ವೀಣಾಂತರಂಗ
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ

who
Is the 1st engineer of your life
ನಮ್ಮ ಜೀವನದ ನಿಜವಾದ ಎಂಜಿನಿಯರ್ ಯಾರು? ನಮ್ಮ ಪಾಲಕರು. ನಾವು ಹುಟ್ಟುವ ಮುಂಚೆಯೇ ನಮ್ಮ ಜೀವನ ಹೇಗೆ ರೂಪಿಸಬೇಕು, ಹೇಗೆ ರೂಪಿಸಬಹುದು ಹೇಗೆ ರೂಪಿಸಬಲ್ಲೆವು ಎಂಬ ನೀಲನಕ್ಷೆಯನ್ನು ನಮ್ಮ ಪಾಲಕರು ತಯಾರಿಸುತ್ತಾರೆ.ಬಹುತೇಕ ಆ ತಯಾರಿಯ ಹಿಂದೆ ಸಾಕಷ್ಟು ಆಸೆ, ಆಕಾಂಕ್ಷೆ ತಾವು ಕಂಡ ಕನಸುಗಳ ನನಸು ಮಾಡುವ ತಮ್ಮ ಮಕ್ಕಳ ಕುರಿತು ಬೃಹತ್ತಾದ ಅಪೇಕ್ಷೆ ಅವರಲ್ಲಿ ಇರುತ್ತದೆ.ಕೇವಲ 4 ವರ್ಷದ ಎಂಜಿನಿಯರಿಂಗ್ ಅಭ್ಯಾಸ ಮಾಡುವವರನ್ನು ಅಭಿಯಂತರರು ಎಂದು ಕರೆಯಬಹುದಾದರೆ ನಮ್ಮ ಜೀವನ ರೂಪಿಸಲು ತಮ್ಮ ಆಸೆ, ಆಕಾಂಕ್ಷೆ, ಅನುಭವಗಳನ್ನು ಧಾರೆ ಎರೆಯುವ ತಂದೆತಾಯಿಗಳನ್ನು ಕೂಡ ಎಂಜಿನಿಯರ್ ಎಂದು ಕರೆಯಬಹುದಲ್ಲವೇ …
ಇನ್ನು ಎರಡನೇ ಪ್ರಶ್ನೆ ಕೃಷ್ಣರಾಜ ಸಾಗರ ಡ್ಯಾಂ ಕಟ್ಟಿಸಿದ್ದು ಯಾರು ???
ಕೃಷ್ಣರಾಜಸಾಗರ ಡ್ಯಾಮ್ ಕಟ್ಟಿಸಿದ್ದು ಮೈಸೂರಿನ ಅರಸರು. ಅದರ ಎಂಜಿನಿಯರ್ ನಮ್ಮೆಲ್ಲರ ಪ್ರೀತಿಯ ಸರ್ ಎಂ. ವಿಶ್ವೇಶ್ವರಯ್ಯನವರು. ಆದರೆ ನಿಮಗೆ ಗೊತ್ತೇ ಆ ಡ್ಯಾಮ್ ಕಟ್ಟಲು ಸಾಕಷ್ಟು ಹಣದ ಅವಶ್ಯಕತೆ ಇತ್ತು. ಅಂದಿನ ಮೈಸೂರು ಸರ್ಕಾರದಲ್ಲಿ ಇಷ್ಟೊಂದು ಭಾರಿ ಮೊತ್ತದ ರಖಮು ಇರಲಿಲ್ಲ. ಆದರೆ ಕೃಷ್ಣರಾಜಸಾಗರ ಅಣೆಕಟ್ಟಿನ ಹಿಂದೆ ಮೈಸೂರು ಮಹಾರಾಜರ, ಸರ್ ಎಂ ವಿಶ್ವೇಶ್ವರಯ್ಯನವರ ನೀರಾವರಿಯ ಕನಸು, ಜನಕಲ್ಯಾಣದ ಕನಸು ಬಹುದೊಡ್ಡದು. ಈ ಕನಸಿನ ಹಿಂದಿನ ಮಹತ್ವಾಕಾಂಕ್ಷೆಯನ್ನು ಅರಿತ ಅಂದಿನ ಮಹಾರಾಣಿ ಕೆಂಪನಂಜಮ್ಮಣ್ಣಿ ಯವರು ತಮ್ಮ ಅರಸೊತ್ತಿಗೆಯ ವೈಯುಕ್ತಿಕ ಸಂಪತ್ತಾದ ವಜ್ರ, ವೈಡೂರ್ಯ, ಚಿನ್ನವನ್ನು ಮದರಾಸಿನಲ್ಲಿ ಮಾರಿ ಆ ಹಣವನ್ನು ಅಣೆಕಟ್ಟಿನ ಕಾರ್ಯಕ್ಕೆ ಬಳಸಲು ನೀಡಿದರು.. ಅವರಲ್ಲವೇ ನಿಜವಾದ ಮಹಾತಾಯಿ.
