ಲೋಕಾಯುಕ್ತ ವಿಜಯಪುರ ಇವರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ದೇವರಹಿಪ್ಪರಗಿ: ಭ್ರಷ್ಟಾಚಾರರಹಿತ ಆಡಳಿತದ ಅಗತ್ಯತೆ ಇಂದು ಹೆಚ್ಚಾಗಿದೆ. ಆದ್ದರಿಂದ ನಾವು ಯಾವುದೇ ಕಾರಣ ಭ್ರಷ್ಟಾಚಾರದ ಭಾಗವಾಗಬಾರದು ಎಂದು ವಿಜಯಪುರ ಲೋಕಾಯುಕ್ತ ಡಿವೈಎಸ್ಪಿ ಸುರೇಶ ರೆಡ್ಡಿ ಹೇಳಿದರು.
ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಗುರುವಾರ ಜರುಗಿದ ಕರ್ನಾಟಕ ಲೋಕಾಯುಕ್ತ ವಿಜಯಪುರ ಇವರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಒಳ್ಳೆಯವರು ಇದ್ದಾರೆ. ಹಾಗೂ ಕೆಟ್ಟವರು ಇದ್ದಾರೆ. ಆದರೆ ಸರ್ಕಾರದ ಕೆಲಸ ದೇವರ ಕೆಲಸ ಎಂದು ತಿಳಿದು ಒಳ್ಳೆಯವರು ಯಾವುದೇ ಆಮಿಷಗಳಿಗೆ ಒಳಗಾಗದೇ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಲೋಕಾಯುಕ್ತ ಉಪಅಧೀಕ್ಷಕ ಆನಂದ ಟಕ್ಕಣ್ಣವರ ಮಾತನಾಡಿ, ಲೋಕಾಯುಕ್ತದ ವ್ಯಾಪ್ತಿ, ಅದರ ಮಹತ್ವ, ಕಾರ್ಯಗಳು, ಉದ್ದೇಶಗಳ ಕುರಿತು ಸಮಗ್ರವಾಗಿ ಮಾಹಿತಿ ಮಾತನಾಡಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಎಚ್.ವೈ. ಸಿಂಗೇಗೋಳ, ಅಬಕಾರಿ ಇಲಾಖೆಯ ಆರತಿ ಖೈನೂರ, ಶಿಕ್ಷಣ ಇಲಾಖೆಯ ಆರೀಫ್ ಬಿರಾದಾರ, ತೋಟಗಾರಿಕೆ ಇಲಾಖೆಯ ರಾಘವೇಂದ್ರ ಬಗಲಿ, ಆರೋಗ್ಯ ಇಲಾಖೆಯ ಸಂತೋಷ ಯಡಹಳ್ಳಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ ಮಾತನಾಡಿ ತಮ್ಮ ವ್ಯಾಪ್ತಿಯ ಇಲಾಖೆಗಳಲ್ಲಿ ಯೋಜನೆಗಳು, ಕೈಗೊಂಡ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಸಾರ್ವಜನಿಕರ ಪರವಾಗಿ ಪ್ರಭುಗೌಡ ಪಾಟೀಲ (ಹರನಾಳ), ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅಜೀಜ್ ಯಲಗಾರ, ನಾಗಯ್ಯ ಪಂಚಾಳಮಠ ಸೇರಿದಂತೆ ಹಲವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಪಟ್ಟಣದ ಹಳೇಶಾಲೆಯ ಪುನಶ್ಚೇತನ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು.
ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಬರುವ ಒಂದು ತಿಂಗಳಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ, ವ್ಯವಸ್ಥೆ ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಲೋಕಾಯುಕ್ತ ಸಿಪಿಆಯ್ ಆನಂದ ಡೋಣಿ, ತಹಶೀಲ್ದಾರ ಪ್ರಕಾಶ ಸಿಂದಗಿ, ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚಲುವಯ್ಯ ಸೇರಿದಂತೆ ದೇವರಹಿಪ್ಪರಗಿ, ಸಿಂದಗಿ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಇದ್ದರು.