲ್ಲಾದ್ಯಂತ ಒಟ್ಟು ೧೯,೩೯,೬೭೭ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಗಣತಿ ಕಾರ್ಯವು ಪ್ರಗತಿಯಲ್ಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜುಲೈ.೧೬.ರಲ್ಲಿದ್ದಂತೆ ಮತದಾರರ ಪಟ್ಟಿಯಲ್ಲಿ ಒಟ್ಟು ೧೯,೮೨,೧೧೪ ಮತದಾರರಿದ್ದು, ಗಣತಿ ನಮೂನೆಗಳನ್ನು ಈಗಾಗಲೇ ಆಯಾ ವ್ಯಾಪ್ತಿಯ ಬಿ.ಎಲ್.ಒ ಗಳಿಗೆ ವಿತರಿಸಲಾಗಿದೆ.
ಮನೆ ಮನೆ ಗಣತಿ ಹಾಗೂ ಡಿಜಿಟಲೀಕರಣದ ಅವಧಿಯು ದಿನಾಂಕ ೩೦-೦೬-೨೦೨೬ ರಿಂದ ಆರಂಭಗೊಂಡಿದ್ದು, ೦೮-೦೮-೨೦೨೬ರವರೆಗೆ ನಡೆಯಲಿದೆ.
ಇದುವರೆಗೆ ಜಿಲ್ಲೆಯಲ್ಲಿ ಕೈಗೊಳ್ಳಲಾದ ಗಣಕೀಕರಣದ ಸದ್ಯದ ಸ್ಥಿತಿಗತಿಯಂತೆ ಒಟ್ಟು ೧೦,೦೮,೮೯೯ ಗಣತಿ ನಮೂನೆಗಳನ್ನು ಯಶಸ್ವಿಯಾಗಿ ಗಣಕೀಕರಣಗೊಳಿಸಲಾಗಿದೆ. ಇದರಲ್ಲಿ ಆನ್‌ಲೈನ್ ಮೂಲಕ ಮತದಾರರು ಸಲ್ಲಿಸಿದ ಒಟ್ಟು ಗಣತಿ ನಮೂನೆಗಳ ಸಂಖ್ಯೆ ೩,೩೨೧ ಆಗಿದೆ. ಇನ್ನುಳಿದಂತೆ ಕ್ಷೇತ್ರ ಭೇಟಿಯ ಸಮಯದಲ್ಲಿ ವಿವರ ಸಂಗ್ರಹಿಸಲು ಸಾಧ್ಯವಾಗದ ಅಥವಾ ಗೈರುಹಾಜರಾದ ಮತದಾರರ ಸಂಖ್ಯೆ ೨೨೧ ಆಗಿದ್ದು, ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವ ೮,೬೯೮ ಮತದಾರರನ್ನು ಗುರುತಿಸಲಾಗಿದೆ. ಇದರೊಂದಿಗೆ ಮರಣ ಹೊಂದಿರುವ ೯,೯೬೯ ಮತದಾರರು, ಈಗಾಗಲೇ ನೋಂದಾಯಿಸಿಕೊಂಡಿರುವ ೩,೧೭೬ ಮತದಾರರು ಹಾಗೂ ಇತರೆ ೧೫೦ ಇದ್ದಾರೆ.
ನಿಗದಿತ ಅವಧಿಯೊಳಗೆ ಜಿಲ್ಲೆಯ ಎಲ್ಲಾ ಅರ್ಹ ಮತದಾರರ ವಿವರಗಳನ್ನು ನಿಖರವಾಗಿ ಪರಿಷ್ಕರಿಸಲು ಬಿ.ಎಲ್.ಒಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಸಾರ್ವಜನಿಕರು ಅಗತ್ಯ ದಾಖಲೆ ಮತ್ತು ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

