ಆರ್ಗಾನೋ ಪಾಸ್ಪರಸ್ ಕಂಪೌಂಡ್‌ನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಯಶಸ್ವಿ ಚಿಕಿತ್ಸೆ ನೀಡಿದ ವೈದ್ಯರು
ವಿಜಯಪುರ: “ಇನ್ನೇನು ನನ್ನ ಮಗನ ಬದುಕು ಇಲ್ಲಿಗೆ ಮುಗಿಯಿತು ಎಂದುಕೊಂಡು ಕಣ್ಣೀರು ಹಾಕುತ್ತ ಈ ಆಸ್ಪತ್ರೆಗೆ ಬಂದಾಗ “ಕಾಯುವುದು ಕೊಲ್ಲುವುದು ಅದು ಮೇಲಿನವನ ಕೈಯಲ್ಲಿದೆ. ಬದುಕುತ್ತಾನೆ ಎನ್ನುವ ಭರವಸೆಯಿಂದ ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಮುಂದಿನ ಭಗವಂತನ ಮೇಲೆ ಬಿಡೋಣ” ಎಂದು ಹೇಳಿದಾಗ ನನ್ನ ಮಗ ಉಳಿಯಬಹುದು ಎನ್ನುವ ಒಂದು ಸಣ್ಣ ಭರವಸೆಯಲ್ಲಿ ಈ ದಾಖಲು ಮಾಡಿದೆ. ನಡೆದಾಡುವ ದೇವರ ಹೆಸರಲ್ಲಿ ನಿರ್ಮಾಣ ಮಾಡಿದ ಈ ಆಸ್ಪತ್ರೆಯು ನನ್ನ ಮಗನಿಗೆ ಪುನರ್ಜನ್ಮ ನೀಡಿದೆ. ಸಾವಿನ ಮನೆಯ ಬಾಗಿಲಿನ ಮುಂದೆ ನಿಂತು ಕದ ತಟ್ಟುತ್ತಲಿದ್ದವನನ್ನು ಬದುಕಿನ ಅಂಗಳಕ್ಕೆ ತಂದು ಬಿಟ್ಟ ಆಸ್ಪತ್ರೆಯ ವೈದ್ಯರಿಗೆ ಹಾಗೂ ಇಲ್ಲಿನ ಸಿಬ್ಬಂಧಿಗಳಿಗೆ ನಾನು ಚಿರಋಣಿಯಾಗಿರುತ್ತೇನೆ. ಬಹುತೇಕ ಸತ್ತೇ ಹೋದವನನ್ನು ಬದುಕಿಸುವ ಶಕ್ತಿ ಈ ಆಸ್ಪತ್ರೆಗಿದೆ. ಪೂಜ್ಯರ ಆಶೀರ್ವಾದಕ್ಕಿದೆ” ಎಂದು ಕಣ್ಣಂಚಿಂದ ಜಿನುಗುತ್ತಲಿದ್ದ ಹನಿಯನ್ನು ಒರೆಸಿಕೊಳ್ಳುತ್ತ ಆಸ್ಪತ್ರೆಯಲ್ಲಿ ದೊರೆತ ಚಿಕಿತ್ಸೆಯ ಕುರಿತು ರೋಗಿಯ ತಂದೆ ಮಾಹಿತಿ ನೀಡುವಾಗ ಸುತ್ತಲಿದ್ದವರು ಸಹ ಕಣ್ಣೀರಾದ ಘಟನೆ ನಡೆದಿದ್ದು ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ.
ವೈಯಕ್ತಿಕ ಕಾರಣಗಳಿಂದ ವಿಷ ಸೇವನೆ ಮಾಡಿ ಆಸ್ಪತ್ರೆಗೆ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ದಾಖಲಾಗಿದ್ದ ಕಲ್ಲಪ (ಹೆಸರು ಬದಲಿಸಲಾಗಿದೆ) ಎನ್ನುವ ವ್ಯಕ್ತಿಯು ಅದಗಲೇ ಸಾವಿನ ಅಂಚಿನಲ್ಲಿದ್ದ. ವಿಷ ಸೇವಿಸಿದ್ದನ್ನು ಗಮನಿಸಿ ನಗರದ ವಿವಿಧ ಆಸ್ಪತ್ರೆಗಳಿಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ ಮನೆಯವರಿಗೆ ಇವರ ಬದುಕಿನ ಕುರಿತು ಯಾವುದೇ ಭರವಸೆ ದೊರೆಯಲಿಲ್ಲ. ವಿಷದ ಪರಿಣಾಮ ಮೆದುಳಿನ ಮೇಲೆ ಆಗಿದ್ದರಿಂದ ಈ ವ್ಯಕ್ತಿ ಬದುಕುಳಿಯುವುದು ಬಹುತೇಕ ಅಸಾಧ್ಯ. ಒಂದು ವೇಳೆ ಬದುಕುಳಿದರು ಬಹು ಅಂಗಾಗ ವೈಫಲ್ಯಕ್ಕೆ ತುತ್ತಾಗಬಹುದು. ಹೀಗಿದ್ದರೂ ಸುಮ್ಮನೆ ಹಣವನ್ನು ಖರ್ಚು ಮಾಡುತ್ತಿರುವಿರಿ ಸುಮ್ಮನೆ ಮನೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದಾಗ ದಾರಿ ಕಾಣದೇ ಆ ವ್ಯಕ್ತಿಯ ತಂದೆ ಜೆಎಸ್‌ಎಸ್ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಬಂದಿದ್ದಾರೆ. ಪರೀಕ್ಷೆ ಮಾಡಿದ ವೈದ್ಯರು ನಮ್ಮ ಕೈಲಾದ ಪ್ರಯತ್ನವನ್ನು ಮಾಡೋಣ ಎಂದು ಹೇಳಿ ಐಸಿಯುಗೆ ದಾಖಲಿಸಿದ ನಂತರದಲ್ಲಿ ಸರಿ ಸುಮಾರು ಎರಡು ತಿಂಗಳ ಕಾಲ ನಿರಂತರ ಚಿಕಿತ್ಸೆಯನ್ನು ನೀಡಿ ಬದುಕುವುದು ಬಹುತೇಕ ವಿರಳ ಎನ್ನುವ ಪ್ರಕರಣವನ್ನು ಯಶಸ್ವಿ ಚಿಕಿತ್ಸೆ ಮೂಲಕ ರೋಗಿಯನ್ನು ಬದುಕಿಸಿದ್ದಾರೆ.
ಈ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಿ ಸಾವಿನಂಚಿನಲ್ಲಿರುವ ವ್ಯಕ್ತಿ ಗೆ ಜೀವದಾನ ಮಾಡಿದ್ದಕ್ಕಾಗಿ ವೈದ್ಯರು ಹಾಗೂ ಸಿಬ್ಬಂಧಿ ವರ್ಗದವರನ್ನು ನಗರ ಶಾಸಕರು ಹಾಗೂ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ಬಸನಗೌಡ ರಾ ಪಾಟೀಲ ಯತ್ನಾಳ ಹಾಗೂ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ ಅಭಿನಂದಿಸಿದ್ದಾರೆ.