ಇನ್ನೂ ಶಿವಾಜಿ ಮಹಾರಾಜರ ಹೆಸರನ್ನು ಯಾರು ಕೇಳಿಲ್ಲ?
ದಕ್ಷಿಣದಲ್ಲಿ ಕನ್ಯಾಕುಮಾರಿಯಿಂದ ಉತ್ತರಕ್ಕೆ ಅಂದಿನ ಗಾಂಧಾರ ದೇಶ, ಇಂದಿನ ಅಫಘಾನಿಸ್ಥಾನದವರೆಗೆ ಅಖಂಡ ಹಿಂದೂ ಸಾಮ್ರಾಜ್ಯವನ್ನು ಕಟ್ಟಿ ಮೆರೆದ ಚಕ್ರವರ್ತಿ ಶಿವಾಜಿ. ಬಿಜಾಪುರದ ಸುಲ್ತಾನರ ಅಶ್ವದಳದ ಮುಖ್ಯಾಧಿಕಾರಿಯಾದ ಷಹಾಜಿಯ ಪುತ್ರ ಅಖಂಡ ಹಿಂದೂ ಸಾಮ್ರಾಜ್ಯದ ಚಕ್ರವರ್ತಿಯಾಗಿ ಮೆರೆದದ್ದು ತಾಯಿ ಜೀಜಾಬಾಯಿಯ ಅಮಿತ ವಿಶ್ವಾಸದ ತಳಹದಿಯ ಮೇಲೆ.
ಜಗತ್ತಿನ ಮೊತ್ತ ಮೊದಲ ಸಂಸತ್ತು ಅನುಭವ ಮಂಟಪವನ್ನು ಕಟ್ಟಿದ, ಕಾರ್ಲ್ ಮಾರ್ಕ್ಸ್ ನಿಗಿಂತ ನೂರಾರು ವರ್ಷ ಮೊದಲೇ ಸಮಾಜವಾದವನ್ನು ಜಗತ್ತಿಗೆ ಉಣಬಡಿಸಿದ ಬಸವಣ್ಣನವರ ಹಿಂದೆ ಅವರ ಅಕ್ಕ… ಅಕ್ಕ ನಾಗಮ್ಮನ ಶ್ರಮ ಅಪಾರ.
ದಿನದ ಬಳಕೆಗೆ ಮೀರಿದ ಅಕ್ಕಿಯನ್ನು ತಂದ ಗಂಡನಿಗೆ ಈಸಕ್ಕಿಯ ಆಸೆ ನಿಮಗೇಕೇ,?? ಎಂದು ಚಾಟಿಯ ಮಾತು ಬೀಸಿದ ಆಯ್ದಕ್ಕಿ ಮಾರಯ್ಯನವರ ಪತ್ನಿ ಆಯ್ದಕ್ಕಿ ಲಕ್ಕಮ್ಮನವರಂತಹ ಪತ್ನಿಯು, ಪತಿಯ ಆಶೋತ್ತರಗಳಿಗೆ ಸರಿಸಮನಾಗಿ ಶ್ರಮವಹಿಸಿ ಹೆಣ್ಣುಮಕ್ಕಳ, ಅಲಕ್ಷಿತ ವರ್ಗದ ಸೇವೆ ಸಲ್ಲಿಸಿದ ಜ್ಯೋತಿಬಾ ಪುಲೆ ಅವರ ಪತ್ನಿ ಅಕ್ಷರದ ಅವ್ವ ಭಾರತ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರಂತಹ ಮತ್ತು ಗಾಂಧೀಜಿಯವರ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ಗಾಂಧೀಜಿಯವರ ನಿಷ್ಟುರ ನ್ಯಾಯಪರ ನಡೆ, ನುಡಿಗಳಿಗೆ ಇಂಬು ಕೊಟ್ಟಂತಹ ಕಸ್ತೂರ್ ಬಾ ಗಾಂಧಿ ಮತ್ತು ಪತಿಯ ಆಶೋತ್ತರಗಳಿಗೆ ಹೆಗಲುಗೊಟ್ಟು ಆರ್ಥಿಕ ಸಹಾಯ ನೀಡಿ ಜಗತ್ತಿನಲ್ಲೇ ಅತಿ ದೊಡ್ಡದಾದ ಇನ್ಫೋಸಿಸ್ ಸಂಸ್ಥೆ ಕಟ್ಟಿದ ನಮ್ಮದೇ ನಾಡಿನ ಶ್ರೀಮತಿ ಸುಧಾ ನಾರಾಯಣ ಮೂರ್ತಿ ಅಮ್ಮ, ದೇಶಪಾಂಡೆ ಫೌಂಡೇಶನ್ ನ ಲೀಡ್ ಸಂಸ್ಥೆಯ ಜಯಶ್ರೀ ಅಮ್ಮ, ಸಾಲು ಸಾಲು ಸಾಲು ಮರಗಳನ್ನು ಬೆಳೆಸಿ ಪೋಷಿಸಿ ಉಳಿಸಿದ ಸಾಲುಮರದ ತಿಮ್ಮಕ್ಕ ಪತಿ ಬಾಬುರಾವ್ ದೇಶಮಾನೆಯವರ ಆಶೋತ್ತರದಂತೆ ತರಕಾರಿ ವ್ಯಾಪಾರ ಮಾಡುತ್ತಾ ಸಾಲುಸಾಲು ಮಕ್ಕಳನ್ನು ಓದಿಸಲು ತನ್ನದೇ ತಾಳಿಯ ಬೊಟ್ಟನ್ನು ಮಾರಿ ಮಗಳನ್ನು ದೇಶದ ಅತಿದೊಡ್ಡ ಕ್ಯಾನ್ಸರ್ ರೋಗತಜ್ಞೆ ಡಾಕ್ಟರ್ ವಿಜಯಲಕ್ಷ್ಮಿ ದೇಶಮಾನೆಯವರನು ಕೊಡುಗೆ ನೀಡಿದ ರತ್ನವ್ವ ದೇಶಮಾನೆ ಹೀಗೆ ಹೇಳಹೊರಟರೆ ಸಾಲು ಸಾಲು ಯಶೋಗಾಥೆಗಳು. ಆದರೆ ನಮ್ಮದೇ ಸುತ್ತಮುತ್ತ ಸಾವಿರಾರು ಲಕ್ಷಾಂತರ ಮಹಿಳೆಯರು ತಮ್ಮ ಮನೆಯ ಅಣ್ಣ, ತಮ್ಮ, ಅಕ್ಕ, ತಂಗಿ ಮತ್ತು ಮಕ್ಕಳನ್ನು ಓದಿಸಲು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ತ್ಯಾಗಜೀವಿಗಳಾಗಿದ್ದಾರೆ. ಇಲ್ಲಿ ಹೆಣ್ಣು ಮನೆ-ಮನಗಳನ್ನು ಬೆಳಗುವ ದೇವತೆ. ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ತಂಗಿಯಾಗಿ ಆಕೆ ಪರಮ ಪುನೀತೆ.
ಈಗ ಹೇಳಿ ಏನೆಲ್ಲಾ ಅನಾನುಕೂಲತೆಗಳನ್ನ ಅನುಭವಿಸಿದರೂ ಎಲ್ಲವನ್ನು ಸಾಧಿಸಿದ ಆ ಮಹಿಳೆಯರ ಭವಿಷ್ಯ ನಾವು, ನೀವುಗಳು ಅವರ ಕನಸಿನ ಹಾದಿಯನ್ನ ಸಾಗಲೇ ಬೇಕಲ್ಲವೇ .ಈ ಭವ್ಯ ಪರಂಪರೆ ಹೆಸರನ್ನು ಉಳಿಸಬೇಕು, ಉಳಿಸಿ ಬೆಳೆಸಬೇಕು, ಬೆಳೆಸಿ ಬೆಳಗಬೇಕು. ಇದು ಪ್ರತಿಯೊಬ್ಬ ಮಹಿಳೆಯರಾಗಿ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ.
ಇಂದಿನ ಯುವತಿಯರೇ ನಾಳೆಯ ಮಹಿಳೆಯರು ಭವ್ಯ ಭಾರತದ ಕನಸಿನ ಕೂಸುಗಳು ನಾವೆಲ್ಲ. ಈ ದೇಶದ ತಾಯಂದಿರು ನಡೆದು ಬಂದ ಹಾದಿಯನ್ನು ಅವಲೋಕಿಸಿದರಷ್ಟೆ ನಮಗೆ ನಮ್ಮ ಮುಂದಿನ ಜವಾಬ್ದಾರಿಯ ಅರಿವು ಆಗಬಹುದು.
