ಮುದ್ದೇಬಿಹಾಳ: ತಾಲೂಕಿನ ಮಲಗದಿನ್ನಿ ಕೆರೆ ತುಂಬುವಂತೆ ಮತ್ತು ಕೆರೆಗೆ ಕಾಲುವೆ ಮೂಲಕ ಬರುವ ನೀರನ್ನು ತಡೆಹಿಡಿದಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಯುವಜನಸೇನೆಯ ಪದಾಧಿಕಾರಿಗಳು ಕೆಬಿಜೆಎನ್‌ಎಲ್ ನ ಎಎಲ್‌ಬಿಸಿಯ ಇಇ ರಾಮನಗೌಡ ಹಳ್ಳೂರ ಮತ್ತು ತಹಶೀಲ್ದಾರಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಸಂಘಟನೆಯ ತಾಲೂಕು ಸಂಚಾಲಕ ಮುತ್ತು ಟಕ್ಕಳಕಿ ಮಾತನಾಡಿ, ಕೆರೆ ತುಂಬುವ ಯೋಜನೆಯಡಿ ಮಲಗಲದಿನ್ನಿ ಕೆರೆಗೆ ವರ್ಷದಲ್ಲಿ ನಾಲ್ಕು ತಿಂಗಳು ನೀರು ಹರಿಸಬೇಕೆನ್ನುವ ನಿಯಮ ಇದೆ. ಆದರೆ ಈ ನಿಯಮ ಪಾಲನೆಯಾಗುತ್ತಿಲ್ಲ. ಕಾಲುವೆ ಮೂಲಕ ನೀರು ತುಂಬಿದರೂ ಕೆರೆಗ ಸೇರುತ್ತಿಲ್ಲ. ಕವಡಿಮಟ್ಟಿ ಮಾರ್ಗವಾಗಿ ಹಾಯ್ದು ಹೋಗಿರುವ ಮುಖ್ಯ ಕಾಲುವೆ ಮುಂದೆ ಮಲಗಲದಿನ್ನಿ ಕೆರೆಗೆ ಸೇರುತ್ತದೆ. ಕಾಲುವೆಯ ನೀರನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಡೆದಿದ್ದು ಮುಂದೆ ನೀರು ಬಾರದೇ ಇತ್ತ ಕೆರೆಯೂ ಸೇರದೇ ಪಟ್ಟಭದ್ರರಿಗೆ ಮಾತ್ರ ಉಪಯೋಗವಾಗುತ್ತಿದೆ. ಹಲವು ರೈತರು ಸೇರಿ ನೀರನ್ನು ತಡೆಹಿಡಿಯದಂತೆ ಮನವಿ ಮಾಡಲು ಹೋದಾಗ ಹಲ್ಲೆಗೆ ಮುಂದಾಗುತ್ತಾರೆ. ನೀರನ್ನು ತಡೆಹಿಡಿಯುವುದು ಸಂಪೂರ್ಣ ಕಾನೂನು ಬಾಹಿರವಾಗಿದ್ದು ತಪ್ಪಿತಸ್ಥರ ಮೇಲೆ ಕೂಡಲೇ ಕೆಬಿಜೆಎನ್‌ಎಲ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬುಧವಾರದಿಂದ ತಾಲೂಕಿನ ಅಡವಿ ಸೋಮನಾಳ ಕ್ರಾಸ್ ಬಳಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಸಂಘಟನೆಯ ಅಬ್ದುಲ ಡೋಣೂರ, ಹುಲಗಪ್ಪ ಹೊಸಮನಿ, ಚೇತನ ಚಿನ್ನಾಪೂರ, ಮಲ್ಲನಗೌಡ ಪಾಟೀಲ, ರೇವಣಸಿದ್ದ ಮೇಟಿ, ಅಶೋಕ ಉಂಡಿ, ಶಿವು ನಾಡಗೌಡ ಸೇರಿದಂತೆ ಮತ್ತಿತರರು ಇದ್ದರು.
Related Posts
Add A Comment