ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಪತ್ರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: 2026 ನೇ ಸಾಲಿನ ಬಜೆಟ್ ನಲ್ಲಿ ತಾವು ವಚನ ವಿಶ್ವ ವಿದ್ಯಾಲಯದ ಸ್ಥಾಪನೆಗೆ 25 ಎಕರೆ ಭೂಮಿ ನೀಡುವುದಾಗಿ ಘೋಷಣೆ ಮಾಡಿದ್ದು ಸಂತೋಷದ ವಿಚಾರ. ಆದರೆ ವಿಶ್ವ ವಿದ್ಯಾಲಯವು ಸರಕಾರಿ ವಿಶ್ವವಿದ್ಯಾಲಯ ಆಗಬೇಕೆ ಹೊರತು ಖಾಸಗಿ ಸಂಸ್ಥೆ ಅಥವಾ ಮಠಗಳು ನಡೆಸುವ ಸಂಸ್ಥೆ ಆಗಬಾರದು ಎಂದು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕೆಗೆ ಪತ್ರ ಬಿಡುಗಡೆ ಮಾಡಿದ ಅವರು, ಹೋದ ಸಲದ ಬಜೆಟ್ ನಲ್ಲಿ ನೀವು ಬೆಂಗಳೂರಿನಲ್ಲಿ ವಚನ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸುತ್ತೇನೆ ಎಂದು ಘೋಷಣೆ ಮಾಡಿದ್ದೀರಿ ಆದರೆ ಅದು ಇಲ್ಲಿಯವರೆಗೆ ಅನುಷ್ಠಾನಕ್ಕೆ ಬಂದಿಲ್ಲ.
ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ ವರದಿ ಆಧಾರಿತ ಸರಕಾರದ ನಿರ್ಣಯದ ಪ್ರಸ್ತಾವನೆ ಲಿಂಗಾಯತ ಧರ್ಮದ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಬೇಡಿಕೆಗೆ ಪೂರಕ ಪರಿಹಾರ ಇನ್ನೂ ದೊರಕಿಲ್ಲ.
ಕೇಂದ್ರ ಸರ್ಕಾರದ ಅಲ್ಪ ಸಂಖ್ಯಾತ ಕಾರ್ಯಾಲಯಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ನಿರ್ಣಯದ ಪ್ರಸ್ತಾವನೆಯ ಅರ್ಜಿಯನ್ನು ಮರು ಸಲ್ಲಿಸಲು ಅವಕಾಶವಿದ್ದು ಅದನ್ನು ಮಾಡಲು ಮೀನ ಮೇಷ ಏಕೆ? ಎಂದು ಸಿಎಂ ಗೆ ಪ್ರಶ್ನಿಸಿದ್ದಾರೆ.
ಸರಕಾರಿ ಘೋಷಣೆ ಕೇವಲ ಘೋಷಣೆ ಆಗಿ ಉಳಿಯದೆ ಕಾರ್ಯಗತವಾಗಬೇಕು.
ವಿಜಯಪುರದ ಅಕ್ಕ ಮಹಾದೇವಿ ವಿಶ್ವ ವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ. ಕರ್ನಾಟಕದ ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ ಬಸವ ಅಧ್ಯಯನ ಪೀಠ ಸ್ಥಾಪಿಸಿರಿ. ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿರುವ ಅಕ್ಕ ಮಹಾದೇವಿ ಬೆತ್ತಲೆ ಪುತ್ಥಳಿಯನ್ನು ಈ ಕೂಡಲೇ ತೆರವುಗೊಳಿಸಲು ವಿಜಯಪುರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲು ಕೋರಿಕೆ. ಯಾವುದೇ ಕಾರಣಕ್ಕೂ ವಚನ ವಿಶ್ವವಿದ್ಯಾಲಯ ಖಾಸಗಿ ಸ್ವಾಮ್ಯತೆಗೆ ಅನುಕೂಲ ಮಾಡಿ ಕೊಡುವ ಉದ್ದೇಶ ಬಿಟ್ಟು ವಿಜಯಪುರದಲ್ಲಿ ಸರಕಾರಿಯ ವಚನ ವಿಶ್ವ ವಿದ್ಯಾಲಯ ಸ್ಥಾಪಿಸಿ ನಿಮ್ಮ ಬಸವಾಭಿಮಾನವನ್ನು ಮೆರೆಯಲು ಸಮಗ್ರ ಬಸವ ಭಕ್ತರ ಪರವಾಗಿ ವಿನಂತಿಸುವುದಾಗಿ ಡಾ.ಪಟ್ಟಣ ಪತ್ರದಲ್ಲಿ ತಿಳಿಸಿದ್ದಾರೆ.