ಎಲ್ಲಾ ಜವಾಬ್ದಾರಿಗಳು ಹೆಣ್ಣಿನದೇ ಏಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು.. ಅದಕ್ಕೆ ಉತ್ತರ ಏನು ಗೊತ್ತಾ ‘ಹೆಣ್ಣೆಂದರೆ ನಮ್ಮನೆಲ್ಲ ಪೊರೆವ ತಾಯಿ ಹೆಣ್ಣೆಂದರೆ ನಮ್ಮನ್ನೆಲ್ಲ ಹಡೆದವಳು’.
ನಿಜ ನಮ್ಮ ವ್ಯಕ್ತಿತ್ವವನ್ನು ೩ ಮೂಲಭೂತ ಅಡಿಪಾಯಗಳ ಮೂಲಕ ಅರಿಯಬಹುದು .
೧.ಮಾನಸಿಕ ೨.ದೈಹಿಕ ಮತ್ತು ೩.ಭಾವನಾತ್ಮಕ
‘ಜಿಯೋ ಜಿಂದಗಿ ಭರ್’ ಎಂದು ಹೇಳುತ್ತಾರಲ್ಲ ಹಾಗೆ ಜೀವನವನ್ನ ಮನದುಂಬಿ ಜೀವಿಸಬೇಕು ಆಗ ಮಾತ್ರ ನಾವು ಸಂಪೂರ್ಣ ಜೀವನದ ಸಾರವನ್ನು ಆನಂದಿಸಬಹುದು ಎಂದು ಹೇಳುತ್ತಾನೆ. ನಾವು ನಮ್ಮ ಇತಿಹಾಸ, ಪರಂಪರೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದು.
ನಮಗೆಲ್ಲ ಒಂದು ಚಟ ಇದೆ, ನಾವು ಬೇರೊಬ್ಬರನ್ನ ತುಂಬಾ ಚೆನ್ನಾಗಿ ಅನುಕರಿಸುತ್ತೇವೆ. ಬೇರೆಯವರ ಬಟ್ಟೆ ಬರೆಯ ಉಡುಗೆ ತೊಡುಗೆಗಳ ಶೈಲಿ, ಮಾತಿನ ಶೈಲಿ,ಜೀವನದ ಶೈಲಿ.. ಎಷ್ಟೋ ಬಾರಿ ಅವುಗಳು ತುಂಬಾ ದುಬಾರಿಯಾಗಿದ್ದರೂ ನಮ್ಮ ಕೈಗೆಟುಕದ ರೀತಿಯಲ್ಲಿದ್ದರು ನಾವು ಕುರುಡರ ಹಾಗೆ ಮತ್ತೊಬ್ಬರನ್ನ ಅನುಕರಿಸುತ್ತೇವೆ.. ಇದನ್ನ ನಾನು ನಯಾಗರಾ ಸಿಂಡ್ರೋಮ್ ಎಂದು ಕರೆಯುತ್ತೇವೆ. ನೀವು ಅವರಂತೆ ಇವರಂತೆ ಆಗಿರದೆ ನಿಮ್ಮತನವನ್ನು ಬಿಟ್ಟುಕೊಡದೆ..
be d best version of yourselves. Because you are unique, you are you. and no other creature is made like you ….. alone You are the one and only.
ಹುಟ್ಟಿಸಿದ ಆ ದೇವರೇ ಒಬ್ಬರ ತರ ಇನ್ನೊಬ್ಬರ ಸೃಷ್ಟಿಸಿಲ್ಲ ನಾವೇಕೆ ಮತ್ತೊಬ್ಬರನ್ನು ಅನುಕರಿಸುವ ರೋಗಕ್ಕೆ ಬೀಳಬೇಕು. ಹೀಗೆ ಅನುಕರಿಸುವ ಭರದಲ್ಲಿ ನಾವು ನಮ್ಮತನವನ್ನು ಕಳೆದುಕೊಳ್ಳುತ್ತೇವೆ. ಆಗ ಹುಟ್ಟಿಕೊಳ್ಳುವುದೇ ಅಸಂತೃಪ್ತಿ. ನಮ್ಮ ಬಗ್ಗೆ ನಮಗೇ ಕೀಳರಿಮೆ. ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ . ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಒಳ್ಳೆಯದಲ್ಲ. ಅದೊಂದು ರೀತಿಯ ಇಳಿಜಾರಿನ ಪಯಣ. ಹೇಗೆ ಇಳಿಜಾರಿನಲ್ಲಿ ನಮಗೆ ಮೇಲೆ ಬರಲು ಅವಕಾಶಗಳು ಅತ್ಯಂತ ಕಡಿಮೆಯೋ ಹಾಗೆಯೇ ಕೀಳರಿಮೆ ನಮ್ಮನ್ನು ಪಾತಾಳಕ್ಕಿಳಿಸುತ್ತದೆ. ಆಗ ಉಂಟಾಗುವ ನೋವು, ನಿರಾಶೆಗಳು ನಮ್ಮನ್ನು ದೈಹಿಕವಾಗಿ ಮಾನಸಿಕವಾಗಿ ಬಲಹೀನಗೊಳಿಸುತ್ತವೆ. ಅದಕ್ಕೆ ನನ್ನ ಬಲವಾದ ನಂಬಿಕೆ “ನೋಡಿ ಸ್ವಾಮಿ ನಾವಿರೋದೆ ಹೀಗೆ”
ಹೀಗೆ ನಾವು ನಾವಾಗಿದ್ದಾಗ ಸಮಾಧಾನ, ಸಂತೃಪ್ತಿ ,ಸಂತಸ ನಮ್ಮದಾಗಿರುತ್ತದೆ. ಇಲ್ಲದೇ ಹೋದರೆ ಅಸಹನೆ, ಅಸಮಾಧಾನ, ಅಸಂತೃಪ್ತಿ ಮತ್ತು ಅಸಂತೋಷಗಳು ನಮ್ಮನ್ನು ಕಾಡತೊಡಗುತ್ತದೆ.
