ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಣೆ | ಬೆಂಬಲಿಗರಿಂದ ಸಂಭ್ರಮಾಚರಣೆ | ಹಲ ನಾಯಕರ ಅಸಮಾಧಾನ
ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಆರ್ ಅಶೋಕ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಕರ್ನಾಟಕ ವಿಧಾನಸಭೆ ನಡೆದ 6 ತಿಂಗಳ ಬಳಿಕ ಬಿಜೆಪಿ ಕೊನೆಗೂ ವಿಪಕ್ಷ ನಾಯಕನ ಹೆಸರು ಘೋಷಣೆ ಮಾಡಿದೆ. ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಎರಡನೇ ದಿನದಲ್ಲೇ ಬಿಜೆಪಿ ವಿಪಕ್ಷ ನಾಯಕನ ಹೆಸರನ್ನೂ ಘೋಷಣೆ ಮಾಡಿದೆ.
ಆರ್. ಅಶೋಕ್ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕರಾಗಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕನಾಗಿರುವ ಅಶೋಕ ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕಂದಾಯ ಸಚಿವರಾಗಿ ಕೆಲಸ ಮಾಡಿದ್ದಾರೆ.
ಲಿಂಗಾಯತ ಸಮುದಾಯದ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರ ಮತಗಳನ್ನು ಸೆಳೆಯುವ ರಣತಂತ್ರವನ್ನು ಬಿಜೆಪಿ ಮಾಡಿತ್ತು.
ಈಗ ರಾಜ್ಯದ ಮತ್ತೊಂದು ಪ್ರಬಲ ಸಮುದಾಯವಾದ ಒಕ್ಕಲಿಗರ ಮತಗಳನ್ನು ಸೆಳೆಯಲು ಆರ್. ಅಶೋಕ ಅವರನ್ನು ವಿಪಕ್ಷ ನಾಯಕರನ್ನಾಗಿ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
*ಬೆಂಬಲಿಗರ ಸಂಭ್ರಮಾಚರಣೆ*
ಆರ್. ಅಶೋಕ ಅವರನ್ನು ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡುತ್ತಿದ್ದಂತೆ ಬೆಂಬಲಿಗರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ವಿಪಕ್ಷ ನಾಯಕರಾಗಿ ಆಯ್ಕೆಯಾವ ಅಶೋಕ್ ಅವರನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವು ಹಿರಿಯ ನಾಯಕರು ಅಭಿನಂದಿಸಿದರು.
ವಿಪಕ್ಷ ನಾಯಕನಾಗಿ ಆಯ್ಕೆಯಾದ ನಂತರ ಮಾತನಾಡಿದ ಆರ್. ಅಶೋಕ, ” ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಪಕ್ಷ ಬಲಪಡಿಸಲು ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ.” ಎಂದು ಹೇಳಿದ್ದಾರೆ.

