ನೀರು ಪೋಲು ಮಾಡದೆ ಕೆಬಿಜೆಎನ್ನೆಲ್ ಅಧಿಕಾರಿಗಳೊಂದಿಗೆ ಸಹಕರಿಸಲು ಮನವಿ
ವಿಜಯಪುರ: ನೀರಾವರಿ ಬಳಕೆಗಾಗಿ ಲಭ್ಯವಾಗಬಹುದಾದ ನೀರಿನ ಪ್ರಮಾಣ ಕೇವಲ ೫ ಟಿ.ಎಂ.ಸಿ. ಮಾತ್ರ ಇದ್ದು, ಲಭ್ಯವಾಗುವ ನೀರಿನ ಪ್ರಮಾಣವು ಸಹ ಭಾಷ್ಪಿಕರಣಗೊಳ್ಳುವ ಸಂಭವನೀಯತೆ ಇರುವುದರಿಂದ ಅಗತ್ಯವಿರುವ ೭೫ ಟಿಎಂಸಿ ನೀರು ಲಭ್ಯವಿಲ್ಲದೇ ಇರುವುದರಿಂದ ೨೦೨೩-೨೪ನೇ ಸಾಲಿನ ಹಿಂಗಾರು ಹಂಗಾಮಿಗೆ ಕಾಲುವೆ ಜಾಲಕ್ಕೆ ನೀರು ಪೂರೈಸಲು ಸಾಧ್ಯವಾಗುವುದಿಲ್ಲವೆಂದು ತೀರ್ಮಾನಿಸಲಾಯಿತು.
ಮಂಗಳವಾರ ಆಲಮಟ್ಟಿಯಲ್ಲಿ ಅಬಕಾರಿ ಖಾತೆ ಸಚಿವರೂ ಆದ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಆರ್.ಬಿ.ತಿಮ್ಮಾಪುರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ೨೦೨೩-೨೪ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಧ್ಯ ಚಾಲ್ತಿಯಲ್ಲಿರುವ ವೇಳಾಪಟ್ಟಿಯಂತೆ ದಿನಾಂಕ : ೧೮-೧೧-೨೦೨೩ರ ವರೆಗೆ ಕಾಲುವೆ ಜಾಲಕ್ಕೆ ನೀರು ಪೂರೈಸುವುದನ್ನು ಚಾಲ್ತಿಯಲ್ಲಿಡಲಾಗುವುದು. ತದನಂತರ, ದಿನಾಂಕ : ೧೯-೧೧-೨೦೨೩ ರಿಂದ ೨೬-೧೧-೨೦೨೩ರವರೆಗೆ ೮ ದಿನ ಕಾಲುವೆ ಜಾಲಕ್ಕೆ ನೀರು ಪೂರೈಸುವುದನ್ನು ಸ್ಥಗಿತಗೊಳಿಸಲಾಗುವುದು. ತದನಂತರ, ದಿನಾಂಕ : ೨೭-೧೧-೨೦೨೩ ರಿಂದ ೦೪-೧೨-೨೦೨೩ರವರೆಗೆ ೮ ದಿನಗಳಿಗೆ ಕಾಲುವೆ ಜಾಲಗಳಿಗೆ ನೀರು ಪೂರೈಸುವುದನ್ನು ಮಿತವ್ಯಯ ಸಾಧಿಸಿ ಕೊನೆಯ ಅಂಚಿನವರೆಗೆ ನೀರು ಪೂರೈಸಲು ಅನುಕೂಲವಾಗುವಂತೆ ಹೆಚ್ಚುವರಿ ದಿನಗಳಿಗೆ ವಿಸ್ತರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಇಂತಹ ಸಂಕಷ್ಟದ ಸಮಯದಲ್ಲಿ ರೈತರು ನೀರು ಪೋಲು ಮಾಡದೆ ಕೃಷ್ಣಾಭಾಗ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಸಹಕರಿಸಲು ವಿನಂತಿಸಲಾಯಿತು.
