ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ
ಸಿಂದಗಿ: ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಜಗತ್ತಿಗೆ ಸಮಾನತೆ, ಮಾನವೀಯತೆ ಹಾಗೂ ಶ್ರೇಷ್ಠ ಜೀವನ ಮೌಲ್ಯವನ್ನು ಕಲಿಸಿಕೊಟ್ಟ ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಮೆರಗು ಕಡಿಮೆಯಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಜ್ಯೋತಿ ನಗರದ ಜ್ಯೋತಿ ಕಲ್ಯಾಣ ಮಂಟಪದಲ್ಲಿ ನಬಿರೋಶನ ಪ್ರಕಾಶನ್ ಬೋರಗಿ, ಮಂದಾರ ಪ್ರತಿಷ್ಠಾನ ಹಾಗೂ ಆಲಮೇಲ ಶಾಫಿಯಾ ಪ್ರಕಾಶನ ಶನಿವಾರ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡದ ಮೇಲೆ, ಅಭಿಮಾನ ಮೂಡಿದಾಗ ಮಾತ್ರ ಕನ್ನಡ ಭಾಷೆ ಉಚ್ಛ್ರಾಯ ಸ್ಥಿತಿಗೆ ತಲುಪಲು ಸಾಧ್ಯ ಎಂದು ಹೇಳಿದರು.
ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ ಕನ್ನಡ ಸಾಹಿತ್ಯ ಮತ್ತು ಭಾಷೆಗೆ ತನ್ನದೆಯಾದ ಸಂಪತ್ಬರಿತ ಸಾಂಸ್ಕೃತಿಕ ಇತಿಹಾಸ ಹೊಂದಿದೆ ಹೀಗಾಗಿಯೇ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ದೊರೆತಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಪ.ಗು ಸಿದ್ಧಾಪುರ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಕಸಾಪ ನಿಕಟಪೂರ್ವ ತಾಲೂಕಾಧ್ಯಕ್ಷ ಸಿದ್ಧಲಿಂಗ ಚೌಧರಿ ಪ್ರಾಸ್ತಾವಿಕ ಮಾತನಾಡಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸುವರ್ಣ ಕರ್ನಾಟಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ವೇಳೆ ೨೫ಕ್ಕೂ ಅಧಿಕ ಕವಿಗಳು ತಮ್ಮ ಕವನ ವಾಚಿಸಿದರು.
ವೇದಿಕೆಯ ಮೇಲೆ ಸಿಂದಗಿ ವೃತ್ತ ಪೊಲೀಸ್ ನಿರೀಕ್ಷಕ ಡಿ.ಹುಲುಗಪ್ಪ, ಆರಕ್ಷಕ ಮೌಲಾಲಿ ಆಲಗೂರ, ಡಾ.ಸಮೀರ ಹಾದಿಮನಿ, ಮಡಿವಾಳಪ್ಪ ಪಾಟೀಲ್, ಶಕುಂತಲಾ ಹಿರೇಮಠ, ನಬಿ ಆಲಗೂರ, ನಬಿ ಸೊನ್ನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿ.ಪಿ. ಬಿರಾದಾರ ಸ್ವಾಗತಿಸಿದರು. ಬಸವರಾಜ ಅಗಸರ ವಂದಿಸಿದರು.