ಮೂಲಭೂತವಾಗಿ ನೋಡದೇ ಹೋದರೆ ಇವೆಲ್ಲ ಸಮಸ್ಯೆಗಳು ಎಂದೆನಿಸುವುದಿಲ್ಲ ಆದರೆ ಈ ಸಮಸ್ಯೆಗಳು ನಮ್ಮನ್ನು ದೈಹಿಕವಾಗಿ ಮಾನಸಿಕವಾಗಿ ದುರ್ಬಲರನ್ನಾಗಿಸುತ್ತದೆ. ಅದಕ್ಕೇ ಅಲ್ವೇ ಹೇಳಿರೋದು.
A sound mind in a sound body.
From mensturation to menopause We lead a long journey
ಋತುಚಕ್ರದಿ೦ದ ಋತುಬಂಧದವರೆಗೆ ನಾವು ಮಹಿಳೆಯರು ಹಲವಾರು ಮಜಲುಗಳನ್ನು ದಾಟಲೇಬೇಕು .ಕೆಲ ಮಕ್ಕಳು ತಿಂಗಳ ಋತುಚಕ್ರವನ್ನು , ಅಲ್ಲಿ ಅನುಭವಿಸುವ ನೋವು, ಸಂಕಟಗಳನ್ನು ತುಂಬಾ ನೆಗೆಟಿವ್ ಆಗಿ ಮಾತನಾಡುತ್ತಾರೆ ದಯವಿಟ್ಟು ಹಾಗೆ ಮಾಡಬೇಡಿ. ಯಾಕೆಂದರೆ ಸೃಷ್ಟಿ ಕ್ರಿಯೆಗೆ ಪೂರಕವಾದ ಕ್ರಿಯೆಯೇ ಋತುಚಕ್ರದ ಆರಂಭ .
ನಿಮಗೆ ಇರುವ ನಿಮ್ಮದೇ ಕಣ್ಣು, ಕಿವಿ, ಮೂಗು, ಬಾಯಿರುವ ನಿಮ್ಮದೇ ಆದ ಕುಡಿಯನ್ನ ಸೃಷ್ಟಿಸುವ ಅವಕಾಶ ಜಗತ್ತಿನ ಬೇರಾವ ಗಂಡು ಜೀವಿಗೂ ಇಲ್ಲ.
You are fortunate. You are the power and The power is within you to create.
ಋತುಚಕ್ರವನ್ನ ಹೀಗಳೆಯುವ ಅವಶ್ಯಕತೆಯಿಲ್ಲ. ಹಾಗಾದರೆ ನೋವನ್ನು ಅನುಭವಿಸಬೇಕೇ …. ಖಂಡಿತ ಅಲ್ಲ. ನೋವನ್ನ ಅನುಭವಿಸುವುದಕ್ಕಿಂತ ನೋವನ್ನು ಕಡಿಮೆ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ಗಮನ ಹರಿಸೋಣ. ಯೋಗ, ಧ್ಯಾನ ಮತ್ತು ವ್ಯಾಯಾಮಗಳು ನಮ್ಮ ಈ ನೋವನ್ನ ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಬಲ್ಲವು. ನೋವು ಕಡಿಮೆ ಆಗೋದಿಲ್ಲ ಅಂತ ಅಲ್ಲ ನೋವನ್ನ ತಡೆಯುವ ನಿಮ್ಮ ದೈಹಿಕ ಮಾನಸಿಕ ಶಕ್ತಿಯನ್ನು ಈ ಯೋಗ ಧ್ಯಾನಗಳು ಹೆಚ್ಚಿಸುತ್ತವೆ.
