ಬರ ನಿರ್ವಹಣೆ ಹಾಗೂ ಕುಡಿವ ನೀರಿನ ಅನುಷ್ಟಾನ ಕುರಿತ ವೀಡಿಯೋ ಸಂವಾದ ಸಭೆಯಲ್ಲಿ ಡಿಸಿ ಟಿ.ಭೂಬಾಲನ್ ಸೂಚನೆ
ವಿಜಯಪುರ: ಜಿಲ್ಲೆಯಲ್ಲಿ ಬರದ ಛಾಯೆ ಇರುವುದರಿಂದ ಕುಡಿಯುವ ನೀರಿನ ತೊಂದರೆಯಾಗದಂತೆ ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಬೂಬಾಲನ್ ಹೇಳಿದರು.
ಗುರುವಾರ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಅನುಷ್ಟಾನ ಕುರಿತ ವಿಡಿಯೋ ಸಂವಾದದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ್ದು ಮುಂಬರು ದಿನಗಳಲ್ಲಿ ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಈಗಿನಿಂದಲೇ ಕ್ರಮ ವಹಿಸಬೇಕು ಹಾಗೂ ಕುಡಿಯುವ ನೀರಿಗೆ ಪ್ರಥಮ ಆಧ್ಯತೆ ನೀಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿಯೂ ಕುಡಿಯುವ ನೀರು ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಬೇಕು. ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಯ ಎಲ್ಲ ಕೆರೆಗಳಿಗೆ ನೀರು ಹರಿಸಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಬರ ಹಾಗೂ ಕುಡಿಯುವ ನೀರಿನ ಕುರಿತು ಮಾನ್ಯ ಮುಖ್ಯಮಂತ್ರಿಗಳು ಜಿಲ್ಲಾ ಆಡಳಿತದೊಂದಿಗೆ ಸತತ ಸಂಪರ್ಕ ಸಾಧಿಸಿ ವಿವರವನ್ನು ಪಡೆದಿದ್ದು, ಜಿಲ್ಲಾಡಳಿತ ಕೂಡ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು ಮನವರಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಕುಡಿಯುವ ನೀರಿನ ಅಭಾವವಾಗಂತೆ ಕಾಲುವೆ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಕಾಲುವೆಗಳಿಂದ ನೀರು ಎತ್ತುತ್ತಿರುವ ಕುರಿತು ಕಂಡು ಬಂದಿದ್ದು, ತೀವ್ರ ನಿಗಾ ಇರಿಸಿ ಅಕ್ರಮವಾಗಿ ನೀರು ಎತ್ತುವುದನ್ನು ತೆರವುಗೊಳಿಸಿ ಪಂಪಸೆಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಹಾಗೂ ಅಂತಹವರ ವಿರುದ್ದ ದೂರು ದಾಖಲಿಸಬೇಕು. ಎಲ್ಲ ತಾಲೂಕುಗಳಲ್ಲಿ ಟಾಸ್ಕಫೋರ್ಸ್ ಸಭೆಗಳನ್ನು ಕರೆದು ಕುಡಿಯುವ ನೀರಿನ ಕುರಿತು ತೊಂದರೆಯಾಗದಂತೆ ಅಧಿಕಾರಿಗಳು ತಂಡಗಳನ್ನು ರಚಿಸಿ ಪ್ರತಿನಿತ್ಯ ಕಾಲುವೆಗಳ ಮೇಲೆ ಸಂಚರಿಸಿ ನಿಗಾ ಇಡಬೇಕು ಹಾಗೂ ಅಧಿಕಾರಿಗಳು ಸಮನ್ವಯ ಸಾಧಿಸಿ ಕುಡಿಯುವ ನೀರಿನ ತೊಂದರೆ ಕಂಡು ಬಂದಲ್ಲಿ ತ್ವರಿತಗತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಂಡು ನೀರು ಪೂರೈಕೆಗೆ ಕ್ರಮ ವಹಿಸಬೇಕು. ಯಾವುದೇ ಸಂದರ್ಭದಲ್ಲಿ ನೀರು ಪೋಲಾಗದಂತೆ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ಗ್ರಾಮದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕೆರೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಯಾವುದೇ ಸಮಸ್ಯೆಗಳು ಬಂದಲ್ಲಿ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ಅವರು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಋಷಿಕೇಶ ಸೊನವಾನೆ ಅವರು ಮಾತನಾಡಿದರು.
ವಿಡೀಯೋ ಸಂವಾದ ಸಭೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಇಂಜಿನೀಯರ ಶ್ರೀನಿವಾಸ, ಕೃಷ್ಣಾ ಭಾಗ್ಯ ಜಲ ನಿಗಮದ ರಾಂಪುರ ವಿಭಾಗದ ಮುಖ್ಯ ಇಂಜಿನೀಯರ ಎಚ್ ರವಿಶಂಕರ, ಕರ್ನಾಟಕ ನೀರಾವರಿ ನಿಗಮದ ಇ.ಇ. ಎಚ್.ಜಿ ಶ್ರೀನಾಥ, ಡ್ಯಾಂ ವಿಭಾಗದ ಇ.ಇ ಬಸವರಾಜ, ಹೆಸ್ಕಂ ಮುಖ್ಯ ಅಭಿಯಂತರರಾದ ಗೋಟ್ಯಾಳ, ಉಪವಿಭಾಗಾಧಿಕಾರಿ ಕಲಶೆಟ್ಟಿ, ತಹಶೀಲ್ಧಾರರು, ತಾಲೂಕು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ನೀರಾವರಿ ಇಲಾಖೆ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಕೋಶ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.