ವಿಜಯಪುರ: ಮುಂಗಾರು ಹಂಗಾಮಿಗೆ ಕಾಲುವೆ ಜಾಲದಡಿಯಲ್ಲಿ ನೀರು ಹರಿಸುವ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ನವ್ಹೆಂಬರ್ ೨೭ ರಿಂದ ಡಿ.೧೨ರವರೆಗೆ ಒಟ್ಟು ೧೫ ದಿನಗಳ ನೀರು ಹರಿಸುವ ಅವಧಿ ನಿಗದಿಗೊಳಿಸಲು ನಿರ್ಧಾರ ಪ್ರಕಟಿಸಲಾಯಿತು.
ಇಂಡಿ ತಾಲೂಕಿನ ಹೊರ್ತಿಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಧ್ಯಕ್ಷತೆಯಲ್ಲಿ ಕಾಲುವೆಗಳಿಗೆ ನೀರು ಬಿಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ನಿರ್ಧರಿಸಲಾಯಿತು.
ಕೃಷ್ಣ ಮೇಲ್ದಂಡೆ ಯೋಜನೆಯ ೨೦೨೩-೨೪ ನೇ ಸಾಲಿನ ಮುಂಗಾರು ಹಂಗಾಮಿಗೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸಲಹಾ ಸಮಿತಿ ನಿರ್ದೇಶನದಂತೆ ಕಳೆದ ಅಕ್ಟೋಬರ್ ೧೪ ರಿಂದ ನವ್ಹೆಂಬರ್ ೧೮ರವರೆಗೆ ಕಾಲುವೆ ಜಾಲಗಳಲ್ಲಿ ನೀರು ಹರಿಸಲಾಗುತ್ತಿದ್ದು, ತದನಂತರ ನವ್ಹೆಂಬರ್ ೧೯ ರಿಂದ ನ.೨೬ ರವರೆಗೆ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ಇತ್ತೀಚಿಗೆ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಚ್ಚುಕಟ್ಟು ಪ್ರದೇಶದ ಮುಂಗಾರು ಬೆಳೆಗಳಿಗೆ ನಿಗದಿಪಡಿಸಿ ಬಾಕಿ ಇರುವ ನೀರಿನ ಪ್ರಮಾಣವನ್ನು ತಮ್ಮ ವ್ಯಾಪ್ತಿಯಲ್ಲಿ ಬರುವ ರೈತರು ಜನಪ್ರತಿನಿಗಳೊಂದಿಗೆ ಚರ್ಚಿಸಿ ಕಾಲುವೆಗಳಲ್ಲಿ ನೀರು ಹರಿಸುವ ನಿಟ್ಟಿನಲ್ಲಿ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಚರ್ಚಿಸಲಾಯಿತು.ನವ್ಹೆಂಬರ್ ೧೧ ರವರೆಗೆ ನೀರನ್ನು ಕಾಲುವೆಗಳಲ್ಲಿ ಹರಿಸಿ ತದನಂತರ ೧೫ ದಿನಗಳ ಬಂದ್ ನಂತರ ೧೫ ದಿನಗಳ ಚಾಲು ನೀತಿ ಅನುಸರಿಸುವುದು ಸೂಕ್ತ ಎಂಬ ಸಲಹೆಯೂ ಕೇಳಿಬಂದಿತು.
ಸಭೆಯಲ್ಲಿ ಕೆಬಿಜೆಎನ್ ಎಲ್ ರಾಂಪೂರ ವಲಯದ ಮುಖ್ಯ ಅಭಿಯಂತರ ಎಚ್. ರವಿಶಂಕರ, ಜಿ.ಪಂ. ಸಿಇಒ ರಾಹುಲ್ ಶಿಂಧೆ, ಎಸ್.ಪಿ. ಹೃಷಿಕೇಶ ಸೋನಾವನೆ, ಕೃಭಾಜನಿನಿ ಅಧೀಕ್ಷಕ ಅಭಿಯಂತರ ಮನೋಜ್ ಕುಮಾರ ಗಡಬಳ್ಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಉಪಸ್ಥಿತರಿದ್ದರು.
Related Posts
Add A Comment