ಇನ್ನು ಹೆಣ್ಣುಮಕ್ಕಳಲ್ಲಿ ಹದಿಹರೆಯದಲ್ಲಿ …ಇದೀಗ ಹದಿಹರೆಯದ ಡೆಫ್ನಿಶನ್ ತುಂಬಾ ಬದಲಾಗಿದೆ. ಕೇವಲ ಎಂಟರಿಂದ ಹತ್ತು ವರ್ಷದಲ್ಲಿ ಪ್ಯೂಬರ್ಟಿ ಅಂದರೆ ಹಾಲು ಹಲ್ಲುಗಳು ಬೀಳುವ ಮೊದಲೇ ಹೆಣ್ಣುಮಕ್ಕಳು ಹಾರ್ಮೋನುಗಳ ಬದಲಾವಣೆಗೆ ಒಳಗಾಗುತ್ತಾರೆ. ಅನೇಕ ದೈಹಿಕ ಬದಲಾವಣೆಗಳು ಅವರನ್ನ ಗೊಂದಲದ ಸುಳಿಗೆ ಸಿಲುಕಿಸುತ್ತದೆ. ಜೊತೆಗೆ ಮಾನಸಿಕವಾಗಿಯೂ ಅವರು ಆಕರ್ಷಣೆಗೆ ಒಳಗಾಗುತ್ತಾರೆ. ಇಂತಹ ಸಮಯದಲ್ಲಿ ತಾಯಂದಿರು ಮಕ್ಕಳಿಗೆ ಭದ್ರತೆಯನ್ನ ಜ್ಞಾನವನ್ನು ಒದಗಿಸಬೇಕು.. ಇದು ಕೇವಲ ತಾಯಂದಿರದಷ್ಟೇ ಅಲ್ಲ ನಿಮಗೆ ಇದರ ಅರಿವಿದ್ದರೆ ನೀವೂ ಕೂಡ ನಿಮ್ಮ ಅಕ್ಕ ತಂಗಿಯರಿಗೆ ಈ ವಿಷಯವನ್ನು ಸರಿಯಾದ ತಿಳುವಳಿಕೆ ನೀಡುವ ಮೂಲಕ ತಿದ್ಧಬಹುದು.
ಇನ್ನೂ ಕೆಲವು ಯುವತಿಯರು ಮೊಡವೆಗಳು, ಕೂದಲಲ್ಲಿ ಹೊಟ್ಟು, ತಲೆ ಕೂದಲ ಉದುರುವಿಕೆ,ವಿಪರೀತ ಸ್ರಾವಗಳು, ಕೈಕಾಲುಗಳ ಹೊಡೆತಗಳು ಮುಂತಾದ ತೊಂದರೆಗಳನ್ನು ಅನುಭವಿಸುತ್ತಾರೆ. ಇವು ದೈಹಿಕವಾಗಿ. ಇದಕ್ಕೆ ಕಾರಣ ನಮ್ಮ ಆಹಾರ ಶೈಲಿ… ಮನೆಯಲ್ಲಿಯೇ ತಯಾರಿಸಿದ ಆಹಾರದಲ್ಲಿ ಯಾವುದೇ ರೀತಿಯ ತೊಂದರೆಗಳು ಬರುವ ಸಾಧ್ಯತೆ ತುಂಬಾ ಕಡಿಮೆ. ಆದರೆ ಬೀದಿ ಬದಿಯ ತಿಂಡಿ ತೀರ್ಥಗಳು ,ಪ್ಯಾಕ್ಡ್ ಫುಡ್ ಐಟಮ್ ಗಳು, ಮನೆಯಲ್ಲಿ ಮಾಡಿಕೊಳ್ಳಲು ಅನುಕೂಲವಾಗುವಂತೆ ತಯಾರಾದ ಇನ್ ಸ್ಟಂಟ್ ಫುಡ್ ಐಟಂಗಳು ಇವುಗಳಲ್ಲಿ ಪ್ರಿಸರ್ವೇಟಿವ್ ಆಗಿ ಬಳಸುವ ವಸ್ತುಗಳಲ್ಲಿ ನಮ್ಮ ದೇಹಕ್ಕೆ ಒಗ್ಗದ ಆಹಾರ ಪದಾರ್ಥಗಳೇ ಹೆಚ್ಚಾಗಿ ಇರುತ್ತವೆ. ಜೊತೆಗೆ ಇಂದಿನ ಅತಿಯಾದ ಆಲಸಿ ಜೀವನ, ಮೊಬೈಲ್ ನೊಂದಿಗಿನ ಸಹಬಾಳ್ವೆ, ಅತಿಯಾದ ಸೋಷಿಯಲ್ ನೆಟ್ ವರ್ಕಿಂಗ್, ತಾಸುಗಟ್ಟಲೆ ಕುಳಿತಲ್ಲೇ ಕುಳಿತು ಕುಡಿದ ನೀರು