ಹಿಂಗಾರು ಹಂಗಾಮಿಗೆ ೨೦೨೩-೨೪ನೇ ಸಾಲಿನಲ್ಲಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ದಿನಾಂಕ: ೧೪-೦೮-೨೦೨೩ರಂದು ಕ್ಷೀಣವಾಗಿದ್ದು, ದಿನಾಂಕ : ೧೩-೧೦-೨೦೨೩ರಂದು ಸಂಪೂರ್ಣವಾಗಿ ಸ್ಥಗಿತವಾಗಿದೆ. ದಿನಾಂಕ : ೦೫-೧೨-೨೦೨೩ ರಂದು ಆಲಮಟ್ಟಿ ಜಲಾಶಯದ ಮಟ್ಟವೂ ಅಂದಾಜು ೫೧೩ ಮೀಟರ್‌ಗೆ ಬರಬಹುದಾಗಿದೆ. ಅಂದು ಒಟ್ಟು ಸಂಗ್ರಹಣೆ ೫೦ ಟಿ.ಎಂ.ಸಿ. ಆಗಬಹುದಾಗಿದ್ದು, ಇದರಲ್ಲಿ ಜೀವಜಲ ೩೨ ಟಿಎಂಸಿ ಹಾಗೂ ನಾರಾಯಣಪುರ ಜಲಾಶಯದ ಜೀವಜಲ ೧೨ ಟಿಎಂಸಿ ಒಟ್ಟು ೪೪ ಟಿಎಂಸಿ ಜೀವಜಲ ಲಭ್ಯವಾಗಬಹುದಾಗಿದ್ದು,ಡಿ. ೫ ರಿಂದ ಜೂನ್ ೩೦.೨೦೨೪ರ ವರೆಗೆ ಕುಡಿಯುವ ನೀರು, ಕೆರೆಗಳನ್ನು ತುಂಬಿಸುವುದು, ಕಾಲುವೆಗಳ ಮುಖಾಂತರ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಪೂರೈಸುವುದು, ಮತ್ತು ಉಷ್ಣ ವಿದ್ಯುತ್ ಸ್ಥಾವರಗಳಿಗೆ ಹಾಗೂ ಕೈಗಾರಿಕೆಗಳಿಗೆ, ಬ್ಯಾರೇಜ್‌ಗಳಲ್ಲಿ ನೀರಿನ ಸಂಗ್ರಹಣೆ, ರೈತರ ಹಿನ್ನೀರಿನ ಬಳಕೆ ಸೇರಿದಂತೆ ಈ ಮೊದಲು ಕಾಯ್ದಿರಿಸಿಕೊಂಡ ೩೭,೨೫ ಟಿ.ಎಂ.ಸಿ. ಬದಲಾಗಿ ಸಭೆಯಲ್ಲಿ ಚರ್ಚಿಸಿ ಅಂದಾಜು ೪೦.೦೦ ಟಿ.ಎಂ.ಸಿ. ನೀರನ್ನು ಕಾಯ್ದಿರಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ, ಅವಳಿ ಜಿಲ್ಲೆಯ ಶಾಸಕರುಗಳಾದ ಸಿ.ಎಸ್.ನಾಡಗೌಡ, ಜೆ.ಟಿ.ಪಾಟೀಲ, ಪಿ.ಎಚ್.ಪೂಜಾರ, ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ಯಶವಂತರಾಯಗೌ ಪಾಟೀಲ, ವಿಜಯಾನಂದ ಕಾಶಪ್ಪನವರ, ಹಣಮಂತ ನಿರಾಣಿ, ಜಗದೀಶ ಗುಡಗಂಟಿ, ರಾಜಾ ವೆಂಕಟಪ್ಪ ನಾಯಕ, ಶ್ರೀಮತಿ ಕರಿಯಮ್ಮ ನಾಯಕ್, ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್, ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ, ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮೀನಭಾವಿ, ಭೀಮರಾಯನಗುಡಿ ಕಾಡಾ ಆಡಳಿತಾಧಿಕಾರಿ ಮುಕ್ಕಣ್ಣ ನಾಯಕ್, ಆಲಮಟ್ಟಿ ಆಣೆಕಟ್ಟು ಮುಖ್ಯ ಅಭಿಯಂತರ ಎಚ್.ಎನ್.ಶ್ರೀನಿವಾಸ, ನಾರಾಯಣಪುರ ಮುಖ್ಯ ಅಭಿಯಂತರ ಮಂಜುನಾಥ್, ಸದಸ್ಯ ಕಾರ್ಯದರ್ಶಿಗಳೂ ಹಾಗೂ ಮುಖ್ಯ ಅಭಿಯಂತರ ಭೀಮರಾಯನಗುಡಿ ಪ್ರೇಮಸಿಂಗ್, ಆಲಮಟ್ಟಿ ಅಧೀಕ್ಷಕ ಅಭಿಯಂತರ ಬಿ.ಬಸವರಾಜ್ ಉಪಸ್ಥಿತರಿದ್ದರು.