ಅಲುಗಾಡದಂತಹ ಪರಿಸ್ಥಿತಿಯಲ್ಲಿ ದೇಹ ವಿಪರೀತ ಯಾತನೆಯನ್ನ ಅನುಭವಿಸುತ್ತವೆ .. ಅಪೇಕ್ಷಣೀಯ ಆದರೆ ಅನಾರೋಗ್ಯಕರ ಎನ್ನಬಹುದಾದ ತಿಂಡಿ ತಿನಿಸುಗಳು ನಿಮ್ಮ ಮುಖದಲ್ಲಿ ಮೊಡವೆಗಳಿಗೆ ಕಾರಣವಾಗುತ್ತದೆ.. ಹೆಚ್ಚು ನೀರು ಸೇವನೆ, ಪೌಷ್ಟಿಕ ಮತ್ತು ಮನೆಯಲ್ಲೇ ತಯಾರಿಸಿದ ಹೆಚ್ಚು ಹೆಚ್ಚು ತರಕಾರಿ ಮತ್ತು ಹಣ್ಣುಗಳನ್ನು ಒಳಗೊಂಡ ಆಹಾರ, ನಿಯಮಿತ ಸಮಯದ ಮೊಬೈಲ್ ಬಳಕೆ ಸರಿಯಾದ ನಿದ್ರೆ ಮತ್ತು ಒಳ್ಳೆಯ ವ್ಯಾಯಾಮ ಇವು ತೊಂದರೆಗಳನ್ನು ನಿವಾರಿಸಲು ಬಹುಪಾಲು ಸಹಾಯ ಮಾಡಬಲ್ಲವು …ಸಮಯವಾಗುವುದಿಲ್ಲ ಎಂಬುದು ಕೇವಲ ನೆವವಷ್ಟೆ. ಸಮಯವನ್ನ ಮಾಡಿಕೊಳ್ಳಬೇಕಾದವರು ನಾವೇ. ಮನುಷ್ಯನನ್ನ ಅತಿಯಾಗಿ ಕೊಲ್ಲುವುದು ಕಾರ್ಬೊನೇಟೆಡ್ ಫುಡ್,ಕೋಲ್ಡ್ ಡ್ರಿಂಕ್ಸ್ ಮತ್ತು ಬೇಕರಿ ಪದಾರ್ಥಗಳಲ್ಲ ….ಆತನ ಆಲಸಿಯಾದ ಮತ್ತು ವಿಲಾಸಿ ಜೀವನ ಶೈಲಿ. ಇದು ನಮಗೆ ಗೊತ್ತಿಲ್ಲ ಎಂದೆಲ್ಲ ಗೊತ್ತಿದೆ ಆದರೆ ಅಳವಡಿಸಿಕೊಳ್ಳುವುದು ಕಷ್ಟ ಎಂಬ ನಮ್ಮ ಭಾವನೆಯೇ ನಮ್ಮ ದೈಹಿಕ ತೊಂದರೆಗಳನ್ನು ಅನುಭವಿಸಲು ಕಾರಣ. ಇನ್ನು ಮಾನಸಿಕವಾಗಿ ಯುವತಿಯರು ವಿರುದ್ಧ ಲಿಂಗಿಗಳ ಜೊತೆ ಆಕರ್ಷಣೆಗೆ ಬೀಳ್ತಾರೆ. ಈ ಆಕರ್ಷಣೆ ಕೇವಲ ಕ್ರಷ
ಲೆವೆಲ್ನಲ್ಲಿದ್ದರೆ ಪರವಾಗಿಲ್ಲ ಆದರೆ ವಿಪರೀತಕ್ಕೆ ಇಟ್ಟುಕೊಳ್ಳಬಾರದು .ಈ ಸಮಯದಲ್ಲಿ ಅಂದರೆ ಹದಿಹರೆಯದಲ್ಲಿ ನಿಮ್ಮ ಮನಸ್ಸು ದೇಹ ನಿಮ್ಮ ಹಿಡಿತದಲ್ಲಿ ಇರಬೇಕು. ಮನಸ್ಸಿನ ಕೈಗೆ ಬುದ್ಧಿಯನ್ನು ಕೊಡದೆ ,ಬುದ್ಧಿಯ ಕೈಗೆ ಮನಸ್ಸನ್ನು ಕೊಟ್ಟು ನಿಮ್ಮ ವಿದ್ಯಾಭ್ಯಾಸವನ್ನು ಪೂರೈಸಿಕೊಳ್ಳಬೇಕು. ಶಿಕ್ಷಣ ಉದ್ಯೋಗ ಪ್ರೀತಿ ಮತ್ತು ವಿವಾಹ ಹೆಣ್ಣು ಮಕ್ಕಳ ಜೀವನದ ನಾಲ್ಕು ಹಂತ ಗಳು. ಈ ಯಾವುದೇ ಹಂತಗಳು ಹಿ0ದು ಮುಂದಾಗಬಾರದು.
So believe in yourself ,but not blindly.
ಇನ್ನೊಂದು ಕೊನೆಯ ಮಾತು ನಿಮ್ಮ ಶಿಕ್ಷಣದ ಕೊನೆಯ ಹಂತದಲ್ಲಿ ಇದ್ದೀರಿ. ಒಳ್ಳೆಯ ಉದ್ಯೋಗದ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು ಸಾಧನೆಯ ಹಾದಿ ನಿಮ್ಮದಾಗಬಹುದು ….ಆದರೆ ಈ ಸಾಧನೆಯ ಹಾದಿಯಲ್ಲಿ ನಿಮ್ಮ ಹಿಂದೆ ನಿಂತು ನಿಮ್ಮನ್ನು ಪ್ರೋತ್ಸಾಹಿಸಿದ ತಂದೆತಾಯಿಗಳನ್ನ ಸ್ನೇಹಿತರನ್ನ ಯಾರನ್ನು ಮರೆಯಬೇಡಿ ,ಏಕೆಂದ್ರೆ ತುಂಬಾ ಮೇಲೆ ಏರಿದಾಗ ವ್ಯಕ್ತಿಗೆ ಯಾರೂ ಕಾಣುವುದಿಲ್ಲವ೦ತೆ.ಅಷ್ಟು ಮೇಲೆ ಏರಿದಾಗ ಜೊತೆಗಾರರಿಲ್ಲದೆ ನಿಟ್ಟುಸಿರು ಬಿಡುವುದರ ಬದಲು ಒಬ್ಬರ ಕೈ ಒಬ್ಬರು ಹಿಡಿದು ಸುಖ ದುಃಖಗಳಲ್ಲಿ ಜೊತೆಯಾಗುವ ಬೆರಳೆಣಿಕೆಯಷ್ಟು ಸ್ನೇಹಿತರಾದರೂ ನಮಗೆ ಇರಬೇಕು. .ನಾನು ಪಲ್ಲಕ್ಕಿಯಲ್ಲಿ ಕುಳಿತಿದ್ದೇನೆ ಎಂದಮಾತ್ರಕ್ಕೆ ಬೆಲೆ ಆದರೆ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳಲು ಸಹಾಯ ಮಾಡಿದ ಪ್ರತಿಯೊಬ್ಬ ಜೀವಿಯ ಬಗೆಗೂ ನಮಗೆ ಕೃತಜ್ಞತೆ ಇರಬೇಕು. ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಅರುಣಿಮಾ ಸಿನ್ಹಾ ಎಂಬ ಅಂಗವಿಕಲ ಮಹಿಳೆ ತನ್ನ ಇಚ್ಛಾಶಕ್ತಿಯ ಬಲದ ಮೇಲೆ ಮೌಂಟ್ ಎವರೆಸ್ಟ್ ಪರ್ವತ ಏರಿದ ಬಳಿಕ ಮಾತನ್ನು ಹೇಳಿದಳು
ಅಭಿತೋ ಇಸ ಬಾಜ ಕೀ
ಅಸಲಿ ಉಡಾನ್ ಬಾಕಿ ಹೆ,
ಅಭಿ ಇಸ ಪರಿ೦ದೇ ಕೀ
ಇ೦ತೆಹಾನ್ ಬಾಕಿ ಹೆ.
ಅಭಿ ಅಭಿ ತೋ ಲಾಂಗಾ ಹೇ
ಮೈನೆ ಸಮಂದರೋ೦ ಕೋ ,
ಅಭಿ ಪೂರಾ ಆಸ್ಮಾನ್ ಬಾಕಿ ಹೇ
ಕೊನೆಯದಾಗಿ ಇನ್ನೊಂದು ಮಾತು
ನೀನು ನೀನಾಗಿರು, ನಿನ್ನನ್ನು ನೀನು ನಂಬು…. ನಿನ್ನದೇ ಉತ್ತಮಿಕೆಯ ಹಂತವನ್ನು ನೀನು ಕ್ರಮಿಸು…


